ಇದು ನಿರ್ದಿಷ್ಟ ಧರ್ಮದ ಸರ್ಕಾರವೋ ದೇಶದ್ದೋ? ಲೋಕಸಭೇಲಿ ಓವೈಸಿ ಕಿಡಿ

KannadaprabhaNewsNetwork | Updated : Feb 11 2024, 12:21 PM IST

ಸಾರಾಂಶ

‘ಜ.22ಕ್ಕೆ ಒಂದು ಧರ್ಮ ಇನ್ನೊಂದು ಧರ್ಮವನ್ನು ಗೆದ್ದ ಸಂದೇಶ ಕೊಟ್ಟಿದ್ದಾರೆ’ ಎಂದು ಎಂಐಎಂ ಪಕ್ಷದ ಅಸಾದುದ್ದೀನ್ ಒವೈಸಿ ಕಿಡಿಕಾರಿದ್ದಾರೆ.

ನವದೆಹಲಿ: ‘ಜ.22ರ ರಾಮ ಮಂದಿರ ಉದ್ಘಾಟನೆಯ ಮೂಲಕ ಒಂದು ಧರ್ಮ ಮತ್ತೊಂದು ಧರ್ಮವನ್ನು ಗೆದ್ದಿದೆ ಎಂಬ ಸಂದೇಶವನ್ನು ನರೇಂದ್ರ ಮೋದಿ ಸರ್ಕಾರ ದೇಶಕ್ಕೆ ನೀಡಲು ಬಯಸಿದೆಯೇ? ಮೋದಿ ಸರ್ಕಾರ ಒಂದು ನಿರ್ದಿಷ್ಟ ಧರ್ಮ, ಸಮುದಾಯದ ಸರ್ಕಾರವೇ ಅಥವಾ ಇಡೀ ದೇಶದ ಸರ್ಕಾರವೇ’ ಎಂದು ಆಲ್ ಇಂಡಿಯಾ ಮಜ್ಲಿಸ್-ಎ- ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಲೋಕಸಭೆಯಲ್ಲಿ ಪ್ರಶ್ನಿಸಿದ್ದಾರೆ.

ಶನಿವಾರ ಲೋಕಸಭೆಯಲ್ಲಿ ಐತಿಹಾಸಿಕ ರಾಮ ಮಂದಿರ ನಿರ್ಮಾಣ ಹಾಗೂ ಉದ್ಘಾಟನೆಯ ಚರ್ಚೆ ವೇಳೆ ಮಾತನಾಡಿದ ಓವೈಸಿ ‘ಸರ್ಕಾರಕ್ಕೆ ಧರ್ಮವಿದೆಯೇ? ಈ ದೇಶಕ್ಕೆ ಧರ್ಮವಿಲ್ಲ ಎಂದು ನಾನು ನಂಬುತ್ತೇನೆ. 

ದೇಶದಲ್ಲಿರುವ 17 ಕೋಟಿ ಮುಸ್ಲಿಮರಿಗೆ ನೀವು ಏನು ಸಂದೇಶ ನೀಡುತ್ತೀರಿ? ನಾನು ಬಾಬರ್, ಜಿನ್ನಾ ಅಥವಾ ಔರಂಗಜೇಬ್ ಅವರ ವಕ್ತಾರನೇ?, ನಾನು ಭಗವಾನ್ ರಾಮನನ್ನು ಗೌರವಿಸುತ್ತೇನೆ. 

ಆದರೆ ನಾನು ನಾಥೂರಾಂ ಗೋಡ್ಸೆಯನ್ನು ದ್ವೇಷಿಸುತ್ತೇನೆ ಏಕೆಂದರೆ ಸಾಯುವಾಗಲೂ ‘ಹೇ ರಾಮ್‌’ ಎಂದ ವ್ಯಕ್ತಿ (ಮಹಾತ್ಮ ಗಾಂಧಿ)ಯನ್ನು ಅವನು ಹತ್ಯೆ ಮಾಡಿದ’ ಎಂದಿದ್ದಾರೆ.

Share this article