;Resize=(412,232))
ನವದೆಹಲಿ : ‘ಡಾ. ಎಪಿಜೆ ಅಬ್ದುಲ್ ಕಲಾಂ ಅವರನ್ನು ಭಾರತದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡುವುದಕ್ಕೂ ಮುನ್ನ, ಆ ಸ್ಥಾನಕ್ಕೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಕಳಿಸಿ, ಪ್ರಧಾನಿ ಸ್ಥಾನವನ್ನು ಎಲ್.ಕೆ. ಅಡ್ವಾಣಿ ಅವರಿಗೆ ಹಸ್ತಾಂತರಿಸಲು ಬಿಜೆಪಿ ಯೋಚಿಸತ್ತು. ಆದರೆ ಇದಕ್ಕೆ ವಾಜಪೇಯಿಯವರು ಅಸಮ್ಮತಿ ತೋರಿದ್ದರಿಂದ ಕಲಾಂ ಅವರನ್ನು ರಾಷ್ಟ್ರಪತಿ ಮಾಡಲಾಯಿತು’ ಎಂಬ ಅಚ್ಚರಿಯ ಮಾಹಿತಿಯನ್ನು ಅಟಲ್‌ರ ಮಾಧ್ಯಮ ಸಲಹೆಗಾರರಾಗಿ ಕೆಲಸ ಮಾಡಿದ್ದ ಅಶೋಕ್ ಟಂಡನ್ ತಮ್ಮ ಕೃತಿಯೊಂದರಲ್ಲಿ ಉಲ್ಲೇಖಿಸಿದ್ದಾರೆ.
ವಾಜಪೇಯಿಯವರು ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ ಹಿರಿಯ ಪತ್ರಕರ್ತ ಅಶೋಕ್ ಟಂಡನ್, 1998ರಿಂದ 2004ರವರೆಗೆ ಪ್ರಧಾನಿಗಳ ಮಾಧ್ಯಮ ಸಲಹೆಗಾರರಾಗಿ ಕೆಲಸ ಮಾಡಿದ್ದರು. ವಾಜಪೇಯಿಯವರ ನಾಯಕತ್ವ, ಅವರ ಜೊತೆಗಿನ ತಮ್ಮ ಒಡನಾಟ, ಇತಿಹಾಸದಲ್ಲಿ ನಡೆದ ಮಹತ್ವದ ಘಟನಾವಳಿಗಳನ್ನು ‘ಅಟಲ್ ಸಂಸ್ಮರಣ’ ಕೃತಿಯಲ್ಲಿ ವಿವರಿಸಿದ್ದಾರೆ. ಈ ಕೃತಿಯನ್ನು ಪ್ರಭಾತ್ ಪ್ರಕಾಶನ ಹೊರತಂದಿದೆ.
ಇದರಲ್ಲಿ, ಕಲಾಂ ರಾಷ್ಟ್ರಪತಿಯಾಗುವುದಕ್ಕೂ ಮುನ್ನ ರಾಷ್ಟ್ರ ರಾಜಕಾರಣದಲ್ಲಿ ನಡೆದ ಮಹತ್ವದ ಘಟನೆಯೊಂದನ್ನು ವಿವರಿಸಿದ್ದಾರೆ.
