ಸರ್ಕಾರಿ ಉದ್ಯೋಗದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಕ್ಕೆ ಮೀಸಲು ಹಿಂಸಾಚಾರಕ್ಕೆ 105 ಬಲಿ

KannadaprabhaNewsNetwork | Updated : Jul 20 2024, 05:18 AM IST
ಬಾಂಗ್ಲಾದೇಶ | Kannada Prabha

ಸರ್ಕಾರಿ ಉದ್ಯೋಗದಲ್ಲಿ 1971ರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಕುಟುಂಬದವರಿಗೆ ಶೇ.30ರಷ್ಟು ಮೀಸಲು ನೀಡುವ ನೀತಿ ವಿರೋಧಿಸಿ ಬಾಂಗ್ಲಾದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ.  

ಢಾಕಾ: ಸರ್ಕಾರಿ ಉದ್ಯೋಗದಲ್ಲಿ 1971ರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಕುಟುಂಬದವರಿಗೆ ಶೇ.30ರಷ್ಟು ಮೀಸಲು ನೀಡುವ ನೀತಿ ವಿರೋಧಿಸಿ ಬಾಂಗ್ಲಾದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿ ಅಶ್ರುವಾಯು ಸಿಡಿಸಲಾಗಿದೆ. ಸಾವಿನಕ್ಕೆ 105ಕ್ಕೆ ಏರಿಕೆ ಆಗಿದೆ.

ಇದೇ ವೇಳೆ, ಬಾಂಗ್ಲಾದೇಶದ ನರಸಿಂಗಡಿ ಜಿಲ್ಲೆಯ ಜೈಲಿಗೆ ವಿದ್ಯಾರ್ಥಿ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದು, ಅದಕ್ಕೂ ಮೊದಲು ಮಧ್ಯ ನೂರಾರು ಕೈದಿಗಳನ್ನು ಬಿಡುಗಡೆ ಮಾಡಿದ್ದಾರೆ. ‘ಕೈದಿಗಳು ಜೈಲಿನಿಂದ ಓಡಿಹೋದರು ಮತ್ತು ಪ್ರತಿಭಟನಾಕಾರರು ಜೈಲಿಗೆ ಬೆಂಕಿ ಹಚ್ಚಿದರು’ ಎಂದು ಸ್ಥಳೀಯರು ಹೇಳಿದ್ದಾರೆ.

ಪ್ರತಿಭಟನೆ ಹತ್ತಿಕ್ಕಲು ಸರ್ಕಾರ ರಾಜಧಾನಿ ಢಾಕಾದಲ್ಲಿ ಮತ್ತಷ್ಟು ಭದ್ರತಾ ಸಿಬ್ಬಂದಿ ನಿಯೋಜಿಸಿದೆ. ಜೊತೆಗೆ ರಾಜಧಾನಿಯಲ್ಲಿ ಎಲ್ಲಾ ರೀತಿಯ ಪ್ರತಿಭಟನೆ ನಿಷೇಧಿಸಿದ್ದು, ಮೊಬೈಲ್‌ ಮತ್ತು ಇಂಟರ್‌ನೆಟ್‌ ಸೇವೆ ಸ್ಥಗಿತಗೊಳಿಸಿದೆ.ದೇಶದಲ್ಲಿ ಆರ್ಥಿಕತೆ ಕುಸಿದು, ನಿರುದ್ಯೋಗ ಹೆಚ್ಚಾಗಿರುವ ಹೊತ್ತಿನಲ್ಲೇ ಆರಂಭವಾಗಿರುವ ಈ ಪ್ರತಿಭಟನೆ ಪ್ರಧಾನಿ ಶೇಖ್‌ ಹಸೀನಾ ಸರ್ಕಾರದ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ.

ಮೀಸಲು ನೀತಿ ತಾರತಮ್ಯವಾಗಿದೆ. ಇದು ಶೇಖ್‌ ಹಸೀನಾ ಪಕ್ಷದ ಕಾರ್ಯಕರ್ತರಿಗೆ ಹೆಚ್ಚು ಲಾಭ ತರುವಂತಿದೆ. ಹೀಗಾಗಿ ಮೀಸಲು ನೀತಿ ತೆಗೆಯಬೇಕು ಎಂಬುದು ವಿದ್ಯಾರ್ಥಿಗಳ ಆಗ್ರಹ. ಇದಕ್ಕೆ ವಿಪಕ್ಷ ಖಲೀದಾ ಜಿಯಾ ಅವರ ಪಕ್ಷ ಕೂಡಾ ಬೆಂಬಲ ನೀಡಿದೆ.ಆದರೆ ಮೀಸಲು ನೀತಿಯನ್ನು ಸರ್ಕಾರ ಕೂಡಾ ಸಮರ್ಥಿಸಿಕೊಂಡಿದೆ. ಜೊತೆಗೆ ಈ ಹಿಂದೆ 2018ರಲ್ಲಿ ಇದೇ ರೀತಿಯ ಪ್ರತಿಭಟನೆ ಕಾರಣಕ್ಕೆ ಮೀಸಲು ರದ್ದುಪಡಿಸಿದ ಬಳಿಕ ಸ್ವತಃ ಹೈಕೋರ್ಟ್‌ ಮೀಸಲು ಜಾರಿ ಮಾಡಿತ್ತು ಎಂದು ವಿದ್ಯಾರ್ಥಿಗಳಿಗೆ ಸ್ಪಷ್ಟಪಡಿಸಿದ್ದಾರೆ.

ಭಾರತೀಯರು ಸುರಕ್ಷಿತ:ಬಾಂಗ್ಲಾದೇಶದಲ್ಲಿ 8000 ವಿದ್ಯಾರ್ಥಿಗಳು ಸೇರಿ 15000 ಭಾರತೀಯರು ಇದ್ದು, ಅವರೆಲ್ಲಾ ಸುರಕ್ಷಿತವಾಗಿದ್ದಾರೆ ಎಂದು ಭಾರತದ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ. ಈ ನಡುವೆ 300 ಭಾರತೀಯರು ಮರಳ ಬಂದಿದ್ದಾರೆ.