ಇಂಡೋನೇಷ್ಯಾದ ಲೆವೊಟೊಬಿ ಲಕಿ ಲಕಿ ಜ್ವಾಲಾಮುಖಿ ಸ್ಫೋಟ

KannadaprabhaNewsNetwork |  
Published : Jun 18, 2025, 11:49 PM IST
ಜ್ವಾಲಾಮುಖಿ | Kannada Prabha

ಸಾರಾಂಶ

ಇಂಡೋನೇಷ್ಯಾದ ಮೌಂಟ್ ಲೆವೊಟೊಬಿ ಲಕಿ ಲಕಿ ಜ್ವಾಲಾಮುಖಿಯಲ್ಲಿ ಮಂಗಳವಾರ ಸಂಜೆ ಬೃಹತ್ ಸ್ಫೋಟ ಸಂಭವಿಸಿದ್ದು, ದಟ್ಟ ಹೊಗೆ 10 ಕಿ.ಮೀ. ಎತ್ತರವನ್ನು ತಲುಪಿದೆ. ಸುರಕ್ಷತಾ ದೃಷ್ಟಿಯಿಂದ ಸುತ್ತಮುತ್ತಲಿನ ಹಳ್ಳಿಗಳನ್ನು ಸ್ಥಳಾಂತರಿಸಲಾಗುತ್ತಿದ್ದು, ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ.

-10 ಕಿ.ಮೀ. ಎತ್ತರಕ್ಕೆ ಸಿಡಿದ ಹೊಗೆ । 150 ಕಿ.ಮೀ.ವರೆಗೆ ಮೋಡ

- ಹಲವು ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ಸ್ಥಗಿತ

-ಬಾಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ದೆಹಲಿಗೆ ವಾಪಸ್

ಬಾಲಿ: ಇಂಡೋನೇಷ್ಯಾದ ಮೌಂಟ್ ಲೆವೊಟೊಬಿ ಲಕಿ ಲಕಿ ಜ್ವಾಲಾಮುಖಿಯಲ್ಲಿ ಮಂಗಳವಾರ ಸಂಜೆ ಬೃಹತ್ ಸ್ಫೋಟ ಸಂಭವಿಸಿದ್ದು, ದಟ್ಟ ಹೊಗೆ 10 ಕಿ.ಮೀ. ಎತ್ತರವನ್ನು ತಲುಪಿದೆ. ಸುರಕ್ಷತಾ ದೃಷ್ಟಿಯಿಂದ ಸುತ್ತಮುತ್ತಲಿನ ಹಳ್ಳಿಗಳನ್ನು ಸ್ಥಳಾಂತರಿಸಲಾಗುತ್ತಿದ್ದು, ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಮಂಗಳವಾರ ಸಂಜೆಯಿಂದ ಬುಧವಾರ ಮಧ್ಯಾಹ್ನದವರೆಗೆ ಹಲವಾರು ಸ್ಫೋಟಗಳು ಸಂಭವಿಸಿವೆ. ಮಂಗಳವಾರ ಮಧ್ಯಾಹ್ನ ಸಂಭವಿಸಿದ ಸ್ಫೋಟದಿಂದ 10 ಕಿ.ಮೀ.ಗಳಷ್ಟು ದಟ್ಟವಾದ ಬೂದು ಮೋಡಗಳು ಆಕಾಶವನ್ನು ವ್ಯಾಪಿಸಿದವು. 150 ಕಿ.ಮೀ.ಗಳಷ್ಟು ದೂರದವರೆಗೂ ಅಣಬೆಯಾಕಾರದ ದಟ್ಟ ಮೋಡಗಳು ಕಂಡುಬಂದವು.

ಸ್ಫೋಟ ತೀವ್ರ ಸ್ವರೂಪ ಪಡೆದುಕೊಂಡಿದ್ದರಿಂದ ಸುತ್ತಲಿನ 8 ಕಿ.ಮೀ. ವ್ಯಾಪ್ತಿಯ ಜನರ ಸ್ಥಳಾಂತರಕ್ಕೆ ಸೂಚಿಸಲಾಗಿದೆ.

