ವಯನಾಡು ಭೂಕುಸಿತ: ಮಣ್ಣಿನಡಿ ಸಿಲುಕಿದವರ ರಕ್ಷಣೆಗೆ ಶ್ವಾನದಳ

KannadaprabhaNewsNetwork |  
Published : Jul 31, 2024, 01:11 AM IST
ವಯನಾಡು | Kannada Prabha

ಸಾರಾಂಶ

: ವಯನಾಡು ದುರಂತದಲ್ಲಿ ಮಣ್ಣಿನಡಿ ಸಿಲುಕಿರುವವರ ರಕ್ಷಣೆಗೆ ಕೇರಳ ಸಿಎಂ ಮನವಿ ಮೇರೆಗೆ ಸೇನೆಯಿಂದ ವಿಶೇಷ ಶ್ವಾನದಳವನ್ನು ಕಳುಹಿಸಿಕೊಡಲಾಗಿದೆ.

ತಿರುವನಂತಪುರಂ: ವಯನಾಡು ದುರಂತದಲ್ಲಿ ಮಣ್ಣಿನಡಿ ಸಿಲುಕಿರುವವರ ರಕ್ಷಣೆಗೆ ಕೇರಳ ಸಿಎಂ ಮನವಿ ಮೇರೆಗೆ ಸೇನೆಯಿಂದ ವಿಶೇಷ ಶ್ವಾನದಳವನ್ನು ಕಳುಹಿಸಿಕೊಡಲಾಗಿದೆ.

ಕೋರೆಹಲ್ಲುಗಳನ್ನು ಹೊಂದಿರುವ ಶ್ವಾನದಳದಲ್ಲಿ ಬೆಲ್ಜಿಯನ್ ಮಾಲಿನೋಯಿಸ್ ,ಲಾಬ್ರಾಡಾರ್ಸ್‌ ಮತ್ತು ಜರ್ಮನ್ ಶೆಫರ್ಡ್‌ ನಾಯಿಗಳಿರಲಿವೆ. ಈ ಶ್ವಾನಗಳು ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ರಕ್ಷಣಾ ಕಾರ್ಯಕ್ಕೆ ನೆರವಾಗಲಿದ್ದು, ಮನುಷ್ಯರು ಮಣ್ಣಿನಾಳದಲ್ಲಿ ಹೂತಿದ್ದರೆ ಉಸಿರಾಟ ಮತ್ತು ವಾಸನೆಯ ಮೂಲಕ ಪತ್ತೆಹಚ್ಚುವ ಕೌಶಲ್ಯಗಳನ್ನು ಹೊಂದಿರುತ್ತದೆ. ಈ ಶ್ವಾನಗಳು ಉತ್ತರ ಪ್ರದೇಶದಲ್ಲಿ ಮೇರಠ್‌ನಲ್ಲಿ ತರಬೇತಿಯನ್ನು ಪಡೆಯುತ್ತಿದ್ದು, ಕೇರಳ ಸಿಎಂ ವಿಶೇಷ ಮನವಿಯ ಮೇರೆಗೆ ದುರಂತದ ಸ್ಥಳಕ್ಕೆ ಕಳುಹಿಸಿ ಕೊಡಲಾಗಿದೆ ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಮನ ಕಲುಕಿದ ಶವಗಳ ನಡುವೆ ತಮ್ಮವರ ಹುಡುಕಾಟ

ಭೂಕುಸಿತದಲ್ಲಿ ಮಡಿದವರ ಶವಗಳನ್ನು ಮೇಪ್ಪಡಿ ಗ್ರಾಮದ ಸಣ್ಣ ಆರೋಗ್ಯ ಕೇಂದ್ರದಲ್ಲಿ ಸಾಲಾಗಿ ಇಡಲಾಗಿದ್ದು, ಅಲ್ಲಿ ಮಂಗಳವಾರ ಕಂಡುಬಂದ ದೃಶ್ಯ ಎಲ್ಲರ ಮನಕಲಕುವಂತಿತ್ತು.ಭೂಕುಸಿತದ ವೇಳೆ ನಾಪತ್ತೆಯಾದ ತಮ್ಮ ಕುಟುಂಬ ಸದಸ್ಯರ ಅಲ್ಲಿ ಇರಬಹುದೇ ಎಂದು ಬಹಳಷ್ಟು ಜನರು ಆರೋಗ್ಯ ಕೇಂದ್ರಕ್ಕೆ ಬಂದು ಒಂದೊಂದೇ ಶವಗಳನ್ನು ಪರಿಶೀಲನೆ ನಡೆಸುತ್ತಿದ್ದುದ್ದು ಕಂಡುಬಂತು. ಈ ವೇಳೆ ಕೆಲವರಿಗೆ ತಮ್ಮ ಕುಟುಂಬ ಸದಸ್ಯರ ಶವಕಂಡು ಬಂದು ಗೋಳಿಟ್ಟರೆ, ಇನ್ನು ಕೆಲವರು ದೇಹಗಳಿಗೆ ಆದ ಗಾಯ ನೋಡಿ ಮಮ್ಮಲ ಮುರುಗಿ ದೃಶ್ಯ ಕೂಡಾ ಕಂಡುಬಂತು. ಇನ್ನೊಂದೆಡೆ ತಮ್ಮ ಕುಟುಂಬ ಸದಸ್ಯರ ಪೈಕಿ ಯಾರೂ ಅಲ್ಲಿ ಕಂಡುಬರದ ಹಿನ್ನೆಲೆಯಲ್ಲಿ ಒಂದಿಷ್ಟು ಜನರು ಅವರು ಎಲ್ಲಾದರೂ ಬದುಕಿಬರಬಹುದು ಎಂಬ ಆಶಾಭಾವನೆಯಿಂದ ಕಟ್ಟಡದಿಂದ ಹೊರಗೆ ಹೋದ ನೋಟಗಳೂ ಕಂಡುಬಂದವು.ಇದೆಲ್ಲರ ನಡುವೆ ಅಂಗವಿಕಲ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ತಮ್ಮ ಸೋದರ ಮತ್ತು ಕುಟುಂಬ ಸದಸ್ಯರನ್ನು ಹುಡುಕಾಡುತ್ತಿದ್ದ ದೃಶ್ಯ ಎಲ್ಲರ ಕಣ್ಣಲ್ಲಿ ನೀರು ತರಿಸಿತ್ತು. ಮಹಿಳೆಯೊಬ್ಬರು ತಮ್ಮ ಕುಟುಂಬದ ಇಬ್ಬರು ಮಕ್ಕಳು ಸೇರಿದಂತೆ ಸದಸ್ಯರು ನಾಪತ್ತೆಯಾಗಿದ್ದಾರೆ. ಇಲ್ಲಿ ಅವರ ಕುರಿತು ಸುಳಿವು ಸಿಕ್ಕಿಲ್ಲ. ಅವರನ್ನು ಎಲ್ಲಿ ಹುಡುಕುವುದೋ ಗೊತ್ತಾಗುತ್ತಿಲ್ಲ ಎಂದು ಕಣ್ಣೀರು ಹಾಕುತ್ತಿದ್ದರು.

