ನಾವಡಾ (ಬಿಹಾರ): ಬಿಹಾರದ ನವಾಡಾ ಜಿಲ್ಲೆಯಲ್ಲಿ ಯುಜಿಸಿ-ನೆಟ್ ಪರೀಕ್ಷೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಗೆ ಆಗಮಿಸಿದ್ದ ಸಿಬಿಐ ತಂಡದ ಮೇಲೆ ಗ್ರಾಮಸ್ಥರು ದಾಳಿ ನಡೆಸಿದ ಆಘಾತಕಾರಿ ಘಟನೆ ನಡೆದಿದೆ. ಘಟನೆಯಲ್ಲಿ ಸಿಬಿಐ ತಂಡದ ಚಾಲಕನಿಗೆ ಗಾಯಗಳಾಗಿವೆ.
ಹೀಗಾಗಿ ದೆಹಲಿಯ ಸಿಬಿಐ ತಂಡವು ಶಂಕಿತ ಆರೋಪಿಗಳನ್ನು ಹುಡುಕಿಕೊಂಡು ಅವರನ್ನು ಬಂಧಿಸಲು ಶನಿವಾರ ಸಂಜೆ ನವಾಡಾ ಜಿಲ್ಲೆಯ ಕಾಸಿಯಾಡಿಹ್ ಗ್ರಾಮಕ್ಕೆ ತಲುಪಿತ್ತು. ಆಗ ಗ್ರಾಮಸ್ಥರು ಮಫ್ತಿಯಲ್ಲಿದ್ದ ಸಿಬಿಐ ತಂಡವನ್ನು ‘ನಕಲಿ ತಂಡ’ ಎಂದು ಭಾವಿಸಿ ಥಳಿಸಿದ್ದಾರೆ. ಅವರ ವಾಹನಗಳನ್ನೂ ಧ್ವಂಸಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ನಾಲ್ವರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಆಗಿದ್ದೇನು?:ಸಿಬಿಐ ತಂಡವು ಶನಿವಾರ ಸಂಜೆ, ಒಂದಿಬ್ಬರು ನವಾಡಾ ಪೊಲೀಸರೊಂದಿಗೆ ಕಾಸಿಯಾಹಾಡ್ ಗ್ರಾಮಕ್ಕೆ ತೆರಳಿ ಅಲ್ಲಿನ ಆರೋಪಿಗೆ ಹುಡುಕಾಟ ನಡೆಸಿತ್ತು. ಆಗ ಸುಮಾರು 200-300 ಗ್ರಾಮಸ್ಥರು, ಸಿವಿಲ್ ಡ್ರೆಸ್ ನಲ್ಲಿದ್ದ ಸಿಬಿಐ ತಂಡವನ್ನು ನಕಲಿ ಎಂದು ತಿಳಿದು ಸುತ್ತುವರೆದಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ 4 ಜನರನ್ನು ಬಿಹಾರ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.