ಢಾಕಾ/ಚಿತ್ತಗಾಂಗ್: ದೀಪು ಚಂದ್ರದಾಸ್ ಎಂಬ ಹಿಂದು ವ್ಯಕ್ತಿಯನ್ನು ಹತ್ಯೆಗೈದು, ಮರಕ್ಕೆ ಕಟ್ಟಿ ಬೆಂಕಿ ಹಚ್ಚಿದ ಭೀಕರ ಘಟನೆ ಮಾಸುವ ಮುನ್ನವೇ ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದು ಯುವಕನನ್ನು ಗುಂಪೊಂದು ಹತ್ಯೆಗೈದಿದೆ. ಮೃತ ವ್ಯಕ್ತಿಯನ್ನು ಅಮೃತ್ ಮಂಡಲ್ ಎಂದು ಗುರುತಿಸಲಾಗಿದೆ.
ಮತ್ತೊಂದೆಡೆ ಹಿಂದೂಗಳ ಮನೆಯನ್ನು ಗುರಿಯಾಗಿಸಿ ಬೆಂಕಿ ಹಚ್ಚುವ ಕೃತ್ಯಗಳು ಮುಂದುವರೆದಿದ್ದು, ಅಲ್ಪಸಂಖ್ಯಾತ ಸಮುದಾಯ ಜೀವಭಯದಿಂದ ಜೀವನ ಸಾಗಿಸುವಂತಾಗಿದೆ. ಈ ನಡುವೆ ದಾಳಿಕೋರರ ಮಾಹಿತಿ ಕೊಟ್ಟವರಿಗೆ ಬಾಂಗ್ಲಾ ಪೊಲೀಸರು ಬಹುಮಾನ ಘೋಷಿಸಿದ್ದಾರೆ.
ರಾಜ್‌ಭರಿ ಜಿಲ್ಲೆಯ ಹೊಸೈದೊಂಗ ಗ್ರಾಮಕ್ಕೆ ಸೇರಿದವನಾದ ಅಮೃತ್ ಮಂಡಲ್, ಸಾಮ್ರಾಟ್ ಬಹಿನಿ ಎಂಬ ಸಂಘಟನೆಯ ಮುಖ್ಯಸ್ಥನಾಗಿದ್ದ. ಈತನ ಮೇಲೆ ಗುಂಪೊಂದು ಬುಧವಾರ ರಾತ್ರಿ ಭಾರೀ ಪ್ರಮಾಣದ ಹಲ್ಲೆ ನಡೆಸಿ ಹತ್ಯೆಗೈದಿದೆ.
ಮಾಜಿ ಪ್ರಧಾನಿ ಶೇಖ್ ಹಸೀನಾ ಕಳೆದ ವರ್ಷ ಬಾಂಗ್ಲಾ ತೊರೆದು ಭಾರತಕ್ಕೆ ತೆರಳಿದ್ದ ವೇಳೆ ಈತ ಕೂಡಾ ದೇಶ ತೊರೆದಿದ್ದ. ಇತ್ತೀಚೆಗಷ್ಟೇ ಗ್ರಾಮಕ್ಕೆ ಮರಳಿದ್ದ ಅಮೃತ್‌ನನ್ನು ಗುಂಪು, ಸುಲಿಗೆ ಆರೋಪದ ಮಾಡಿ ಹತ್ಯೆಗೈದಿದೆ. ಈ ನಡುವೆ ಹತ್ಯೆಗೆ ಕಾರಣವೇನು ಎಂದು ತನಿಖೆ ಮಾಡಲಾಗುವುದು ಎಂದು ಪೊಲಿಸರು ಹೇಳಿದ್ದಾರೆ.
ಮಂಗಳವಾರ ರಾತ್ರಿ, ಕತಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಶುಖ್ ಶಿಲ್ ಮತ್ತು ಅನಿಲ್ ಶಿಲ್ ಎಂಬುವವರ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಒಳಗಿದ್ದವರು ಹೊರಬರಲು ಯತ್ನಿಸಿದಾಗ, ಬಾಗಿಲುಗಳಿಗೆ ಹೊರಗಿಂದ ಚಿಲಕವಿಕ್ಕಿದ್ದು ತಿಳಿದುಬಂದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ 8 ಮಂದಿ ತಗಡಿನ ಶೀಟ್ ಮತ್ತು ಬಿದಿರಿನ ಬೇಲಿಯನ್ನು ತುಂಡರಿಸಿ ಹೊರಬಂದು ಬಚಾವಾಗಿದ್ದಾರೆ. ಕಳೆದ 5 ದಿನಗಳಲ್ಲಿ 3 ಪ್ರದೇಶಗಳಲ್ಲಿ ಇದೇ ರೀತಿ ಹಿಂದೂಗಳಿಗೆ ಸೇರಿದ 7 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ‘ಹಿಂದೂಗಳ ಮನೆಗೆ ಹೊರಗಿಂದ ಚಿಲಕಹಾಕಿ ಬಳಿಕ ಬೆಂಕಿ ಹಚ್ಚಲಾಗುತ್ತಿದೆ. ಒಳಗಿದ್ದವರು ತಪ್ಪಿಸಿಕೊಳ್ಳಬಾರದೆಂದು ಹೀಗೆ ಮಾಡುತ್ತಿದ್ದಾರೆ’ ಎಂದು ಕೋಲ್ಕತಾ ಇಸ್ಕಾನ್‌ನ ಉಪಾಧ್ಯಕ್ಷ ರಾಧಾರಮಣ ದಾಸ್ ಆರೋಪಿಸಿದ್ದಾರೆ.
ಬಹುಮಾನ:
ಈ ನಡುವೆ ಚಿತ್ತಗಾಂಗ್‌ನಲ್ಲಿ ಸುಟ್ಟ ಮನೆಗೆ ಬುಧವಾರ ಭೇಟಿ ನೀಡಿದ ಪೊಲೀಸ್ ಅಧಿಕಾರಿ ಅಹ್ಸನ್ ಹಬೀಬ್, ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚುವವರ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.