ಅಮರಾವತಿ: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರಿಗೆ ಎಲೆಕ್ಟ್ರಿಕ್ ಉಪಕರಣಗಳ ಬದಲು ಹೆಣವೊಂದು ಪಾರ್ಸಲ್‌ನಲ್ಲಿ ಬಂದ ಘಟನೆ ನಡೆದಿದೆ. ಇದರ ಜೊತೆಗೆ ₹1.3 ಕೋಟಿಗೆ ಬೇಡಿಕೆಯಿಟ್ಟಿರುವ ಪತ್ರ ಕೂಡ ದೊರೆತಿದ್ದು, ಮಹಿಳೆ ಆಘಾತಕ್ಕೆ ಒಳಗಾಗಿದ್ದಾರೆ. ಇಲ್ಲಿನ ಪಶ್ಚಿಮ ಗೋದಾವರಿಯ ಉಂಡಿ ಮಂಡಲದ ಯಂಡಗಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ನಾಗ ತುಳಸಿ ಎನ್ನುವ ಮಹಿಳೆ ಮನೆ ನಿರ್ಮಿಸಲು ಆರ್ಥಿಕ ಸಹಾಯಕ್ಕಾಗಿ ಕ್ಷತ್ರಿಯ ಸೇವಾ ಸಮಿತಿಗೆ ಅರ್ಜಿ ಸಲ್ಲಿಸಿದ್ದರು. ಮಹಿಳೆಯ ಮನವಿಯ ಮೇರೆಗೆ ಸಮಿತಿಯವರು ಆಕೆಗೆ ಟೈಲ್ಸ್ ಕೊಟ್ಟಿದ್ದರು. ಆಕೆ ಮತ್ತೆ ಹೆಚ್ಚಿನ ಸಹಾಯವನ್ನು ಮಾಡುವಂತೆ ಮನವಿ ಮಾಡಿದ್ದರು. ಈ ವೇಳೆ ಸಮಿತಿಯವರು ವಿದ್ಯುತ್ ಉಪಕರಣಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು. ಅರ್ಜಿದಾರರಿಗೆ ಲೈಟ್‌ಗಳು, ಫ್ಯಾನ್‌ಗಳು ಸ್ವಿಚ್‌ಗಳಂತಹ ವಸ್ತುಗಳನ್ನು ನೀಡುವುದಾಗಿ ವಾಟ್ಸ್ಯಾಪ್‌ನಲ್ಲಿ ಸಂದೇಶ ಬಂದಿತ್ತು. ಅದರಂತೆ ಗುರುವಾರ ರಾತ್ರಿ ಮಹಿಳೆಯ ಮನೆ ಬಾಗಿಲಿಗೆ ಪಾರ್ಸೆಲ್ ಬಂದಿತ್ತು.
ಪಾರ್ಸಲ್ ತಂದಿದ್ದ ವ್ಯಕ್ತಿಯು ಆಕೆಗೆ ಅದನ್ನು ತಲುಪಿಸಿ ಅದರಲ್ಲಿ ವಿದ್ಯುತ್ ಉಪಕರಣಗಳಿವೆ ಎಂದು ಹೇಳಿ ಅಲ್ಲಿಂದ ತೆರಳಿದ್ದಾನೆ. ಆದರಂತೆ ತುಳಸಿ ಪಾರ್ಸೆಲ್ ಓಪನ್ ಮಾಡಿದಾಗ ಮೃತ ದೇಹ ಪತ್ತೆಯಾಗಿದೆ. ಅದನ್ನು ಕಂಡು ಆಕೆ ಆಘಾತಕ್ಕೆ ಒಳಗಾಗಿದ್ದಳು. ಅಲ್ಲದೇ ಮೃತ ದೇಹದ ಜೊತೆಗೆ ಪತ್ರ ಕೂಡ ದೊರೆತಿದ್ದು, ‘ನಿನ್ನ ಗಂಡ 2008ರಲ್ಲಿ 3 ಲಕ್ಷ ರು. ಸಾಲ ಮಾಡಿದ್ದ. ಅದು ಬಡ್ಡಿ ಸೇರಿ ಈಗ 1.35 ಕೋಟಿ ರು.ಗೆ ಏರಿದೆ. ನೀನು ಈ ಎಲ್ಲ ಹಣ ನೀಡಬೇಕು, ಬೇಡಿಕೆ ವಿಫಲರಾದರೆ, ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಬರೆಯಲಾಗಿದೆ.
ಕೂಡಲೇ ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ ಹಾಗೂ ಶವವನ್ನು ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ದೇಹ ಸುಮಾರು 45 ವರ್ಷದ ಪುರುಷನದ್ದು ಎಂದು ಪೊಲೀಸರು ಹೇಳಿದ್ದಾರೆ.
ಕಾಕತಾಳೀಯ ಎಂದರೆ ಆಕೆಯ ಪತಿ 10 ವರ್ಷದ ಹಿಂದೆ ಮನೆ ಬಿಟ್ಟಿದ್ದ. ನಂತರ ಈಕೆಗೆ ಕ್ಷತ್ರಿಯ ಸಮಾಜದ ನಾಯಕನೊಬ್ಬ ವಿಧವೆ ಎಂದು ಭಾವಿಸಿ ಸಹಾಯ ಮಾಡುತ್ತಿದ್ದ. ಈಗ ಕ್ಷತ್ರಿಯ ಸಮಾಜದ ನಾಯಕನನ್ನು ವಿಚಾರಣೆ ಮಾಡಲಾಗುತ್ತಿದೆ. ಇನ್ನು ತುಳಸಿಯ ಅಳಿಯ ಕೆಲವು ದಿನದ ಹಿಂದೆ ನಾಪತ್ತೆ ಆಗಿದ್ದ. ಹೀಗಾಗಿ ಆತನ ಮೇಲೂ ಸಂದೇಹವಿದೆ.