ಆಮೇಲೆ ಬರುವೆ ಎಂದವರು ಬದುಕಿ ಬರಲೇ ಇಲ್ಲ!ಇಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಬದುಕುಳಿದ ಕೆಲವರು ತಮ್ಮ ಭಯಾನಕ ಅನುಭವಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.ಬದುಕುಳಿದ ವ್ಯಕ್ತಿಯೊಬ್ಬರು ಮಾತನಾಡಿ, ‘ಭಾರಿ ಮಳೆಯಿಂದ ಭೂಕುಸಿತದ ಸೂಚನೆ ಲಭಿಸಿ ರಾತ್ರಿ 11ಕ್ಕೆ ನಾವು ಮನೆ ತೊರೆದು ಸನಿಹದ ಸುರಕ್ಷಿತ ಸ್ಥಳಕ್ಕೆ ಹೋದೆವು. ನಮ್ಮ ಪಕ್ಕದ ಮನೆಯವರನ್ನೂ ಕರೆದೆವು. ಕೆಲಸವಿದೆ 1 ಗಂಟೆಯಷ್ಟೊತ್ತಿಗೆ ಬರುವೆ ಎಂದರು. ಆದರೆ ಅಷ್ಟರಲ್ಲಿ ಅವರ ಮನೆ ಕುಸಿದು ಹೋಯಿತು. ನಮ್ಮ ಜತೆಗೆ ಬಾರದೇ ಜಗತ್ತನ್ನೇ ಬಿಟ್ಟು ಹೋದರು’ ಎಂದು ಬೇಸರಿಸಿದರು.

ಪರಿಹಾರ ಶಿಬಿರವಾಗಿದ್ದ ಶಾಲೆಯೂ ಭೂಕುಸಿತದಿಂದ ಬಾಧಿತಇಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಭೂಕುಸಿತ ಹತ್ತಾರು ಜನರ ಬಲಿ ಪಡೆದಿದೆ. ಇದರ ನಡುವೆ 1 ವಾರದಿಂದ ಮಳೆ ಸುರಿಯುತ್ತಿರುವ ಕಾರಣ ಪರಿಹಾರ ಶಿಬಿರವಾಗಿ ಮಾರ್ಪಾಡಾಗಿದ್ದ ವೆಲ್ಲಾರ್‌ಮಲ್ಲಾದ ಸರ್ಕಾರಿ ವೃತ್ತಿಪರ ಹೈಯರ್ ಸೆಕೆಂಡರಿ ಶಾಲೆ ಭೂಕುಸಿತದಿಂದಾಗಿ ಭಾಗಶಃ ಮುಳುಗಡೆಯಾಗಿದೆ. ‘ಅನೇಕ ಜನ ವಾಸವಿರುವ ಮುಂಡಕ್ಕೈ ಭಾಗದಲ್ಲಿ ಭೂಕುಸಿತವಾಗಿದ್ದು, ವಿದ್ಯಾರ್ಥಿಗಳ ಪೋಷಕರಿಂದ ಅದಕ್ಕೆ ಸಂಬಂಧಿಸಿದ ಸಂದೇಶಗಳು ಬರುತ್ತಿವೆ. ಏರ್‌ಲಿಫ್ಟ್‌ ಒಂದೇ ನಮ್ಮ ಮುಂದಿರುವ ಆಯ್ಕೆ’ ಎಂದು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ. ಭಾರೀ ಮಳೆ ಮತ್ತು ಭೂಕುಸಿತದ ಸಂದರ್ಭಗಳಲ್ಲಿ ಹಲವು ಪರಿವಾರಗಳು ಶಾಲೆಯಲ್ಲೇ ಆಶ್ರಯ ಪಡೆಯುತ್ತಿದ್ದವು. ಈ ಬಾರಿ ಅವಶೇಷಗಳು ಶಾಲೆಯ ಮೇಲೆಯೇ ಬಿದ್ದಿದ್ದು, ನೆಲಮಹಡಿಯಲ್ಲಿ ನೀರು ತುಂಬಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