ವಿಪಕ್ಷ ಹೋಳಾದಷ್ಟೂ ಎನ್‌ಡಿಎಗೆ ಮಹತ್ವದ ಬಿಲ್‌ ಅಂಗೀಕಾರ ಸಲೀಸು

KannadaprabhaNewsNetwork |  
Published : Jun 13, 2026, 01:45 AM IST
NDA

ಸಾರಾಂಶ

ಕ್ಷೇತ್ರ ಮರುವಿಂಗಡಣೆ, ಮಹಿಳಾ ಮೀಸಲು ಮಸೂದೆ, ಒಂದು ದೇಶ ಒಂದು ಚುನಾವಣೆಯಂಥ ಮಹತ್ವದ ಮಸೂದೆ ಅಂಗೀಕಾರಕ್ಕೆ ಸಂಸತ್ತಿನಲ್ಲಿ ಮೂರನೇ ಎರಡು ಬಹುಮತದ ಕೊರತೆ ಎದುರಿಸುತ್ತಿದ್ದ ಕೇಂದ್ರದ ಎನ್‌ಡಿಎ ಸರ್ಕಾರಕ್ಕೆ, ಇತ್ತೀಚೆಗೆ ಕೆಲ ರಾಜಕೀಯ ಪಕ್ಷಗಳಲ್ಲಿನ ಭಿನ್ನಮತ ಲಾಭ ತಂದುಕೊಡುವ ನಿರೀಕ್ಷೆ ಇದೆ.

 ನವದೆಹಲಿ : ಕ್ಷೇತ್ರ ಮರುವಿಂಗಡಣೆ, ಮಹಿಳಾ ಮೀಸಲು ಮಸೂದೆ, ಒಂದು ದೇಶ ಒಂದು ಚುನಾವಣೆಯಂಥ ಮಹತ್ವದ ಮಸೂದೆ ಅಂಗೀಕಾರಕ್ಕೆ ಸಂಸತ್ತಿನಲ್ಲಿ ಮೂರನೇ ಎರಡು ಬಹುಮತದ ಕೊರತೆ ಎದುರಿಸುತ್ತಿದ್ದ ಕೇಂದ್ರದ ಎನ್‌ಡಿಎ ಸರ್ಕಾರಕ್ಕೆ, ಇತ್ತೀಚೆಗೆ ಕೆಲ ರಾಜಕೀಯ ಪಕ್ಷಗಳಲ್ಲಿನ ಭಿನ್ನಮತ ಲಾಭ ತಂದುಕೊಡುವ ನಿರೀಕ್ಷೆ ಇದೆ. ಇದರ ಜೊತೆಗೆ ಸೈದ್ಧಾಂತಿಕವಾಗಿ ವಿರುದ್ಧವಾಗಿರುವ ಕೆಲವೊಂದು ಪಕ್ಷಗಳ ಜೊತೆಗೆ ಬಿಜೆಪಿ ಹಿಂಬಾಗಿಲ ಮಾತುಕತೆ ನಡೆಸುತ್ತಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಬಹುಮತ ಇಲ್ಲ:

ಕೇಂದ್ರ ಸರ್ಕಾರವು ಕ್ಷೇತ್ರ ಮರುವಿಂಗಡಣೆ, ಒಂದು ದೇಶ-ಒಂದು ಚುನಾವಣೆ, ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿಯಂತಹ ಮಹತ್ವದ ಕ್ರಮಗಳನ್ನು ಜಾರಿಗೊಳಿಸುವ ಗುರಿ ಹೊಂದಿದೆ. ಇದಕ್ಕೆ ಸಂಸತ್ತಿನ ಉಭಯ ಸದನಗಳಲ್ಲೂ ಮೂರನೇ ಎರಡರಷ್ಟು ಬಹುಮತ ಅಗತ್ಯ. ಆದರೆ ಎನ್‌ಡಿಎಗೆ ಅಷ್ಟು ಬಲ ಇಲ್ಲ.

ಎನ್‌ಡಿಎ ಬಲಾಬಲ:

ಸದ್ಯ ಲೋಕಸಭೆಯಲ್ಲಿ ಒಟ್ಟು 543 ಸಂಸದರಿದ್ದಾರೆ. ಎನ್‌ಡಿಎಗೆ ಜೆಡಿಯು ಮತ್ತು ಟಿಡಿಪಿ ಸೇರಿದಂತೆ 293 ಸಂಸದರ ಬೆಂಬಲವಿದೆ. ಇನ್ನೂ 69 ಸಂಸದರ ಕೊರತೆಯಿದೆ. ರಾಜ್ಯಸಭೆಯಲ್ಲಿ ಒಟ್ಟು 245 ಸದಸ್ಯರಿದ್ದಾರೆ. ಮೂರನೇ ಎರಡರಷ್ಟು ಬಹುಮತ ಎಂದರೆ 163-164 ಸದಸ್ಯರ ಬೆಂಬಲ ಬೇಕು. ಆದರೆ ಎನ್‌ಡಿಎ ಬಳಿ ಇರುವುದು 148- 150 ಸದಸ್ಯ ಬಲ. ಅಂದರೆ10-15 ಸಂಖ್ಯೆ ಕೊರತೆ ಇದೆ.

