ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಾಯುಗುಣಮಟ್ಟ ಅಪಾಯಕಾರಿ ರೀತಿಯಲ್ಲಿ ಕುಸಿತವಾಗಿರುವ ಹಿನ್ನೆಲೆಯಲ್ಲಿ ಹೊರ ರಾಜ್ಯದಲ್ಲಿ ನೋಂದಣಿಯ ಆ್ಯಪ್ ಆಧರಿತ ಟ್ಯಾಕ್ಸಿಗಳಿಗೆ ನಿರ್ಬಂಧ ವಿಧಿಸಿ ದೆಹಲಿ ಸರ್ಕಾರದ ಸಾರಿಗೆ ಸಚಿವ ಗೋಪಾಲ್ ರಾಯ್ ಆದೇಶ ಹೊರಡಿಸಿದ್ದಾರೆ.ಈ ಕುರಿತು ಮಾತನಾಡಿದ ಅವರು, ‘ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ವಾಯುಮಾಲಿನ್ಯವನ್ನು ನಿಯಂತ್ರಿಸುವ ಕ್ರಮವಾಗಿ ಈ ನಿರ್ಬಂಧ ವಿಧಿಸಿದ್ದೇವೆ. ಅಲ್ಲದೆ ಸಮ-ಬೆಸ ಸಂಖ್ಯೆಯ ಸಕಾರಾತ್ಮಕ ಪರಿಣಾಮಗಳನ್ನು ಕುರಿತು ಹಾರ್ವರ್ಡ್, ಶಿಕಾಗೊ ಹಾಗೂ ದೆಹಲಿ ತಾಂತ್ರಿಕ ವಿಶ್ವವಿದ್ಯಾನಿಲಯದಲ್ಲಿ ನಡೆಸಲಾದ ಕ್ಷೇತ್ರೀಯ ಅಧ್ಯಯನವನ್ನು ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸಲಿದ್ದೇವೆ’ ಎಂದು ತಿಳಿಸಿದರು.