ಬಾಂಗ್ಲಾ ನೋಟುಗಳಿಂದ ಹಸೀನಾ ತಂದೆ ಬಂಗ ಬಂಧು ಮುಜಿಬುರ್‌ ರೆಹಮಾನ್‌ ಫೋಟೋಗೆ ಕೊಕ್‌

KannadaprabhaNewsNetwork | Updated : Dec 06 2024, 09:51 AM IST

ಸಾರಾಂಶ

ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್‌ ಹಸೀನಾ ನಿರ್ಗಮನದ ನಂತರ ಅಧಿಕಾರವನ್ನು ಕೈಗೆತ್ತಿಕೊಂಡಿರುವ ಯೂನಸ್‌ ನೇತೃತ್ವದ ಮಧ್ಯಂತರ ಸರ್ಕಾರ ತನ್ನ ನೋಟುಗಳಿಂದ ಬಾಂಗ್ಲಾ ಸ್ಥಾಪಕ, ಹಸೀನಾ ತಂದೆ ಬಂಗಬಂಧು ಮುಜಿಬುರ್‌ ರೆಹಮಾನ್‌ ಅವರ ಚಿತ್ರವನ್ನು ಕೈಬಿಟ್ಟಿದೆ.

ಢಾಕಾ: ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್‌ ಹಸೀನಾ ನಿರ್ಗಮನದ ನಂತರ ಅಧಿಕಾರವನ್ನು ಕೈಗೆತ್ತಿಕೊಂಡಿರುವ ಯೂನಸ್‌ ನೇತೃತ್ವದ ಮಧ್ಯಂತರ ಸರ್ಕಾರ ತನ್ನ ನೋಟುಗಳಿಂದ ಬಾಂಗ್ಲಾ ಸ್ಥಾಪಕ, ಹಸೀನಾ ತಂದೆ ಬಂಗಬಂಧು ಮುಜಿಬುರ್‌ ರೆಹಮಾನ್‌ ಅವರ ಚಿತ್ರವನ್ನು ಕೈಬಿಟ್ಟಿದೆ.

ಅಲ್ಲಿನ ಕೇಂದ್ರೀಯ ಬ್ಯಾಂಕ್‌ ಇದೀಗ 20, 100, 500 ಹಾಗೂ 1,000 ಮುಖಬೆಲೆಯ ನೋಟುಗಳಲ್ಲಿ ರೆಹಮಾನ್‌ರ ಚಿತ್ರದ ಬದಲು ಧಾರ್ಮಿಕ ರಚನೆಗಳು, ಬಂಗಾಳದ ಸಂಸ್ಕೃತಿ ಹಾಗೂ ಜುಲೈನಲ್ಲಿ ನಡೆದ ದಂಗೆಯನ್ನು ಪ್ರತಿಬಿಂಬಿಸುವ ಚಿತ್ರಗಳನ್ನು ಮುದ್ರಿಸುತ್ತಿದ್ದು, ಇವುಗಳು ಮುಂದಿನ 6 ತಿಂಗಳಲ್ಲಿ ಚಲಾವಣೆಗೆ ಬರುವ ನಿರೀಕ್ಷೆಯಿದೆ ಎಂದು ಬ್ಯಾಂಕ್‌ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

ಬಿಟ್‌ಕಾಯಿನ್‌ ಮೌಲ್ಯ 1 ಲಕ್ಷ ಡಾಲರ್‌ಗೆ: ಸಾರ್ವಕಾಲಿಕ ಗರಿಷ್ಠ

ನ್ಯೂಯಾರ್ಕ್‌: ವಿಶ್ವದ ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿ ಆಗಿರುವ ಬಿಟ್‌ಕಾಯಿನ್ 1,00,000 (1 ಲಕ್ಷ ಡಾಲರ್) ಗುರಿಯನ್ನು ಸೋಮವಾರ ದಾಟಿದೆ. ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಗೆದ್ದ ಬಳಿಕ ನಾಗಾಲೋಟದಲ್ಲಿರುವ ಬಿಟ್‌ಕಾಯಿನ್‌, ಈ ಮೂಲಕ ಸಾರ್ವಕಾಲಿಕ ಗರಿಷ್ಠ ಬೆಲೆ ದಾಖಲಿಸಿದೆ.ಕ್ರಿಪ್ಟೋಕರೆನ್ಸಿ ಪ್ರವರ್ತಕ ಪಾಲ್ ಅಟ್ಕಿನ್ಸ್ ಅವರನ್ನು ಅಮೆರಿಕದ ಷೇರು ಆಯೋಗದ ಮುಂದಿನ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಲು ಉದ್ದೇಶಿಸಲಾಗಿದೆ ಎಂದು ಟ್ರಂಪ್ ನೀಡಿರುವ ಹೇಳಿಕೆ ಈ ಈ ಮೈಲಿಗಲ್ಲಿಗೆ ಕಾರಣವಾಗಿದೆ.

