ಪಟನಾ: ದೇಶಾದ್ಯಂತ ಬಿರುಗಾಳಿ ಎಬ್ಬಿಸಿದ್ದ ಬಿಹಾರದ ಜಾತಿಗಣತಿ ವರದಿಯನ್ನು ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಲಾಗಿದ್ದು, ರಾಜ್ಯದ ಶೇ.64ರಷ್ಟು ಕುಟುಂಬಗಳ ಆದಾಯ ಮಾಸಿಕ 10 ಸಾವಿರ ರು.ಗಿಂತ ಕಡಿಮೆ ಇದೆ ಎಂಬ ಬೆಚ್ಚಿಬೀಳಿಸುವ ಮಾಹಿತಿ ಹೊರಬಿದ್ದಿದೆ. ಇದರಿಂದಾಗಿ ರಾಜ್ಯದ ಜನ ತೀರಾ ಕಡುಬಡವರಾಗಿದ್ದಾರೆ ಎಂಬುದು ಸಾಬೀತಾದಂತಾಗಿದೆ.
ಇದೇ ವೇಳೆ, ಶೇ.28ರಷ್ಟು ಕುಟುಂಬಗಳು 10 ಸಾವಿರ ರು.ನಿಂದ 50 ಸಾವಿರ ರು.ವರೆಗಿನ ಆದಾಯದಲ್ಲಿ ಜೀವನ ನಿರ್ವಹಣೆ ಮಾಡುತ್ತಿವೆ. ಕೇವಲ ಶೇ.4ರಷ್ಟು ಕುಟುಂಬಗಳ ಆದಾಯ ಮಾತ್ರ 50 ಸಾವಿರ ರು.ಗಿಂತ ಹೆಚ್ಚಿದೆ ಎಂದು ಜಾತಿ ಗಣತಿ ವರದಿ ಹೇಳಿದೆ.
ಇನ್ನು ರಾಜ್ಯದ 13.1 ಕೋಟಿ ಜನಸಂಖ್ಯೆಯಲ್ಲಿ ಶೇ.80ರಷ್ಟು ಜನರು ಹಿಂದುಳಿದ ಅಥವಾ ತುಳಿತಕ್ಕೊಳಗಾದ ವರ್ಗಗಳಿಗೆ ಸೇರಿದ್ದಾರೆ ಎಂದೂ ಅದು ಕಳವಳ ವ್ಯಕ್ತಪಡಿಸಿದೆ.ಜಾತಿವಾರು ಬಡವರು:
ಪರಿಶಿಷ್ಟರಲ್ಲೇ ಒಳವರ್ಗೀಕರಣ ಮಾಡಿದರೆ, ಪರಿಶಿಷ್ಟ ಜಾತಿಯ ಶೇ.42.93ರಷ್ಟು ಕುಟುಂಬಗಳು, ಪರಿಶಿಷ್ಟ ಪಂಗಡದ ಶೇ.42.7ರಷ್ಟು ಕುಟುಂಬಗಳು ಬಡತನವನ್ನು ಹೊಂದಿವೆ. ಇತರ ಹಿಂದುಳಿದ ವರ್ಗಗಳಲ್ಲಿ ಶೇ.33.16 ಹಾಗೂ ತೀವ್ರ ಹಿಂದುಳಿದ ವರ್ಗದಲ್ಲಿ ಶೇ.33.58 ಹಾಗೂ ಇತರೆ ಜಾತಿಗಳಲ್ಲಿ ಶೇ.23.72ರಷ್ಟು ಮತ್ತು ಸಾಮಾನ್ಯ ವರ್ಗದಲ್ಲಿ ಶೇ.25ರಷ್ಟು ಬಡವರಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.