ಧೋಖಾ ಮಾಡಿದ ಪಾಕ್‌ ದೋಸ್ತ್‌ಗೆ ಭರ್ಜರಿ ಆಪರೇಷನ್‌ : ಟರ್ಕಿಗೆ ಭಾರತ ಹೊಡೆತ

KannadaprabhaNewsNetwork | Updated : May 16 2025, 06:16 AM IST

ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಮತ್ತು ಸೈನಿಕರನ್ನು ಪೂರೈಸಿ ದ್ರೋಹವೆಸಗಿದ್ದ ಟರ್ಕಿಗೆ ಭಾರತ ಮೊದಲ ದೊಡ್ಡ ಪೆಟ್ಟು ನೀಡಿದ್ದು, ದೇಶದ 9 ವಿಮಾನ ನಿಲ್ದಾಣಗಳಲ್ಲಿ ಸೇವೆ ಒದಗಿಸುತ್ತಿದ್ದ ಟರ್ಕಿ ಮೂಲದ ಕಂಪನಿಯ ಭದ್ರತಾ ಪರವಾನಗಿ ರದ್ದು ಮಾಡಿದೆ.

 ನವದೆಹಲಿ: ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಮತ್ತು ಸೈನಿಕರನ್ನು ಪೂರೈಸಿ ದ್ರೋಹವೆಸಗಿದ್ದ ಟರ್ಕಿಗೆ ಭಾರತ ಮೊದಲ ದೊಡ್ಡ ಪೆಟ್ಟು ನೀಡಿದ್ದು, ದೇಶದ 9 ವಿಮಾನ ನಿಲ್ದಾಣಗಳಲ್ಲಿ ಸೇವೆ ಒದಗಿಸುತ್ತಿದ್ದ ಟರ್ಕಿ ಮೂಲದ ಕಂಪನಿಯ ಭದ್ರತಾ ಪರವಾನಗಿ ರದ್ದು ಮಾಡಿದೆ.

ಟರ್ಕಿ ಮೂಲದ ಸೆಲೆಬಿ ಕಂಪನಿಯು ಬ್ರಿಡ್ಜ್ ಮೌಂಟೆಡ್ ಸಲಕರಣೆಗಳ ಸ್ಥಾಪನೆ ಮತ್ತು ಸರಕು ನಿರ್ವಹಣೆ ಸೇರಿದಂತೆ ಗ್ರೌಂಡ್‌ ಹ್ಯಾಂಡಲಿಂಗ್‌ ಸೇವೆಯನ್ನು ಬೆಂಗಳೂರು, ದೆಹಲಿ, ಮುಂಬೈ, ಕೊಚ್ಚಿ ಸೇರಿದಂತೆ ಭಾರತದ 9 ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒದಗಿಸುತ್ತಿದೆ. ಆದರೆ ಪಾಕಿಸ್ತಾನಕ್ಕೆ ಟರ್ಕಿ ಬೆಂಬಲ ನೀಡಿರುವುದು ಬಯಲಾದ ಬೆನ್ನಲ್ಲೇ ಈ ಕಂಪನಿಯ ಭದ್ರತಾ ಅನುಮತಿಯನ್ನು ನಾಗರಿಕ ವಿಮಾನಯಾನ ಸಚಿವಾಲಯ ತಕ್ಷಣದಿಂದ ಜಾರಿಗೆ ಬರುವಂತೆ ಭದ್ರತಾ ಕಾರಣ ನೀಡಿ ರದ್ದುಪಡಿಸಿದೆ.

ಟರ್ಕಿಯಿಂದ ಪಾಕಿಸ್ತಾನಕ್ಕೆ ಬೆಂಬಲ ವಿಚಾರ ಬಯಲಾದ ಬಳಿಕ ಭಾರತೀಯರು ‘ಬಾಯ್ಕಾಟ್‌ ಟರ್ಕಿ’ ಅಭಿಯಾನವನ್ನು ದೊಡ್ಡದಾಗಿ ಆರಂಭಿಸಿದ್ದರು. ಒಣಹಣ್ಣು, ಸೇಬು, ಅಮೃತಶಿಲೆ ಆಮದು ರದ್ದು, ಟರ್ಕಿ ಪ್ರವಾಸೋದ್ಯಮ ಬಹಿಷ್ಕಾರ ಜೊತೆಗೆ ದೆಹಲಿಯ ಜೆಎನ್‌ಯು ಒಪ್ಪಂದವೂ ರದ್ದಾಗಿತ್ತು. ಮಾತ್ರವಲ್ಲದೇ ಟರ್ಕಿ ದೇಶದ ಎಕ್ಸ್ ಖಾತೆಯೊಂದಕ್ಕೂ ನಿರ್ಬಂಧ ವಿಧಿಸಿದ್ದ ಭಾರತ ಇದೀಗ ಟರ್ಕಿ ವಿಚಾರವಾಗಿ ಮೊದಲ ದೊಡ್ಡ ಕ್ರಮ ತೆಗೆದುಕೊಂಡಿದೆ.

ವ್ಯಾಪಾರ ಸ್ಥಗಿತಕ್ಕೆ ಸಿಎಐಟಿ ಚಿಂತನೆ:

ಇನ್ನು ಟರ್ಕಿ ವಿರುದ್ಧ ಭಾರತದಲ್ಲಿ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ( ಸಿಎಐಟಿ) ಟರ್ಕಿಯೊಂದಿಗಿನ ಎಲ್ಲಾ ವ್ಯಾಪಾರ ಒಪ್ಪಂದಗಳನ್ನು ಕೊನೆಗೊಳಿಸಲು ಚಿಂತನೆ ನಡೆಸಿದೆ. ಟರ್ಕಿ ಮತ್ತು ಅಜರ್‌ಬೈಜಾನ್ ಜೊತೆ ವ್ಯಾಪಾರ ಸ್ಥಗಿತಕ್ಕೆ ಸಿಎಐಟಿ ಶುಕ್ರವಾರ ದೆಹಲಿಯಲ್ಲಿ ಸಭೆ ನಡೆಸಲಿದೆ.

ಭೂಕಂಪ ವೇಳೆ ಮೊದಲು ನೆರವು ನೀಡಿದ್ದ ಭಾರತಕ್ಕೇ ಟರ್ಕಿ ಧೋಖಾ

2023ರಲ್ಲಿ ಟರ್ಕಿ ಭೀಕರ ಭೂಕಂಪಕ್ಕೆ ತುತ್ತಾದಾಗ ಅದಕ್ಕೆ ಮೊತ್ತಮೊದಲ ನೆರವು ನೀಡಿದ ದೇಶಗಳ ಪೈಕಿ ಭಾರತ ಕೂಡ ಒಂದು. ಆಪರೇಷನ್‌ ದೋಸ್ತ್‌ (ಮಿತ್ರ) ಹೆಸರಲ್ಲಿ ಭಾರತವು ಟರ್ಕಿಗೆ ಆಹಾರ, ಸರಕು, ಪರಿಹಾರ ಸಾಮಗ್ರಿ, ವೈದ್ಯಕೀಯ ಸಾಮಗ್ರಿಗಳನ್ನು ರವಾನಿಸಿತ್ತು. ಎನ್‌ಡಿಆರ್‌ಎಫ್‌ ತಂಡ, ಶ್ವಾನಪಡೆಗಳನ್ನೂ ಕಳುಹಿಸಿಕೊಟ್ಟಿತ್ತು.