ಗಣ್ಯರ ಐಫೋನ್‌ಗೆ ಪೆಗಾಸಸ್‌ ಸ್ಪೈ ವೇರ್‌ ರೀತಿ ದಾಳಿ

KannadaprabhaNewsNetwork | Updated : Apr 12 2024, 04:54 AM IST

ಸಾರಾಂಶ

ಐಫೋನ್ ತಯಾರಕ ಆ್ಯಪಲ್ ತನ್ನ ಬಳಕೆದಾರರಿಗೆ ಪೆಗಾಸಸ್ ತರಹದ ಅತ್ಯಾಧುನಿಕ ಸ್ಪೈವೇರ್ ದಾಳಿ ಕುರಿತು ಎಚ್ಚರಿಕೆ ನೀಡಿದೆ.

ನವದೆಹಲಿ: ಐಫೋನ್ ತಯಾರಕ ಆ್ಯಪಲ್ ತನ್ನ ಬಳಕೆದಾರರಿಗೆ ಪೆಗಾಸಸ್ ತರಹದ ಅತ್ಯಾಧುನಿಕ ಸ್ಪೈವೇರ್ ದಾಳಿ ಕುರಿತು ಎಚ್ಚರಿಕೆ ನೀಡಿದೆ. ಇದು ಬಹಳ ಕಡಿಮೆ ಸಂಖ್ಯೆಯ ವ್ಯಕ್ತಿಗಳನ್ನು ಗುರಿಯಾಗಿಸಬಹುದು. ಆದರೂ ಇದರಲ್ಲಿ ಹೆಚ್ಚಾಗಿ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ರಾಜಕಾರಣಿಗಳು ಮತ್ತು ರಾಜತಾಂತ್ರಿಕರನ್ನು ಗುರಿಯಾಗಿಸಿ ದಾಳಿ ನಡೆಸಬಹುದು ಎಂದು ಅದು ಎಚ್ಚರಿಕೆ ನೀಡಿದೆ.

ಏ.10ರಂದು ಈ ಸಂದೇಶವನ್ನು ಆ್ಯಪಲ್‌ ಕಳಿಸಿದೆ. ‘ಇಂದಿನ ಅಧಿಸೂಚನೆಯನ್ನು 92 ದೇಶಗಳಲ್ಲಿ ಉದ್ದೇಶಿತ ಬಳಕೆದಾರರಿಗೆ ಕಳುಹಿಸಲಾಗುತ್ತಿದೆ ಮತ್ತು ಇಲ್ಲಿಯವರೆಗೆ ನಾವು ಒಟ್ಟು 150 ದೇಶಗಳ ಬಳಕೆದಾರರಿಗೆ ಸೂಚನೆ ನೀಡಿದ್ದೇವೆ. ಇದು ಭಾರತದ ಐಫೋನ್ ಬಳಕೆದಾರರನ್ನೂ ಒಳಗೊಂಡಿದೆ. ಬಳಕೆದಾರರ ಆ್ಯಪಲ್‌ ಐಡಿ ಜತೆ ಸಂಬಂಧಿಸಿದ ಇಮೇಲ್ ವಿಳಾಸಗಳು ಮತ್ತು ಫೋನ್ ಸಂಖ್ಯೆಗಳಿಗೆ ಮತ್ತು ಐ ಮೆಸೇಜ್ ಮೂಲಕ ಅಧಿಸೂಚನೆಯನ್ನು ಕಳಿಸಲಾಗಿದೆ’ ಎಂದು ಅದು ಹೇಳಿದೆ.

ಭಾರತದಲ್ಲಿ ಲೋಕಸಭೆ ಚುನಾವಣೆ ನಡೆದಿರುವ ಸಂದರ್ಭದಲ್ಲಿ ಹಾಗೂ ಈ ವರ್ಷ 60 ದೇಶಗಳು ಸಾರ್ವತ್ರಿಕ ಚುನಾವಣೆ ಎದುರಿಸುತ್ತಿರುವ ನಡುವೆಯೇ ಈ ಸಂದೇಶ ಬಂದಿರುವುದು ಗಮನಾರ್ಹ. ಆದರೆ, ಭಾರತದಲ್ಲಿ ಯಾರು ಮತ್ತು ಎಷ್ಟು ಬಳಕೆದಾರರು ಅಧಿಸೂಚನೆಯನ್ನು ಸ್ವೀಕರಿಸಿದ್ದಾರೆ ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ.

ಹ್ಯಾಕಿಂಗ್‌ ಹೇಗೆ?:

ಪೆಗಾಸಸ್‌ ಸ್ಪೈವೇರ್‌ ಮೂಲಕ ಐಫೋನ್‌ಗಳಿಗೆ ಮಿಸ್ಡ್‌ ಕಾಲ್‌ ಬರಬಹುದು ಅಥವಾ ವಾಟ್ಸಾಪ್‌ ಸಂದೇಶ ಬರಬಹುದು. ಇಂಥ ಕರೆ ಅಥವಾ ಸಂದೇಶಗಳಿಗೆ ಪ್ರತಿಕ್ರಿಯಿಸಿದರೆ ಅಂಥ ಐಫೋನ್‌ ಹ್ಯಾಕ್‌ ಆಗಬಹುದು. ಹೀಗಾಗಿ ಲಾಕ್‌ಡೌನ್‌ ಮೋಡ್‌ನಲ್ಲಿ ನಿಮ್ಮ ಫೋನ್‌ಗಳನ್ನು ಇಟ್ಟರೆ ಇಂಥ ಅಪಾಯದಿಂದ ಪಾರಾಗಬಹುದು ಎಂದು ಕಂಪನಿ ಹೇಳಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಕಾಂಗ್ರೆಸ್‌ನ ಶಶಿ ತರೂರ್‌, ಆಪ್‌ನ ರಾಘವ್ ಛಡ್ಡಾ, ಟಿಎಂಸಿಯ ಮಹುವಾ ಮೊಯಿತ್ರಾ ಸೇರಿ ಹಲವು ವಿಪಕ್ಷ ನಾಯಕರಿಗೆ, ‘ನಿಮ್ಮ ಫೋನ್‌ಗಳ ಮೇಲೆ ಸಂಭಾವ್ಯ ಸರ್ಕಾರಿ ಪ್ರಯೋಜಿತ ದಾಳಿ ಆಗಬಹುದು’ ಎಂದು ಆ್ಯಪಲ್‌ ಎಚ್ಚರಿಕೆ ನೀಡಿ ಸಂಚಲನ ಮೂಡಿಸಿತ್ತು.

Share this article