ನವೆಂಬರ್ 5ರ ಅಮೆರಿಕ ಚುನಾವಣೆಯಲ್ಲಿ ಟ್ರಂಪ್ ಗೆದ್ದ ನಂತರ ಬಿಟ್‌ಕಾಯಿನ್ ಅಭೂತಪೂರ್ವ ಎತ್ತರಕ್ಕೆ ಏರಿದೆ. ಕ್ರಿಪ್ಟೋಕರೆನ್ಸಿ ಮೌಲ್ಯ ನ.5ರ ಚುನಾವಣಾ ದಿನದಂದು 69,374 ಡಾಲರ್‌ ಇತ್ತು. ಅದು ಬುಧವಾರ ನಾಟಕೀಯ ರೀತಿಯಲ್ಲಿ ಬುಧವಾರ 103,713 ಡಾಲರ್‌ ವರೆಗೆ ಏರಿದೆ.

ಮುಸ್ಲಿಮರು ಗೋಮಾಂಸ ಸೇವನೆ ನಿಲ್ಲಿಸಬೇಕು: ಮೌಲಾನಾ ಕರೆ

ಬರೇಲಿ: ‘ಅಸ್ಸಾಂನಲ್ಲಿನ ಮುಸ್ಲಿಮರು ಗೋಮಾಂಸ ಸೇವನೆಯನ್ನು ತಿನ್ನುವುದನ್ನು ನಿಲ್ಲಿಸಬೇಕು’ ಎಂದು ಇಸ್ಲಾಮಿಕ್ ಧರ್ಮಗುರು ಮೌಲಾನಾ ಶಹಾಬುದ್ದೀನ್ ರಿಜ್ವಿ ಬರೇಲ್ವಿ ಕರೆ ನೀಡಿದ್ದಾರೆ.ಅಸ್ಸಾಂನಲ್ಲಿ ಗೋಮಾಂಸ ನಿಷೇಧ ಕಾಯ್ದೆಯನ್ನು ಜಾರಿಗೆ ತಂದ ಬೆನ್ನಲ್ಲೇ ಈ ಕುರಿತು ಪ್ರತಿಕ್ರಿಯಿಸಿದ ಅವರು, ‘ಗೋಮಾಂಸ ನಿಷೇಧ ಮುಸ್ಲಿಂ ಸಮುದಾಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇಸ್ಲಾಂ ಗೋಮಾಂಸ ಸೇವನೆಯನ್ನು ಕಡ್ಡಾಯಗೊಳಿಸುವುದಿಲ್ಲ. ಜನರು ವೈಯುಕ್ತಿಕ ಆಧಾರದ ಮೇಲೆ ತಿನ್ನುತ್ತಾರೆ. ಮುಸ್ಲಿಮರು ಗೋಮಾಂಸ ಸೇವನೆಯಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನಂಬಿದಂತಿದೆ. ಅಸ್ಸಾಂನಲ್ಲಿರುವ ಮುಸ್ಲಿಮರಿಗೆ ಗೋಮಾಂಸ ತಿನ್ನದೇ ಬದುಕಲು ಕರೆ ನೀಡುತ್ತೇನೆ. ಸಾವು ಮತ್ತು ಜೀವನ ದೇವರ ಕೈಯಲ್ಲಿದೆ’ ಎಂದರು.

‘ಶರ್ಮಾ ಮುಸ್ಲಿಂ ವಿರುದ್ಧ ಮನಸ್ಥಿತಿಯನ್ನು ಹೊಂದಿದ್ದಾರೆ’ ಎಂದು ಇದೇ ವೇಳೆ ಕಿಡಿ ಕಾರಿದರು.

