ಸಿಡ್ನಿ: ಆಸ್ಟ್ರೇಲಿಯಾ ಸರ್ಕಾರ ತನ್ನ ದೇಶದಲ್ಲಿ 16 ವರ್ಷದೊಳಗಿನವರಿಗೆ ಸಾಮಾಜಿಕ ಮಾಧ್ಯಮಗಳ ಬಳಕೆ ನಿಷೇಧಿಸಿರುವ ಕಾನೂನು ಡಿ.10ರಿಂದ ಜಾರಿಗೆ ಬರಲಿದೆ. ಈ ಮೂಲಕ ಹದಿಹರೆಯದವರಿಗೆ ಜಾಲತಾಣ ಬಳಕೆ ನಿಷೇಧಿಸಿದ ಮೊದಲ ದೇಶ ಎನಿಸಿಕೊಂಡಿದೆ.
ಹೊಸ ಕಾನೂನಿನ ಪ್ರಕಾರ ಇನ್ಸ್ಟಾಗ್ರಾಮ್, ಫೇಸ್‌ಬುಕ್, ಟಿಕ್‌ಟಾಕ್ ಹಾಗೂ ಯೂಟ್ಯೂಬ್‌ಗಳ ಬಳಕೆಗೆ ನಿಯಂತ್ರಣ ಬೀಳಲಿದೆ. ಈಗಾಗಲೇ ಮೆಟಾ 16 ವಯೋಮಾನಕ್ಕಿಂತ ಕಡಿಮೆ ಇರುವವರ ಖಾತೆಗಳನ್ನು ಸ್ಥಗಿತಗೊಳಿಸಿದೆ. ವಾಟ್ಸಾಪ್, ಮೆಸೆಂಜರ್ ಸೇರಿದಂತೆ ಕೆಲ ಸಂದೇಶ ವಿನಿಮಯ ಆ್ಯಪ್‌ಗಳಿಗೆ ವಿನಾಯಿತಿ ದೊರೆತಿದೆ. ಒಂದು ವೇಳೆ ಆ್ಯಪ್‌ಗಳು ನಿಯಮವನ್ನು ಉಲ್ಲಂಘಿಸಿದರೆ ಸುಮಾರು 288 ಕೋಟಿ ದಂಡ ಪಾವತಿಸಬೇಕೆಂದು ಸರ್ಕಾರ ಎಚ್ಚರಿಸಿದೆ.
ನವದೆಹಲಿ: ಭಾರತದಲ್ಲಿ ಉಪಗ್ರಹ ಆಧರಿತ ಇಂಟರ್ನೆಟ್ ಸೇವೆಗೆ ಮುಂದಾಗಿರುವ ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಕಂಪನಿ, ಗೃಹ ಬಳಕೆದಾರರ ಮಾಸಿಕ ಪ್ಲ್ಯಾನ್ ಯೋಜನೆ ಅನಾವರಣ ಮಾಡಿದೆ.ಅದರನ್ವಯ ಮನೆಗಳಿಗೆ (ರೆಸಿಡೆನ್ಷಿಯಲ್ ಸಬ್‌ಸ್ಕ್ರಿಪ್ಷನ್) ಪ್ರತಿ ತಿಂಗಳು 8,600 ರು.ಗೆ ಅನ್‌ಲಿಮಿಟೆಡ್ ಡೇಟಾ ಸಿಗಲಿದೆ. 34,000 ರು. ಕೊಟ್ಟು ಸ್ಟಾರ್‌ಲಿಂಕ್ ಕಿಟ್ ಖರೀದಿಸಿದರೆ ಸ್ಯಾಟಲೈಟ್ ಡಿಶ್, ವೈ-ಫೈ ರೌಟರ್, ಕೇಬಲ್‌ಗಳು, ಗೋಡೆಗೆ ಅಳವಡಿಸಲು ಮೌಂಟಿಂಗ್ ಸಾಮಗ್ರಿಗಳು ಸಹ ಸಿಗಲಿವೆ. 30 ದಿನಗಳ ಉಚಿತ ಟ್ರಯಲ್ ವ್ಯವಸ್ಥೆಯಿದ್ದು, ಇಷ್ಟವಾಗದಿದ್ದರೆ ಹಣ ಹಿಂದಿರುಗಿಸುವ ಆಯ್ಕೆ ಇದೆ.
ಸ್ಟಾರ್‌ಲಿಂಕ್ ಭಾರತದ ಗ್ರಾಮೀಣ ಪ್ರದೇಶಗಳು, ದೂರದ ಊರುಗಳು ಮತ್ತು ಫೈಬರ್ ಬ್ರಾಡ್‌ಬ್ಯಾಂಡ್ ಇಲ್ಲದ ಜಾಗಗಳಿಗೆ ಇಂಟರ್ನೆಟ್ ಸೇವೆ ಒದಗಿಸುವ ಗುರಿ ಹೊಂದಿದೆ.