ಲೆಕ್ಕಾಚಾರ ಏನು?:

ಟಿಎಂಸಿಯಲ್ಲಿ ದೊಡ್ಡ ಮಟ್ಟದ ಬಿರುಕು ಕಾಣಿಸಿಕೊಂಡಿದೆ. ಲೋಕಸಭೆಯಲ್ಲಿನ ಟಿಎಂಸಿಯ 20 ಸಂಸದರು ಎನ್‌ಡಿಎಗೆ ಬೆಂಬಲ ನೀಡುವ ಸಾಧ್ಯತೆ ಇದೆ. ಇವರು ಸೇರಿದರೆ ಎನ್‌ಡಿಎ ಬಲ 313ಕ್ಕೆ ಏರಬಹುದು. ಕಾಂಗ್ರೆಸ್‌ ಜತೆ ಮುನಿಸಿಕೊಂಡಿರುವ ಡಿಎಂಕೆಯ 22 ಸಂಸದರನ್ನು ತನ್ನತ್ತ ಸೆಳೆಯಲು ಸಹ ಬಿಜೆಪಿ ಮಾತುಕತೆ ನಡೆಸುತ್ತಿದೆ ಎನ್ನಲಾಗುತ್ತಿದೆ. ಆದರೆ ಡಿಎಂಕೆ ಇದನ್ನು ಅಲ್ಲಗಳೆದಿದೆ. ಒಂದು ವೇಳೆ ಈ 2 ಪಕ್ಷಗಳ ಬೆಂಬಲ ಸಿಕ್ಕರೆ ಎನ್‌ಡಿಎ ಬಲ 335ಕ್ಕೆ ತಲುಪುತ್ತದೆ.  

ಇನ್ನು ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆಯ ಶಿವಸೇನೆ (ಯುಬಿಟಿ) ಪಕ್ಷದಲ್ಲಿ ಮತ್ತೊಮ್ಮೆ ಬಿರುಕು ಮೂಡುತ್ತಿದೆ. 7-9 ಸಂಸದರು ಶಿಂಧೆ ಬಣದತ್ತ (ಎನ್‌ಡಿಎ) ಒಲವು ತೋರುತ್ತಿದ್ದಾರೆ ಎಂಬ ವರದಿಗಳಿವೆ. ಕನಿಷ್ಠ 6 ಮಂದಿಯ ಬೆಂಬಲ ಸಿಕ್ಕರೆ ಎನ್‌ಡಿಎ ಸಂಖ್ಯೆ 341ಕ್ಕೆ ಏರುತ್ತದೆ. ಇನ್ನೂ ಕೆಲವು ಸಣ್ಣ ಪಕ್ಷಗಳು ಅಥವಾ ಸ್ವತಂತ್ರ ಸಂಸದರ ಬೆಂಬಲ ಸಿಕ್ಕರೆ 362ರ ಗುರಿ ಸಾಧಿಸುವುದು ಸುಲಭ. ಇದರಿಂದಾಗಿ ಎನ್‌ಡಿಎಗೆ ಮಹತ್ವದ ಮಸೂದೆಗಳನ್ನು ಶೀಘ್ರವಾಗಿ ಜಾರಿಗೆ ತರಲು ದಾರಿ ಸುಗಮವಾಗುತ್ತದೆ. ಇತ್ತೀಚೆಗೆ ಲೋಕಸಭೆಯಲ್ಲಿ ಸರ್ಕಾರ ಕ್ಷೇತ್ರ ಮರುವಿಂಗಡಣೆ ಮಸೂದೆ ಮಂಡನೆ ಮಾಡಿದಾಗ ಸರ್ಕಾರಕ್ಕೆ 54 ಮತಗಳ ಅಂತರದಿಂದ ಸೋಲಾಗಿತ್ತು.

ಇನ್ನೊಂದೆಡೆ ಜೂ.18ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆ ಬಳಿಕ ಎನ್‌ಡಿಎ ಬಲ ಹೆಚ್ಚಲಿದೆ. ರಾಜ್ಯಸಭೆಯಲ್ಲಿ ಟಿಎಂಸಿ, ಡಿಎಂಕೆ ಮುಂತಾದ ಪಕ್ಷಗಳಿಂದ ಕೂಡ ಕೆಲವು ಸದಸ್ಯರು ಬೆಂಬಲ ನೀಡುವ ಸಾಧ್ಯತೆ ಇದೆ ಎಂಬ ವರದಿಗಳಿವೆ.

2ನೇ ಆಯ್ಕೆ:

ಮೇಲ್ಕಂಡ ಲೆಕ್ಕಾಚಾರ ಎಲ್ಲಾ ಸದಸ್ಯರು ಸದನದಲ್ಲಿ ಹಾಜರಿದ್ದರೆ, ಒಂದು ವೇಳೆ ಯಾವುದೇ ಪಕ್ಷ ಮಸೂದೆ ಮಂಡನೆ ಬಳಿಕ ಮತದಾನದ ವೇಳೆ ಕಲಾಪ ಬಹಿಷ್ಕರಿಸಿ ಹೊರನಡೆದರೆ ಆಗ ಸದನದ ಬಲವೇ ಕುಸಿದು, ಸರ್ಕಾರಕ್ಕೆ ಮಸೂದೆ ಅಂಗೀಕಾರಕ್ಕೆ ಬೇಕಾದ ಮತಗಳ ಪ್ರಮಾಣವೂ ಕುಸಿಯುತ್ತದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮೋದಿ ನಡುರಾತ್ರಿ ವಿಡಿಯೋ ಮಾಡಿದ್ದು, ಭಾಗವತ್‌ ಚರ್ಚೆಗೆ ಬಂದಿದ್ದ ನಮ್ಮಿಂದ: ದೀಪ್ಕೆ
ಬೆಂಗಳೂರಿನಲ್ಲಿ ಆ.9 ‘ತುಳುನಾಡ ಆಟಿ’ ಸಂಭ್ರಮ