ಆ್ಯಂಥ್ರೋಪಿಕ್‌ ಎಐನಿಂದ ವಿಶ್ವ ಟೆಕ್‌ ಲೋಕದಲ್ಲಿ ಬಿರುಗಾಳಿ!

Published : Feb 06, 2026, 07:17 AM IST
Artificial Intelligence

ಸಾರಾಂಶ

ಹೆಚ್ಚುತ್ತಿರುವ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌- ಎಐ (ಕೃತಕ ಬುದ್ಧಿಮತ್ತೆ) ಬಳಕೆಯಿಂದ ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿ ಇರುವ ಹೊತ್ತಿನಲ್ಲಿ ಭಾರತ ಸೇರಿದಂತೆ ಜಾಗತಿಕ ಐಟಿ ಕ್ಷೇತ್ರಕ್ಕೆ ಅಮೆರಿಕದ ಆ್ಯಂಥ್ರೋಪಿಕ್‌ ಅಭಿವೃದ್ಧಿಪಡಿಸಿರುವ ಎಐ ಟೂಲ್‌ ಒಂದು ಭಾರೀ ಶಾಕ್‌ ನೀಡಿದೆ.

ನವದೆಹಲಿ: ಹೆಚ್ಚುತ್ತಿರುವ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌- ಎಐ (ಕೃತಕ ಬುದ್ಧಿಮತ್ತೆ) ಬಳಕೆಯಿಂದ ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿ ಇರುವ ಹೊತ್ತಿನಲ್ಲಿ ಭಾರತ ಸೇರಿದಂತೆ ಜಾಗತಿಕ ಐಟಿ ಕ್ಷೇತ್ರಕ್ಕೆ ಅಮೆರಿಕದ ಆ್ಯಂಥ್ರೋಪಿಕ್‌ ಅಭಿವೃದ್ಧಿಪಡಿಸಿರುವ ಎಐ ಟೂಲ್‌ ಒಂದು ಭಾರೀ ಶಾಕ್‌ ನೀಡಿದೆ.

ಕಾರಣ ಇದು ಐಟಿ ವಲಯದ ಕಂಪನಿಗಳು ನೀಡುವ ಸೇವೆಯನ್ನು ತಾನೇ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಈ ಸೇವೆ ಸರಳ, ತ್ವರಿತ ಮತ್ತು ಅಗ್ಗವಾಗಿರಲಿದ್ದು ಐಟಿ ಉದ್ಯಮಗಳ ದೊಡ್ಡ ಪಾಲನ್ನು ಕಸಿಯುವ ಭೀತಿ ಹುಟ್ಟುಹಾಕಿದೆ. ಹೀಗಾಗಿ ಈ ಟೂಲ್‌ ಬಿಡುಗಡೆ ಬೆನ್ನಲ್ಲೇ ಕೆಲ ದಿನಗಳಿಂದ ಭಾರತ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಪ್ರಮುಖ ಐಟಿ ಕಂಪನಿಗಳ ಷೇರು ಮೌಲ್ಯ ಭಾರೀ ಕುಸಿತ ಕಂಡಿದೆ. ಅಮೆರಿಕದ ಷೇರುಪೇಟೆಯಲ್ಲಿ ಒಂದೇ ದಿನ ಟೆಕ್‌ ಕಂಪನಿಗಳ ಮಾರುಕಟ್ಟೆ ಮೌಲ್ಯ 25 ಲಕ್ಷ ಕೋಟಿ ರು.ನಷ್ಟು ಕುಸಿದಿದೆ.

ಕ್ಲೌಡ್‌ ಕೋವರ್ಕರ್‌:

ಆ್ಯಂಥ್ರೋಪಿಕ್‌ ಕಂಪನಿಯು ತನ್ನ ಕ್ಲಾಡ್ ಕೋವರ್ಕರ್‌ ಎಂಬ ವೇದಿಕೆಯನ್ನು ವಿಸ್ತರಿಸಿದ್ದು, ಅದಕ್ಕೆ 11 ಹೊಸ ಪ್ಲಗಿನ್‌ಗಳನ್ನು ಪರಿಚಯಿಸಿದೆ. ಇದು ಆ ಸಾಫ್ಟ್‌ವೇರ್‌ಗೆ ಇನ್ನಷ್ಟು ಹೆಚ್ಚಿನ ಬಲ ತುಂಬಿದ್ದು, ಹೊಸ ಹೊಸ ರೀತಿಯ ಕೆಲಸಗಳನ್ನು ಸ್ವಯಂ ಮಾಡುವ ಸಾಮರ್ಥ್ಯ ನೀಡಿದೆ. ಪರಿಣಾಮವಾಗಿ, ಇಷ್ಟು ದಿನ ಐಟಿ ಉದ್ಯೋಗಿಗಳು ಕೇಳಿದ್ದಕ್ಕೆ ಉತ್ತರಿಸುತ್ತ, ಹೇಳಿದಷ್ಟನ್ನೇ ಮಾಡುತ್ತಿದ್ದ ಕ್ಲಾಡ್‌ ಕೋವರ್ಕರ್‌ ಈಗ ಆ ಉದ್ಯೋಗಿ ಮಾಡುವ ಎಲ್ಲಾ ಕೆಲಸಗಳನ್ನು ಕಲಿತುಬಿಟ್ಟಿದೆ.

