2018ರ ಪಟಾಕಿ ನಿಷೇಧ ಇಡೀ ದೇಶಕ್ಕೆ ಅನ್ವಯ: ಸುಪ್ರೀಂಕೋರ್ಟ್‌

KannadaprabhaNewsNetwork | Published : Nov 8, 2023 1:03 AM

ಸಾರಾಂಶ

ದೀಪಾವಳಿಗೂ ಮುನ್ನ ಬಂತು ಕಠಿಣ ಆದೇಶ. ಬೇರಿಯಂ ಬಳಸಿದ ಪಟಾಕಿ ನಿಷಿದ್ಧ. ಹಸಿರು ಪಟಾಕಿ ಓಕೆ.

ಏನು ನಿಷೇಧ?

- ಹೆಚ್ಚು ಬಣ್ಣ ಬರುವಂತೆ ಮಾಡುವ ಬೇರಿಯಂ ಮತ್ತು ಕೆಲವು ನಿಷೇಧಿತ ರಾಸಾಯನಿಕಗಳನ್ನು ಪಟಾಕಿಯಲ್ಲಿ ಬಳಸುವಂತಿಲ್ಲ

- ವಾಯುಮಾಲಿನ್ಯ, ಶಬ್ದಮಾಲಿನ್ಯ, ಘನತ್ಯಾಜ್ಯ ಉತ್ಪತ್ತಿ ಮಾಡುವ ಪಟಾಕಿಗಳ ಉತ್ಪಾದನೆ, ಮಾರಾಟ, ಬಳಕೆ ನಿಷಿದ್ಧ

- ಕಡಿಮೆ ರಾಸಾಯನಿಕ ಇರುವ, ಕಡಿಮೆ ಬೆಳಕು/ ಶಬ್ದ/ ಹೊಗೆ ಹೊರಸೂಸುವ ‘ಹಸಿರು ಪಟಾಕಿ’ ಬಳಕೆ ಮಾಡಬಹುದು

- ಹಬ್ಬಗಳಲ್ಲಿ ರಾತ್ರಿ 8ರಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಬೇಕು

- ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಮುನ್ನಾದಿನ ರಾತ್ರಿ 11:55ರಿಂದ ಮತ್ತು 12:30ರ ನಡುವೆ ಪಟಾಕಿ ಸಿಡಿಸಬಹುದು

ನವದೆಹಲಿ: ಬೆಳಕಿನ ಹಬ್ಬವಾದ ದೀಪಾವಳಿ ಹತ್ತಿರ ಬರುತ್ತಿರುವುದರ ನಡುವೆಯೇ, ಈ ಹಿಂದೆ 2018ರಲ್ಲಿ ಬೇರಿಯಂ ರಾಸಾಯನಿಕ ನಿಷೇಧಿಸಿ ಹಸಿರು ಪಟಾಕಿಗೆ ಅನುಮತಿಸಿದ್ದ ಹಾಗೂ ಪಟಾಕಿ ಹಾರಿಸಲು ವಿಧಿಸಲಾಗಿದ್ದ ಸಮಯ ನಿರ್ಬಂಧದ ತನ್ನ ಆದೇಶವು ರಾಜಧಾನಿ ದೆಹಲಿಗೆ ಮಾತ್ರವಲ್ಲದೇ ಎಲ್ಲ ರಾಜ್ಯಗಳಿಗೂ ಅನ್ವಯವಾಗುತ್ತದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.

ಸುಪ್ರೀಂಕೋರ್ಟ್‌ನ ಈ ಸ್ಪಷ್ಟನೆ ಈ ದೀಪಾವಳಿ ಹಾಗೂ ಮುಂದಿನ ಹಬ್ಬ ಹರಿದಿನಗಳ ಮೇಲೆ ದೇಶವ್ಯಾಪಿ ಪರಿಣಾಮ ಬೀರಲಿದೆ.