ವಾಯುಸಂಚಾರಕ್ಕೆ ತಡೆ:ಜ್ವಾಲಾಮುಖಿಯಿಂದ ಉಂಟಾಗಿರುವ ದಟ್ಟ ಹೊಗೆಯು ವಾಯು ಸಂಚಾರದ ಮೇಲೆ ತೀವ್ರ ಪರಿಣಾಮ ಬೀರಿದೆ. ದೆಹಲಿಯಿಂದ ಬಾಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ದೆಹಲಿಗೆ ವಾಪಾಸಾಗಿದೆ. ಅಲ್ಲದೆ, ಸಿಂಗಾಪುರ್ ಏರ್‌ಲೈನ್ಸ್, ಏರ್ ನ್ಯೂಜಿಲೆಂಡ್, ಜೆಟ್‌ಸ್ಟಾರ್, ವರ್ಜಿನ್ ಆಸ್ಟ್ರೇಲಿಯಾ ಮತ್ತು ಚೀನಾದ ಜುನ್ಯಾವೊ ಏರ್‌ಲೈನ್ಸ್ ಸೇರಿದಂತೆ ಬಾಲಿಗೆ ತೆರಳುವ ಅನೇಕ ಅಂತಾರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಲಾಗಿದೆ.

==

ಒಟ್ಟಿಗೆ ಯುಪಿ ಪೊಲೀಸ್‌ ಪರೀಕ್ಷೆ ಪಾಸ್‌ ಆದ ತಂದೆ-ಮಗ!

ಮೀರತ್‌: 41 ವರ್ಷದ ತಂದೆ ಮತ್ತು 21 ಪ್ರಾಯದ ಮಗ ಒಟ್ಟಿಗೆ ಪೊಲೀಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕಾನ್ಸ್ಟೇಬಲ್‌ ಆಗಿ ನೇಮಕವಾದ ಅಚ್ಚರಿಯ ಘಟನೆ ಉತ್ತರಪ್ರದೇಶದ ಹಾಪುರದಲ್ಲಿ ನಡೆದಿದೆ. ಅವರಿಬ್ಬರೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಸಿಎಂ ಯೋಗಿ ಆದಿತ್ಯನಾಥ್‌ ಅವರಿಂದ ನೇಮಕಾತಿ ಪತ್ರ ಪಡೆದಿದ್ದಾರೆ.ಸೇನೆಯಲ್ಲಿ ಹವಲ್ದಾರ್‌ ಆಗಿದ್ದ ಯಶ್‌ಪಾಲ್‌ ಸಿಂಗ್‌, 2019ರಲ್ಲಿ ಸ್ವಯಂನಿವೃತ್ತಿ ನೀಡಿದ್ದರು. ಆ ವೇಳೆಗಾಗಲೇ ಮಗ ಶೇಖರ್‌ ನಾಗರ್‌ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ್ದು, ಪೊಲೀಸ್‌ ಆಗುವ ಕನಸು ಕಾಣುತ್ತಿದ್ದರು. ಪುತ್ರನಿಗೆ ಸಾಥ್‌ ನೀಡಿದ ಸಿಂಗ್‌, ಸತತ 2 ವರ್ಷ ಮಗನೊಂದಿಗೆ ಪೊಲೀಸ್‌ ಪರೀಕ್ಷೆಯ ಸಿದ್ಧತೆ ನಡೆಸಿದರು. ಇದರ ಫಲವಾಗಿ, ಇಬ್ಬರೂ ಏಕಕಾಲಕ್ಕೆ ನೇಮಕಗೊಂಡಿದ್ದಾರೆ.ಯಶ್‌ಪಾಲ್‌ಗೆ ಶಹಜಹಾನ್‌ಪುರದಲ್ಲಿ ಪೊಲೀಸ್‌ ತರಬೇತಿ ಆರಂಭವಾಗಿದ್ದು, ಶೇಖರ್‌ ಬರೇಲಿಯಲ್ಲಿ ಕೆಲಸ ಶುರು ಮಾಡಲಿದ್ದಾರೆ.

