ಮುಂಬೈ: ಕೃತಕ ಬುದ್ಧಿಮತ್ತೆ ಬಳಸಿ ತಿರುಚಲಾಗಿದ್ದ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿರುವ ಬೆನ್ನಲ್ಲೇ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರ ತಿರುಚಿದ ಡೀಪ್‌ಫೇಕ್ ಫೋಟೊವೊಂದು ವೈರಲ್ ಆಗಿದೆ.
ತಮ್ಮ ಮುಂಬರುವ ‘ಟೈಗರ್ 3’ ಚಿತ್ರದಲ್ಲಿ ನಟಿ ಕತ್ರಿನಾ ಅವರು ಬಿಳಿ ಟವಲ್‌ವೊಂದನ್ನು ಹಿಡಿದಿರುವ ದೃಶ್ಯದಲ್ಲಿ ಹಾಲಿವುಡ್‌ನ ಸ್ಟಂಟ್ ವುಮೆನ್‌ವೊಬ್ಬರ ಜೊತೆ ಬಹುತೇಕ ಅರೆಬೆತ್ತಲೆಯಾಗಿರುವ ದೃಶ್ಯದಲ್ಲಿ ನಟಿಸಿದ್ದಾರೆ. ಈ ಮೂಲ ಫೋಟೋವನ್ನು ತಿರುಚಿ, ಟವಲ್ ಬದಲಿಗೆ ಅವರು ಬಿಳಿ ಬಿಕಿನಿಯಂತಹ ತುಂಡುಡುಗೆ ಧರಿಸಿರುವಂತೆ ಅಸಭ್ಯವಾಗಿ ರೂಪಿಸಲಾಗಿದೆ. ಈ ಪೋಟೊ ವಿರುದ್ಧ ಹಲವರು ಕಿಡಿಕಾರಿದ್ದು, ಎಐ ಭಯಾನಕವಾಗಿ ಹಾಗೂ ಅದನ್ನು ಮಹಿಳೆಯರನ್ನು ಅಶ್ಲೀಲಗೊಳಿಸಲು ಬಳಸುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದಿದ್ದಾರೆ.