‘2002ರಲ್ಲಿ ಭಾರತದ 11ನೇ ರಾಷ್ಟ್ರಪತಿ ಅಭ್ಯರ್ಥಿಯಾಗಿ ಅಬ್ದುಲ್ ಕಲಾಂ ಅವರನ್ನು ಪರಿಗಣಿಸುವ ಮೊದಲು, ಬಿಜೆಪಿಯು ರಾಷ್ಟ್ರಪತಿ ಹುದ್ದೆಗೆ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಸೂಚಿಸಿತ್ತು. ಆಗ ವಾಜಪೇಯಿ ಪ್ರಧಾನಿಯಾಗಿ ಅಧಿಕಾರದಲ್ಲಿದ್ದರು. ಅವರ ಅವಧಿ ಮುಕ್ತಾಯವಾಗುವ ಮುನ್ನವೇ ರಾಷ್ಟ್ರಪತಿ ಸ್ಥಾನಕ್ಕೆ ಕಳುಹಿಸಿ, ಪ್ರಧಾನಮಂತ್ರಿ ಹುದ್ದೆಯನ್ನು ಅಡ್ವಾಣಿ ಅವರಿಗೆ ಹಸ್ತಾಂತರಿಸಲು ನಿರ್ಧರಿಸಲಾಗಿತ್ತು. ಆದರೆ ಆಗಿನ ಪ್ರಧಾನಿ ವಾಜಪೇಯಿಯವರು ಇದಕ್ಕೆ ಸಿದ್ಧರಿರಲಿಲ್ಲ. ಯಾವುದೇ ಜನಪ್ರಿಯ ಪ್ರಧಾನಿಗೆ, ಅಧಿಕಾರ ತ್ಯಜಿಸಿ ರಾಷ್ಟ್ರಪತಿಯಾಗುವುದು ಭಾರತೀಯ ಸಂಸದೀಯ ಪ್ರಜಾಪ್ರಭುತ್ವಕ್ಕೆ ಒಳ್ಳೆಯ ಸಂಕೇತವಲ್ಲ ಎಂದು ಅವರು ನಂಬಿದ್ದರು. ಇದು ತಪ್ಪು ಮೇಲ್ಪಂಕ್ತಿ ಹಾಕಿಕೊಡುತ್ತದೆ ಮತ್ತು ಅಂತಹ ಕ್ರಮವನ್ನು ಬೆಂಬಲಿಸುವ ಕೊನೆಯ ವ್ಯಕ್ತಿ ತಾನಾಗಿರುತ್ತೇನೆ ಎಂದಿದ್ದರು’ ಎಂದು ಟಂಡನ್ ಕೃತಿಯಲ್ಲಿ ವಿವರಿಸಿದ್ದಾರೆ.
ಆ ವೇಳೆ ವಾಜಪೇಯಿಯವರು ಕಾಂಗ್ರೆಸ್‌ನ ಹಿರಿಯ ನಾಯಕರನ್ನು ಆಹ್ವಾನಿಸಿ, ಮಾತುಕತೆ ನಡೆಸಿದ ಘಟನೆಯನ್ನು ಪ್ರಸ್ತಾವಿಸಿದ ಅವರು, ‘ನನಗೆ ನೆನಪಿದೆ. ಸೋನಿಯಾ ಗಾಂಧಿ, ಪ್ರಣಬ್ ಮುಖರ್ಜಿ ಮತ್ತು ಡಾ. ಮನಮೋಹನ್ ಸಿಂಗ್ ವಾಜಪೇಯಿಯವರನ್ನು ಭೇಟಿಯಾಗಲು ಬಂದರು. ರಾಷ್ಟ್ರಪತಿ ಚುನಾವಣೆಗೆ ಅಬ್ದುಲ್ ಕಲಾಂ ಅವರನ್ನು ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಲು ಎನ್‌ಡಿಎ ನಿರ್ಧರಿಸಿದೆ ಎಂದು ವಾಜಪೇಯಿ ಮೊದಲ ಬಾರಿಗೆ ಅಧಿಕೃತವಾಗಿ ಬಹಿರಂಗಪಡಿಸಿದರು. ಸಭೆಯಲ್ಲಿ ಸ್ವಲ್ಪ ಹೊತ್ತು ಮೌನ ಆವರಿಸಿತು. ನಂತರ ಸೋನಿಯಾ ಗಾಂಧಿ ಮೌನ ಮುರಿದು, ‘ಅವರ ಆಯ್ಕೆಯಿಂದ ತಮಗೆ ಆಶ್ಚರ್ಯವಾಯಿತು ಮತ್ತು ಅವರನ್ನು ಬೆಂಬಲಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ, ಆದರೆ ಈ ಪ್ರಸ್ತಾವವನ್ನು ಚರ್ಚಿಸಿ ನಂತರ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದರು’ ಎಂದು ಉಲ್ಲೇಖಿಸಿದ್ದಾರೆ.
