ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ತಕ್ಷಣಕ್ಕೆ ಜೈಲಿಂದ ಬಿಡುಗಡೆಯಾಗುವ ಸಾಧ್ಯತೆ ಮತ್ತೆ ದೂರವಾಗಿದೆ. ಮಧ್ಯಂತರ ಜಾಮೀನು ಕೋರಿ ದೆಹಲಿ ಸಿಎಂ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠ ಮಂಗಳವಾರ ವಿಚಾರಣೆ ನಡೆಸಿತಾದರೂ, ತೀರ್ಪು ನೀಡಲಿಲ್ಲ. ಜೊತೆಗೆ ಮುಂದಿನ ವಾರದವರೆಗೂ ಪೀಠದ ಸದಸ್ಯರು ಒಂದಾಗಿ ಕೂರದೇ ಹೋದಲ್ಲಿ ತೀರ್ಪು ಪ್ರಕಟ ವಿಳಂಬವಾಗಬಹುದು ಎಂದು ಹೇಳುವ ಮೂಲಕ ಬಿಡುಗಡೆ ನಿರೀಕ್ಷೆಯಲ್ಲಿದ್ದ ಕೇಜ್ರಿವಾಲ್‌ಗೆ ಪೀಠವು ನಿರಾಸೆ ಉಂಟು ಮಾಡಿದೆ.ಮಂಗಳವಾರದ ವಿಚಾರಣೆ ವೇಳೆ ನ್ಯಾಯಪೀಠವು, ‘ಕೇಜ್ರಿವಾಲ್ ಚುನಾಯಿತ ಮುಖ್ಯಮಂತ್ರಿ. ಇದೀಗ ಲೋಕಸಭಾ ಚುನಾವಣೆ ನಡೆಯುತ್ತಿದೆ. ಇದು ಅಸಾಧಾರಣ ಸನ್ನಿವೇಶ. ಕೇಜ್ರಿವಾಲ್ ಅಪರಾಧದ ಚಾಳಿ ಇರುವ ವ್ಯಕ್ತಿಯಲ್ಲ ಎಂಬ ವಿಷಯ ನಮ್ಮ ಗಮನದಲ್ಲಿದೆ. ಜೊತೆಗೆ ಅವರು 9 ಬಾರಿ ವಿಚಾರಣೆಗೆ ಗೈರಾಗಿದ್ದರು ಎಂಬುದೂ ನಮಗೆ ಗೊತ್ತಿದೆ. ಈಗ ಚುನಾವಣೆ ಇಲ್ಲ ಎಂದಾದಲ್ಲಿ ಮಧ್ಯಂತರ ಜಾಮೀನಿನ ವಿಷಯವೇ ಬರುತ್ತಿರಲಿಲ್ಲ. ಆದರೆ ಒಂದು ವೇಳೇ ಜಾಮೀನು ನೀಡಿದರೂ ನೀವು ಮುಖ್ಯಮಂತ್ರಿಯಾಗಿ ಅಧಿಕಾರ ಚಲಾಯಿಸುವಂತಿಲ್ಲ’ ಎಂದು ಸ್ಪಷ್ಟಪಡಿಸಿತು.ಈ ವೇಳೆ ಜಾಮೀನಿಗೆ ಆಕ್ಷೇಪ ವ್ಯಕ್ತಪಡಿಸಿದ ಇ.ಡಿ ಪರ ವಕೀಲರು, ‘ಕೇಜ್ರಿವಾಲ್‌ಗೆ ಜಾಮೀನು ನೀಡುವುದು ತಪ್ಪು ಸಂಪ್ರದಾಯ ಹುಟ್ಟುಹಾಕಿದಂತಾಗುತ್ತದೆ. ನಾವು ಎಂಥ ಉದಾಹರಣೆಯನ್ನು ಸೃಷ್ಟಿಸುತ್ತಿದ್ದೇವೆ? ಹಾಗಿದ್ದರೆ ಬೇರೆ ವ್ಯಕ್ತಿಗಳು ಕಡಿಮೆ ಮಹತ್ವ ಉಳ್ಳವರು ಎಂದು ಸಾರಿದಂತಾಗುವುದಿಲ್ಲವೇ? ಇವರು ಮುಖ್ಯಮಂತ್ರಿ ಎನ್ನುವ ಏಕೈಕ ಕಾರಣಕ್ಕಾಗಿ ಕಾನೂನಿನಿಂದ ದೂರ ಸರಿಯುವುದು ಸರಿಯಲ್ಲ. ರಾಜಕೀಯ ನಾಯಕರಿಗೆ ನಾವು ಪ್ರತ್ಯೇಕ ಕಾನೂನು ರೂಪಿಸಿದಂತೆ ಆಗುವುದಿಲ್ಲವೇ? ಚುನಾವಣೆಗೆ ಪ್ರಚಾರ ಮಾಡುವುದು ಅಷ್ಟು ಪ್ರಮುಖವೇ?’ ಎಂಬ ಪ್ರಶ್ನೆಯನ್ನು ಹಾಕಿದರು.ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಪೀಠ, ‘ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ರಾಜಕೀಯ ವ್ಯಕ್ತಿಗಳನ್ನು ಪ್ರತ್ಯೇಕವಾಗಿ ಪರಿಗಣಿಸುವುದನ್ನು ನಾವು ಕೂಡಾ ಬಯಸುವುದಿಲ್ಲ. ಆದರೆ ನಾವು ಇದನ್ನು ವಿಶಾಲ ದೃಷ್ಟಿಕೋನದಲ್ಲಿ ನೋಡಬೇಕಿದೆ. ಲೋಕಸಭಾ ಚುನಾವಣೆಗೂ ಕೆಲವೇ ದಿನಗಳ ಮೊದಲು ಕೇಜ್ರಿವಾಲ್ ಅವರನ್ನು ಬಂಧಿಸಲಾಯಿತು ಎಂದು ಗಮನಾರ್ಹ’ ಎಂದು ಹೇಳಿತು.ಹೀಗೆ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಯಾವುದೇ ತೀರ್ಪು ಪ್ರಕಟಿಸದೇ ವಿಚಾರಣೆ ಮುಂದೂಡಿತು.