ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಗುರುವಾರವೂ ಸಹ ಮಾಲಿನ್ಯ ತೀವ್ರ ಕಳಪೆ ಪ್ರಮಾಣದಲ್ಲೇ ಮುಂದುವರೆದಿದೆ. ಇದು ದೀಪಾವಳಿ ಹಬ್ಬದ ವೇಳೆ ಸ್ವಲ್ಪ ಮಟ್ಟಿಗೆ ತಿಳಿಯಾಗಬಹುದು ಎಂದು ಹೇಳಲಾಗಿದೆ. ಅಲ್ಲದೇ ಮಾಲಿನ್ಯ ನಿಯಂತ್ರಣಕ್ಕಾಗಿ ವಲಯವಾರು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದಾರೆ.
ಗುರುವಾರ ವಾಯು ಗುಣಮಟ್ಟ 420 ಅಂಕಗಳಷ್ಟು ದಾಖಲಾಗಿದೆ. ಬುಧವಾರದ 426ಕ್ಕೆ ಹೋಲಿಸಿದರೆ ಮಾಲಿನ್ಯದ ಪ್ರಮಾಣ ಕೊಂಚ ಮಟ್ಟಿಗೆ ತಗ್ಗಿದೆ. ಗಾಜಿಯಾಬಾದ್‌ನಲ್ಲಿ 369, ಗುರುಗ್ರಾಮ (396), ನೋಯ್ಡಾ (394), ಗ್ರೇಟರ್ ನೋಯ್ಡಾ (450) ಮತ್ತು ಫರೀದಾಬಾದ್ (413) ಪ್ರಮಾಣದಲ್ಲಿ ಮಾಲಿನ್ಯ ದಾಖಲಾಗಿದೆ. ವಾಯುವ್ಯ ಭಾಗದಿಂದ ಹೊಸದಾಗಿ ಬೀಸುತ್ತಿರುವ ಮಾರುತಗಳು ಈ ಮಾಲಿನ್ಯ ಪ್ರಮಾಣವನ್ನು ತಗ್ಗಿಸುವಲ್ಲಿ ಸಹಾಯ ಒದಗಿಸಲಿದೆ. ಆದರೆ ಪಶ್ವಿಮದಲ್ಲಿ ಉಂಟಾಗಿರುವ ಕ್ಷೋಭೆ ಇದನ್ನು ತಡೆಯುತ್ತಿದೆ. ಒಮ್ಮೆ ಇದು ಕಡಿಮೆಯಾದರೆ ಮಾರುತದ ವೇಗ ವೃದ್ಧಿಯಾಗಿ ಮಾಲಿನ್ಯ ಪ್ರಮಾಣ ತಗ್ಗಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾಲಿನ್ಯ ನಿಯಂತ್ರಣಕ್ಕೆ ಕ್ರಮ:ವಾಯುಗುಣಮಟ್ಟ ಸುಧಾರಿಸಲು ನಾನು ಉತ್ತರ ಮತ್ತು ಈಶಾನ್ಯ ಜಿಲ್ಲೆಯ ಜವಾಬ್ದಾರಿಯನ್ನು ಗೋಪಾಲ್ ರೈಗೆ, ನೈಋತ್ಯ ಹಾಗೂ ಪಶ್ಚಿಮ ಜಿಲ್ಲೆಯನ್ನು ಕೈಲಾಶ್ ಗೆಹ್ಲೋಟ್‌ಗೆ, ಪೂರ್ವ ಮತ್ತು ಆಗ್ನೇಯ ಜಿಲ್ಲೆಯನ್ನು ಅತಿಶುಗೆ, ದಕ್ಷಿಣ ಹಾಗೂ ನವದೆಹಲಿ ಜಿಲ್ಲೆಯನ್ನು ಸೌರಭ್ ಭಾರದ್ವಾಜ್‌ಗೆ, ಕೇಂದ್ರ ಹಾಗೂ ಶಹದಾರ ಜಿಲ್ಲೆಯನ್ನು ಇಮ್ರಾನ್ ಹುಸೇನ್‌ಗೆ ಮತ್ತು ವಾಯವ್ಯ ಜಿಲ್ಲೆಯನ್ನು ರಾಜ್ ಕುಮಾರ್ ಆನಂದ್ ಅವರಿಗೆ ವಹಿಸಲಾಗಿದೆ.