ಆ ಕಾಲದಲ್ಲಿ ಬಿಜೆಪಿಯ ಇಬ್ಬರು ಪ್ರಭಾವಿ ನಾಯಕರೆನಿಸಿದ್ದ ವಾಜಪೇಯಿ ಮತ್ತು ಅಡ್ವಾಣಿಯವರ ಸಂಬಂಧದ ಕುರಿತಾಗಿಯೂ ಟಂಡನ್ ತಮ್ಮ ಕೃತಿಯಲ್ಲಿ ಪ್ರಸ್ತಾವಿಸಿದ್ದಾರೆ. ‘ಕೆಲವು ನೀತಿಗಳ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ಇಬ್ಬರು ನಾಯಕರ ನಡುವಿನ ಸಂಬಂಧವು ಸಾರ್ವಜನಿಕವಾಗಿ ಎಂದಿಗೂ ಹದಗೆಡಲಿಲ್ಲ. ಅಡ್ವಾಣಿ ಯಾವಾಗಲೂ ಅಟಲ್‌ಜಿ ಅವರನ್ನು ‘ನನ್ನ ನಾಯಕ ಮತ್ತು ಸ್ಫೂರ್ತಿಯ ಮೂಲ’ ಎಂದು ಕರೆಯುತ್ತಿದ್ದರು. ವಾಜಪೇಯಿ ಅಡ್ವಾಣಿಯವರನ್ನು ‘ನನ್ನ ಅಚಲ ಸಂಗಾತಿ’ ಎಂದು ಸಂಬೋಧಿಸುತ್ತಿದ್ದರು. ವಾಜಪೇಯಿ ಮತ್ತು ಅಡ್ವಾಣಿಯವರ ಸ್ನೇಹ ಭಾರತೀಯ ರಾಜಕೀಯದಲ್ಲಿ ಸಹಕಾರ ಮತ್ತು ಸಮತೋಲನದ ಸಂಕೇತವಾಗಿದೆ. ಅವರು ಬಿಜೆಪಿಯನ್ನು ನಿರ್ಮಿಸಿದ್ದಲ್ಲದೆ, ಪಕ್ಷ ಮತ್ತು ಸರ್ಕಾರ ಎರಡಕ್ಕೂ ಹೊಸ ನಿರ್ದೇಶನವನ್ನು ನೀಡಿದರು’ ಎಂದು ವಿವರಿಸಿದ್ದಾರೆ.
ಸೋನಿಯಾ-ಅಟಲ್ ಉತ್ತಮ ನಂಟು:
ಸೋನಿಯಾ ಗಾಂಧಿ ಹಾಗೂ ವಾಜಪೇಯಿ ನಡುವಿನ ಸೌಹಾರ್ದತೆಯನ್ನು ಬಿಂಬಿಸುವ ವಿಶೇಷ ಸಂದರ್ಭವೊಂದನ್ನು ಸಹ ಟಂಡನ್ ಉಲ್ಲೇಖಿಸಿದ್ದಾರೆ. ‘2001ರ ಡಿ.13ರಂದು ಸಂಸತ್ ಭವನದ ಮೇಲೆ ದಾಳಿಯಾದಾಗ ವಾಜಪೇಯಿ ತಮ್ಮ ನಿವಾಸದಲ್ಲಿದ್ದು, ತಮ್ಮ ಸಹೋದ್ಯೋಗಿಗಳೊಂದಿಗೆ ಟಿವಿಯಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಯನ್ನು ವೀಕ್ಷಿಸುತ್ತಿದ್ದರು. ಆಗ ಸೋನಿಯಾ ಗಾಂಧಿ ಲೋಕಸಭೆಯ ವಿಪಕ್ಷ ನಾಯಕಿಯಾಗಿದ್ದರು. ಇದ್ದಕ್ಕಿದ್ದಂತೆ ಸೋನಿಯಾ ಗಾಂಧಿ ಕರೆ ಮಾಡಿ, ‘ನಿಮ್ಮ ಬಗ್ಗೆ ನನಗೆ ಚಿಂತೆಯಾಗಿದೆ, ನೀವು ಸುರಕ್ಷಿತವಾಗಿದ್ದೀರಾ?’ ಎಂದು ಕೇಳಿದರು. ಇದಕ್ಕೆ ಅಟಲ್‌ಜಿ, ‘ಸೋನಿಯಾಜಿ, ನಾನು ಸುರಕ್ಷಿತವಾಗಿದ್ದೇನೆ, ನೀವು ಸಂಸತ್ತಿನ ಕಟ್ಟಡದಲ್ಲಿ ಇರಬಹುದೆಂದು ನನಗೆ ಚಿಂತೆಯಾಗಿತ್ತು... ನಿಮ್ಮ ಬಗ್ಗೆ ಕಾಳಜಿ ವಹಿಸಿ’ ಎಂದರು’ ಎಂದು ಕೃತಿಯಲ್ಲಿ ವಿವರಿಸಿದ್ದಾರೆ.