2018ರಲ್ಲಿ ಹೊರಡಿಸಿದ್ದ ಪಟಾಕಿ ನಿಷೇಧ ಆದೇಶವನ್ನೂ ರಾಜಸ್ಥಾನದಲ್ಲೂ ಅನುಷ್ಠಾನಗೊಳಿಸುವಂತೆ ಕೋರಿ ಅಲ್ಲಿನ ಅರ್ಜಿದಾರರೊಬ್ಬರು ರಾಜಸ್ಥಾನ ಕೋರ್ಟ್ ಮೊರೆ ಹೋಗಿದ್ದರು. ಆಗ ಸುಪ್ರೀಂಕೋರ್ಟ್‌ ಆದೇಶ ದೆಹಲಿಗೆ ಸೀಮಿತವಾಗಿದೆ ಎಂದು ರಾಜಸ್ಥಾನ ಕೋರ್ಟ್ ಅಭಿಪ್ರಾಯ ಪಟ್ಟಿತ್ತು. ಇದಕ್ಕೆ ಸ್ಪಷ್ಟನೆ ನೀಡುವಂತೆ ರಾಜಸ್ಥಾನದ ಅದೇ ವ್ಯಕ್ತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ನ್ಯಾಯಪೀಠ, ‘ಹಿಂದಿನ ಆದೇಶವನ್ನು ರಾಜಸ್ಥಾನ ರಾಜ್ಯವು ಗಮನಿಸಬೇಕು ಮತ್ತು ಅದು ಎಲ್ಲ ರಾಜ್ಯಗಳಿಗೂ ಅನ್ವಯವಾಗುತ್ತದೆ. ಒಂದೊಂದು ರಾಜ್ಯಕ್ಕೆ ಒಂದು ನಿಯಮ ಮಾಡಲಾಗದು. ವಿಶೇಷವಾಗಿ ಹಬ್ಬದ ಸಮಯದಲ್ಲಿ ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ರಾಜ್ಯಗಳು ಕ್ರಮಗಳನ್ನು ತೆಗೆದುಕೊಳ್ಳಬೇಕು. ಜನರನ್ನು ಜಾಗೃತಗೊಳಿಸುವುದು ಮುಖ್ಯವಾಗಿದೆ. ವಾಯುಮಾಲಿನ್ಯ ತಡೆ ಕೇವಲ ಸುಪ್ರೀಂಕೋರ್ಟ್‌ ಕೆಲಸವಲ್ಲ’ ಎಂದಿತು.--2018ರಲ್ಲಿ ಸುಪ್ರೀಂ ಪಟಾಕಿ ನಿರ್ಬಂಧಗಳೇನು?

ಪಟಾಕಿ ಬಳಕೆ ಮೇಲೆ ಸಂಪೂರ್ಣ ನಿಷೇಧ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು 2018ರಲ್ಲಿ ಅ.23ರಂದು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌ ತನ್ನ ಆದೇಶದಲ್ಲಿ ಸಂಪೂರ್ಣ ಪಟಾಕಿ ನಿಷೇಧಕ್ಕೆ ನಿರಾಕರಿಸಿತ್ತು.

ಅದರ ಬದಲು ಕಡಿಮೆ ರಾಸಾಯನಿಕ ಇರುವ, ಕಡಿಮೆ ಬೆಳಕು/ ಶಬ್ದ/ ಹೊಗೆ ಹೊರಸೂಸುವ ಹಾಗೂ ಪರಿಸರಕ್ಕೆ ಕಡಿಮೆ ಮಾರಕವಾದ ‘ಹಸಿರು ಪಟಾಕಿ’ ತಯಾರಿಕೆ ಮತ್ತು ಮಾರಾಟಕ್ಕೆ ಅನುಮತಿ ನೀಡಿತ್ತು.

ಜೊತೆಗೆ ಆನ್‌ಲೈನ್‌ಗಳಲ್ಲಿ ಇವುಗಳ ಮಾರಾಟ ಮತ್ತು ಸೀಮಿತ ಅವಧಿಯಲ್ಲಿ ಪಟಾಕಿ ಬಳಕೆಗೆ ಅವಕಾಶ ನೀಡಿತ್ತು.

ಹೆಚ್ಚು ಬಣ್ಣ ಸೃಷ್ಟಿಸಲು ಅವಕಾಶ ನೀಡುವ ಬೇರಿಯಂ ಮತ್ತು ಇತರೆ ಕೆಲವು ನಿಷೇಧಿತ ವಸ್ತುಗಳನ್ನು ಪಟಾಕಿಯಲ್ಲಿ ಬಳಸಲು ಸುಪ್ರೀಂಕೋರ್ಟ್‌ ನಿಷೇಧ ಹೇರಿತ್ತು. ಜತೆಗೆ ಬೃಹತ್ ವಾಯುಮಾಲಿನ್ಯ, ಶಬ್ದ ಮತ್ತು ಘನತ್ಯಾಜ್ಯ ಸಮಸ್ಯೆಗೆ ಕಾರಣವಾಗುವ ಪಟಾಕಿಗಳ ತಯಾರಿಕೆ, ಮಾರಾಟ ಮತ್ತು ಬಳಕೆಯನ್ನು ಅದು ನಿಷೇಧಿಸಿತ್ತು.

ದೇಶಾದ್ಯಂತ ಜನರು ದೀಪಾವಳಿ ಮತ್ತು ಇತರ ಹಬ್ಬಗಳಂದು ರಾತ್ರಿ 8 ರಿಂದ 10 ರವರೆಗೆ ಮಾತ್ರ ಪಟಾಕಿ ಸಿಡಿಸಬಹುದು. ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಮುನ್ನಾದಿನದಂದು ರಾತ್ರಿ 11:55ರಿಂದ ಮತ್ತು 12:30ರ ನಡುವೆ ಪಟಾಕಿ ಸಿಡಿಸಬಹುದು ಎಂದಿತ್ತು.

ಶಬ್ದ ಮತ್ತು ಹೊಗೆ ಹೊರಸೂಸುವಿಕೆಯ ಮಿತಿಗಳನ್ನು ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ (ಪಿಇಎಸ್‌ಒ) ಅನುಮೋದಿಸಬೇಕು ಎಂದು ಕೋರ್ಟ್‌ ಹೇಳಿತ್ತು.

Share this article