ಕ್ರಿಕೆಟ್‌ ಸಂಭ್ರಮಗಳಿಗೆ ಬಿಸಿಸಿಐ ಮೂಗುದಾರ!

KannadaprabhaNewsNetwork |  
Published : Jun 23, 2025, 01:17 AM ISTUpdated : Jun 23, 2025, 03:51 AM IST
ಬಿಸಿಸಿಐ | Kannada Prabha

ಸಾರಾಂಶ

ಇತ್ತೀಚೆಗೆ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ನಡೆದ ಭೀಕರ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಘಟನೆ ಬೆನ್ನಲ್ಲೇ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಎಚ್ಚೆತ್ತಿದೆ.

 ನವದೆಹಲಿ: ಇತ್ತೀಚೆಗೆ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ನಡೆದ ಭೀಕರ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಘಟನೆ ಬೆನ್ನಲ್ಲೇ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಎಚ್ಚೆತ್ತಿದೆ. ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂದೆ ಕೆಲ ಮಾರ್ಗಸೂಚಿಗಳನ್ನು ರಚಿಸಿದೆ. ಈ ಬಗ್ಗೆ ಬಿಸಿಸಿಐ ಪ್ರಸ್ತಾಪ ಮುಂದಿಟ್ಟಿದ್ದು, ಯಾವಾಗ ಜಾರಿಗೊಳಿಸಲಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಈ ಕುರಿತು ಮಾತನಾಡಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್‌ ಸೈಕಿಯಾ, ‘ಕಾಲ್ತುಳಿತದಂತಹ ಅವಘಡ ಭವಿಷ್ಯದಲ್ಲಿ ಮರುಕಳಿಸದಂತೆ ಬಿಸಿಸಿಐ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ’ ಎಂದಿದ್ದಾರೆ. ಇನ್ನು ಮುಂದೆ ತಂಡಗಳು ಸಂಭ್ರಮಾಚರಣೆ ಸೇರಿದಂತೆ ಯಾವುದೇ ಕಾರ್ಯಕ್ರಮ ಆಯೋಜಿಸಬೇಕಿದ್ದರೆ ಅದಕ್ಕೆ ಸರ್ಕಾರ, ಬಿಸಿಸಿಐ, ಪೊಲೀಸ್‌ ಇಲಾಖೆಯ ಅನುಮತಿ ಅಗತ್ಯ. ಜೊತೆಗೆ 4ರಿಂದ 5 ಹಂತದ ಭದ್ರತಾ ವ್ಯವಸ್ಥೆ ಕೂಡಾ ಜಾರಿಗೊಳಿಸಬೇಕು ಎಂದು ಬಿಸಿಸಿಐ ತಿಳಿಸಿದೆ.----ಬಿಸಿಸಿಐ ಪ್ರಸ್ತಾಪಿಸಿರುವ ಮಾರ್ಗಸೂಚಿ

1. ಟ್ರೋಫಿ ಗೆದ್ದ 3-4 ದಿನಗಳ ಒಳಗೆ ಯಾವುದೇ ತಂಡಕ್ಕೆ ಸಂಭ್ರಮಾಚರಣೆಗೆ ಅವಕಾಶವಿಲ್ಲ.

2. ಆತುರದ ಮತ್ತು ಕಳಪೆ ನಿರ್ವಹಣೆಯ ಕಾರ್ಯಕ್ರಮಗಳನ್ನು ತಪ್ಪಿಸಲು ತ್ವರಿತ ಬದಲಾವಣೆಯನ್ನು ಅನುಮತಿಸಲಾಗುವುದಿಲ್ಲ.

3. ತಂಡಗಳು ಸಂಭ್ರಮಾಚರಣೆ ಆಯೋಜಿಸುವ ಮೊದಲು ಬಿಸಿಸಿಐನಿಂದ ಅನುಮತಿ ಪಡೆಯಬೇಕು.

4. ಮಂಡಳಿಯಿಂದ ಲಿಖಿತ ಪೂರ್ವಾನುಮತಿ ಇಲ್ಲದೆ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ.

5. ಕಡ್ಡಾಯವಾಗಿ 4ರಿಂದ 5 ಹಂತದ ಭದ್ರತಾ ಪ್ರೋಟೋಕಾಲ್‌ ಪಾಲಿಸಬೇಕು.

6. ಕಾರ್ಯಕ್ರಮ ನಡೆಯುವ ಸ್ಥಳ, ಆಟಗಾರರ ಪ್ರಯಾಣದ ವೇಳೆ ಸೂಕ್ತ ಭದ್ರತೆ ಅಗತ್ಯ.

7. ಆಟಗಾರರು ವಿಮಾನ ನಿಲ್ದಾಣದಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸುವಾಗ ಭದ್ರತಾ ವ್ಯವಸ್ಥೆ ಇರಬೇಕು.

8. ಕಾರ್ಯಕ್ರಮ ಪೂರ್ಣಗೊಳ್ಳುವವವರೆಗೂ ಆಟಗಾರರು ಮತ್ತು ಸಿಬ್ಬಂದಿಗೆ ಸಂಪೂರ್ಣ ಭದ್ರತೆ ಒದಗಿಸಬೇಕು.

9. ಕಾರ್ಯಕ್ರಮಕ್ಕೆ ಜಿಲ್ಲಾ ಪೊಲೀಸ್, ರಾಜ್ಯ ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು.

10. ಸಂಭ್ರಮಾಚರಣೆಯನ್ನು ಕಾನೂನು ಬದ್ಧ ಮತ್ತು ಸುರಕ್ಷಿತವಾಗಿ ನಡೆಸಲು ಕಾನೂನು ಜಾರಿ ಸಂಸ್ಥೆಗಳಿಂದ ಹಸಿರು ನಿಶಾನೆ ಅಗತ್ಯ.

PREV
Read more Articles on

Recommended Stories

ಭಾರತೀಯ ಪೌರತ್ವಕ್ಕೂ ಮೊದಲೇ ಸೋನಿಯಾಗೆ ಮತಹಕ್ಕು
ಮತಗಳ್ಳತನ ಕುರಿತ ಕಾಂಗ್ರೆಸ್‌ ವಿಡಿಯೋ ಬಿಡುಗಡೆ