ಏನೇನು ಮಾಡುತ್ತೆ?:

ಕ್ಲಾಡ್‌ ಕೋವರ್ಕರ್‌ಗೆ ಫೈಲ್‌ಗಳನ್ನು ಒದಗಿಸಿದರೆ ಅದನ್ನು ತೆರೆದು, ಓದಿ, ಅಗತ್ಯ ಬದಲಾವಣೆಗಳನ್ನು ಮಾಡಿ, ಸರಿಯಾದ ವಿಧಾನದಲ್ಲಿ ಜೋಡಿಸಿ ಕೊಡುತ್ತದೆ. ಇದು ವಕೀಲ, ಮಾರಾಟಗಾರ, ಹಣಕಾಸು ವೃತ್ತಿಪರ, ದತ್ತಾಂಶ ವಿಶ್ಲೇಷಕ ಅಥವಾ ಸಂಶೋಧಕನ ಕೆಲಸವನ್ನು ಸಲೀಸಾಗಿ ಮಾಡುತ್ತದೆ. ಸಣ್ಣದೊಂದು ಸ್ಪಷ್ಟ ಸೂಚನೆ ಕೊಟ್ಟರೆ ಸಾಕು, ಇದು ಕ್ಷಣಾರ್ಧದಲ್ಲಿ ಕೆಲಸ ಮಾಡಿ ಮುಗಿಸುತ್ತದೆ.

ಹೆಚ್ಚು ಹೊಡೆತ ಯಾರಿಗೆ?:

ಕ್ಲಾಡ್‌ ಕೋವರ್ಕರ್‌ನ ಈ ಪ್ರತಿಭೆಗೆ ಅಧಿಕ ಪ್ರಮಾಣದಲ್ಲಿ ಬಲಿಯಾಗಿದ್ದು ಕಾನೂನು ತಂತ್ರಜ್ಞಾನ ಕಂಪನಿಗಳು. ಇವುಗಳು ಕಾನೂನು ಸಂಸ್ಥೆ, ಕಾರ್ಪೊರೇಟ್ ಕಾನೂನು ಇಲಾಖೆ ಮತ್ತು ಗ್ರಾಹಕರಿಗೆ ಕಾನೂನು ಸೇವೆ ಸುಧಾರಿಸಲು, ವೇಗಗೊಳಿಸಲು ಮತ್ತು ಸ್ವಯಂಚಾಲಿತಗೊಳಿಸಲು ವಿನ್ಯಾಸಗೊಳಿಸಲಾದ ಸಾಫ್ಟ್‌ವೇರ್ ಮತ್ತು ಎಐ- ಚಾಲಿತ ವೇದಿಕೆಗಳನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಮಾಡುತ್ತವೆ. ಇಷ್ಟುದಿನ ಇದಕ್ಕೆಲ್ಲ ಕಾನೂನು ತಂಡ, ಸಾಫ್ಟ್‌ವೇರ್ ಅಥವಾ ಹೊರಗುತ್ತಿಗೆ ಸೇವಾ ಪೂರೈಕೆದಾರರು ಅಗತ್ಯವಿತ್ತು. ಆದರೆ ಈ ಎಐ ಟೂಲ್‌ ಬಂದು ಅವರೆಲ್ಲರ ಕೆಲಸ ಕಸಿಯುವ ಆತಂಕ ಹುಟ್ಟಿಸಿದೆ.

ಟೆಕ್‌ ಷೇರು ಪಾತಾಳಕ್ಕೆ:

ವಿಶ್ವದಲ್ಲಿ ಐಟಿ ಸೇವೆಗಳನ್ನು ರಫ್ತು ಮಾಡುವ ರಾಷ್ಟ್ರಗಳಲ್ಲಿ ಅಗ್ರಸ್ಥಾನ ಪಡೆದಿರುವ ಭಾರತಕ್ಕೆ ಕ್ಲಾಡ್‌ ಕೋವರ್ಕರ್‌ ದೊಡ್ಡ ಹೊಡೆತ ನೀಡಿದ್ದು, ಅದು ಗುರುವಾರ ಷೇರುಪೇಟೆಯಲ್ಲಿ ಪ್ರತಿಫಲಿಸಿದೆ. ಜಾಗತಿಕ ಕಂಪನಿಗಳು ವೆಚ್ಚಕಡಿತದ ನೆಪದಲ್ಲಿ ಐಟಿ ಕಂಪನಿಗಳ ಬದಲು ಎಐ ಟೂಲ್‌ಗಳನ್ನು ನೆಚ್ಚಿಕೊಳ್ಳುವ ಸಾಧ್ಯತೆ ಇರುವ ಕಾರಣ ಹೂಡಿಕೆದಾರರು ಐಟಿ ಕಂಪನಿಗಳ ಷೇರು ಖರೀದಿಯಿಂದ ದೂರ ಸರಿದಿದ್ದಾರೆ.