==

ಇನ್ನು 15 ದಿನದಲ್ಲಿ ವೋಟರ್‌ ಐಡಿ ಡೆಲಿವರಿ: ಚು. ಆಯೋಗ

ನವದೆಹಲಿ: ಇನ್ನುಮುಂದೆ ಮತದಾರರ ಚೀಟಿಯನ್ನು 15 ದಿನಗಳ ಒಳಗಾಗಿ ತಲುಪಿಸುವ ವಿಧಾನವನ್ನು ಪರಿಚಯಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.ಹೊಸ ವಿಧಾನದಲ್ಲಿ, ವೋಟರ್‌ ಐಡಿ ತಲುಪುವ ತನಕ ಅದರ ಪ್ರತಿ ಹಂತವನ್ನು ಚುನಾವಣಾ ನೋಂದಣಿ ಅಧಿಕಾರಿಗಳು ಟ್ರ್ಯಾಕ್‌ ಮಾಡುತ್ತಾರೆ. ಈ ಬಗ್ಗೆ ಮತದಾರರಿಗೂ ಎಸ್‌ಎಂಎಸ್‌ ಮೂಲಕ ನಿರಂತರ ಸಂದೇಶ ಲಭಿಸುತ್ತಿರುತ್ತದೆ. ಈ ಮೂಲಕ, ನೊಂದಣಿ, ಬದಲಾವಣೆ ಅಥವಾ ಅಪ್‌ಡೇಟ್‌ ಮಾಡಿಸಲಾದ ವೋಟರ್‌ ಐಡಿಗಳನ್ನು ಇನ್ನು ಸಂಬಂಧಿಸಿದವರಿಗೆ ತ್ವರಿತವಾಗಿ ಡೆಲಿವರಿ ಮಾಡಲಾಗುವುದು. ಈ ಮೊದಲು 1 ತಿಂಗಳಿಗೂ ಅಧಿಕ ಸಮಯ ಹಿಡಿಸುತ್ತಿತ್ತು.

==

ಹನಿಮೂನ್‌ ಮರ್ಡರ್‌: ಹೊಸ ಶಂಕಿತನ ಹೆಸರು ಬೆಳಕಿಗೆ

ಹನಿಮೂನ್‌ ಮರ್ಡರ್‌: ಹೊಸ ಶಂಕಿತನ ಹೆಸರು ಬೆಳಕಿಗೆ

- ಸಂಜಯ್‌-ಸೋನಂ ಮಧ್ಯೆ 119 ಕಾಲ್‌

ಶಿಲ್ಲಾಂಗ್‌: ಮೇಘಾಲಯದಲ್ಲಿ ಮಧುಚಂದ್ರದ ವೇಳೆ ಸಂಭವಿಸಿದ ಇಂದೋರ್ ಉದ್ಯಮಿ ರಾಜಾ ರಘುವಂಶಿ ಹತ್ಯೆ ಪ್ರಕರಣದ ತನಿಖೆಯಲ್ಲಿ ಹೊಸ ಹೆಸರು ಬೆಳಕಿಗೆ ಬಂದಿದೆ. ತನಿಖೆ ವೇಳ ಸಂಜಯ್ ವರ್ಮಾ ಎಂಬಾತನಿಗೂ, ರಾಜಾನನ್ನು ಕೊಲೆ ಮಾಡಿಸಿದ ಆತನ ಪತ್ನಿ ಸೋನಂಗೂ ನಂಟಿತ್ತು ಎಂದು ಗೊತ್ತಾಗಿದೆ.ಪೊಲೀಸರು ಪಡೆದ ಕರೆ ದತ್ತಾಂಶ ದಾಖಲೆಗಳ ಪ್ರಕಾರ, ಮಾ.1ರಿಂದ ಮಾ.25 ರವರೆಗೆ, ಸೋನಂ ಮತ್ತು ಸಂಜಯ್ 119 ಫೋನ್‌ ಕರೆಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಈಗ ಆತನ ಮೊಬೈಲ್ ಸಂಖ್ಯೆ ಸ್ವಿಚ್ ಆಫ್ ಆಗಿದೆ.4 ಮೊಬೈಲ್‌ ನಾಪತ್ತೆ:

ಈ ನಡುವೆ ಸೋನಂ 3 ಮೊಬೈಲ್‌ ಬಳಸುತ್ತಿದ್ದಳು. ಅವು ಎಲ್ಲ ನಾಪತ್ತೆ ಆಗಿವೆ. ಅವುಗಳಿಗೆ ಶೋಧ ನಡೆದಿದೆ. ಇನ್ನು ರಾಜಾನ 1 ಮೊಬೈಲನ್ನು ಆಕೆ ಒಡೆದು ಹಾಕಿದ್ದಾಳೆ. ಇವುಗಳ ವಾಟ್ಸಾಪ್‌ ದತ್ತಾಂಶ ಸಂಗ್ರಹಕ್ಕೆ ಪೊಲೀಸರು ವಾಟ್ಸಾಪ್‌ ಕಂಪನಿ ಮೊರೆ ಹೊಗಿದ್ದಾರೆ.ಮೇ 23ರಂದು, ಮೇಘಾಲಯದ ಪೂರ್ವ ಖಾಸಿ ಬೆಟ್ಟಗಳಲ್ಲಿ ರಾಜಾನನ್ನು ಕೊಲ್ಲಲಾಗಿತ್ತು. ಇದಾದ 16 ದಿನ ನಂತರ ಆತನನ್ನು ಕೊಂದಿದ್ದು ಸೋನಂ ಎಂದು ಗೊತ್ತಾಗಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