ದಿಲ್ಲಿ ಹವೆ ಸುಧಾರಣೆ: ಗ್ರಾಪ್‌-4, ಗ್ರಾಪ್‌-3 ನಿರ್ಬಂಧ ಸಡಿಲಿಕೆ

ನವದೆಹಲಿ: ರಾಷ್ಟ್ರ ರಾಜಧಾನಿ ವಲಯದಲ್ಲಿ ವಾಯು ಗುಣಮಟ್ಟ ಕೊಂಚ ಸುಧಾರಣೆಯಾದ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಿಸಲು ಹೇರಲಾಗಿದ್ದ 4ನೇ ಹಂತದ ಗ್ರಾಪ್‌ ನಿರ್ಬಂಧಗಳನ್ನು ಸಡಿಲಿಸುವಂತೆ ಸುಪ್ರೀಂ ಕೋರ್ಟ್‌ ವಾಯು ಗುಣಮಟ್ಟ ನಿರ್ವಹಣಾ ಆಯೋಗಕ್ಕೆ ಸೂಚಿಸಿದೆ. ಇದರ ಬೆನ್ನಲ್ಲೇ ಸರ್ಕಾರ ಗ್ರಾಪ್-4 ಜತೆ ಗ್ರಾಪ್-3 ನಿರ್ಬಂಧವನ್ನೂ ಸಡಿಲಿಸಿದೆ.ಇದರಿಂದಾಗಿ ಡೀಸೆಲ್‌ ಟ್ರಕ್ ಸಂಚಾರ, ಕಟ್ಟಡ ನಿರ್ಮಾಣ, ಶಾಲೆಗಳ ಪುನಾರಂಭಕ್ಕೆ ಅವಕಾಶ ಸಿಗಲಿದೆ. ವರ್ಕ್‌ ಫ್ರಂ ಹೋಂ ಅಂತ್ಯವಾಗಲಿದೆ. ಕಳೆದ 4 ದಿನಗಳಲ್ಲಿ ಈ ವಲಯದ ವಾಯು ಗುಣಮಟ್ಟ 300 ಅಂಕ ದಾಟದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

2ನೇ ಹಂತದ ನಿರ್ಬಂಧದ ಅಡಿಯಲ್ಲಿ ಗ್ರಾಪ್‌-3ರ ಕೆಲ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ನ್ಯಾ। ಅಭಯ್‌ ಎಸ್‌. ಒಕಾ ಹಾಗೂ ಅಗಸ್ಟಿನ್‌ ಜಾರ್ಜ್‌ ಮಾಶಿ ಅವರ ಪೀಠ ಸೂಚಿಸಿದ್ದು, ಮತ್ತೆ ವಾಯು ಗುಣಮಟ್ಟ(ಎಕ್ಯುಐ) 350 ಅಂಕ ದಾಟಿದರೆ 3ನೇ ಹಂತ ಹಾಗೂ 400 ಅಂಕ ದಾಟಿದರೆ 4ನೇ ಹಂತದ ನಿರ್ಬಂಧಗಳನ್ನು ಹೇರುವುದಾಗಿ ತಿಳಿಸಿದೆ.

ವಿವಾದಿತ ವಕ್ಫ್‌ ಆಸ್ತಿಗಳ ಮಾಹಿತಿ ನೀಡಿ: ಪಾಲ್‌ ಕೋರಿಕೆ

ನವದೆಹಲಿ: ತಮ್ಮ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿರುವ ವಕ್ಫ್‌ನ ಎಲ್ಲಾ ವಿವಾದಿತ ಆಸ್ತಿಗಳ ಕುರಿತು ಮಾಹಿತಿ ನೀಡುವಂತೆ ವಕ್ಫ್‌ ಮಸೂದೆ ತಿದ್ದುಪಡಿಗೆ ರಚಿಸಲಾಗಿರುವ ಸಮಿತಿಯ ಅಧ್ಯಕ್ಷ ಜಗದಂಬಿಕಾ ಪಾಲ್‌ ಎಲ್ಲಾ ರಾಜ್ಯ ಸರ್ಕಾರಗಳಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ವಕ್ಫ್‌ ಸಮಿತಿಯ ಅವಧಿ ವಿಸ್ತರಣೆಯಾದ ನಂತರ ನಡೆದ ಮೊದಲ ಸಮಿತಿ ಸಭೆಯ ಬಳಿಕ ಪಾಲ್‌ ಈ ಮನವಿ ಮಾಡಿದ್ದಾರೆ.

Share this article