ಟಿಸಿಎಸ್‌, ವಿಪ್ರೋ, ಇನ್ಫೋಸಿಸ್‌ಗಳ ಷೇರುಗಳು ಶೇ.5-8ರಷ್ಟು ಕುಸಿದಿವೆ. ಕಾನೂನು ತಂತ್ರಜ್ಞಾನ ಕಂಪನಿಗಳಾದ ಥಾಮ್ಸನ್ ರಾಯಿಟರ್ಸ್, ಲೀಗಲ್‌ ಜೂಮ್‌ನಂತಹ ಕಂಪನಿಗಳ ಷೇರು ಬೆಲೆಯಲ್ಲಿ ಶೇ.15-20ರಷ್ಟು ಕುಸಿತವಾಗಿದೆ.

ಏನಿದು ಟೂಲ್‌? ಭೀತಿ ಏಕೆ?

- ಅಮೆರಿಕದ ಆಂಥ್ರೋಪಿಕ್‌ ಕಂಪನಿ ‘ಕ್ಲಾಡ್‌ ಕೋವರ್ಕ್‌’ ಎಂಬ ಹೊಸ ಟೂಲ್‌ ಜತೆ 11 ಪ್ಲಗ್‌ ಇನ್‌ಗಳನ್ನು ಜ.30ರಂದು ಬಿಡುಗಡೆ ಮಾಡಿದೆ

- ಈ ಪ್ಲಗ್‌ಇನ್‌ಗಳು ದೈನಂದಿನ ಉದ್ದಿಮೆ ವ್ಯವಹಾರಗಳನ್ನು ಸ್ವಯಂಚಾಲಿತವಾಗಿ ಮಾಡುತ್ತವೆ. ಇದು ಐಟಿ ವಲಯದಲ್ಲಿ ಆತಂಕಕ್ಕೆ ಕಾರಣ

- ವರದಿಗಳ ಸೃಷ್ಟಿ, ಫೈಲ್‌ಗಳ ವಿಂಗಡಣೆಯಂತ ಕಂಪ್ಯೂಟರ್ ಆಧರಿತ ಕೆಲಸಗಳನ್ನು ವಿವರವಾದ ಸೂಚನೆ ಕೊಡದಿದ್ದರೂ ಮಾಡುತ್ತವೆ

- ಕೋಡಿಂಗ್‌ ಅನುಭವ ಇಲ್ಲದವರೂ ಸಂಕೀರ್ಣ ಕೆಲಸಗಳನ್ನು ಸಾಫ್ಟ್‌ವೇರ್‌ ಎಂಜಿನಿಯರ್‌ ರೀತಿ ಲೀಲಾಜಾಲವಾಗಿ ಮಾಡಬಹುದು

- ಎಐ ಸೇವೆಗೆ ಸಾಫ್ಟ್‌ವೇರ್‌ ಕಂಪನಿಗಳ ಮೊರೆ ಹೋಗಿರುವ ಸಂಸ್ಥೆಗಳು ಆಂಥ್ರೋಪಿಕ್‌ ಬಳಸಿದರೆ ಐಟಿ ಕಂಪನಿಗಳಿಗೆ ಬೇಡಿಕೆ ಇರಲ್ಲ

- ಟೆಕ್‌ ಕಂಪನಿಗಳಿಗೆ ಆಂಥ್ರೋಪಿಕ್‌ನಿಂದ ಎಷ್ಟು ಸಮಸ್ಯೆಯಾಗುತ್ತದೆ ಎಂದು ಗೊತ್ತಾಗಿಲ್ಲ. ಆದರೆ ಹೂಡಿಕೆದಾರರು ಹೆದರಿದ್ದಾರೆ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕೇರಳ ಅಸೆಂಬ್ಲಿಯಲ್ಲೂ ಈಗ ‘ಗೋ ರಾಮ್‌ ಜಿ’ ನಿರ್ಣಯ
ದೇಶದ ಸಂಸದೀಯ ಇತಿಹಾಸದಲ್ಲೇ ಕಂಡುಕೇಳರಿಯದ ಸಂಗತಿ : ಪ್ರಧಾನಿ ಮೋದಿ ಮೇಲೆ ಹಲ್ಲೆಗೆ ಯತ್ನ?