ನವದೆಹಲಿ: ಖಾತರಿ ರಹಿತ ಸಾಲ ಬಳಸಿಕೊಂಡು ಉದ್ಯಮ ಕಟ್ಟಿಕೊಂಡ ಹಲವು ಸಣ್ಣ ವ್ಯಾಪಾರಿಗಳ ಕುರಿತು ಬೆಳಕು ಚೆಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಇಂಥದ್ದೇ ಸಾಧನೆ ಮಾಡಿದ ಬೆಂಗಳೂರಿನ ನಿಂಗಮ್ಮ ಮತ್ತು ಅವರ ಪತಿಯ ಕಥೆಯನ್ನು ದೇಶದ ಜನರ ಮುಂದೆ ತೆರೆದಿಟ್ಟಿದ್ದಾರೆ.
ಭಾನುವಾರ ಪ್ರಸಾರವಾದ ತಮ್ಮ ಮಾಸಿಕ ‘ಮನ್ ಕಿ ಬಾತ್’ನಲ್ಲಿ ಪ್ರಧಾನಿ ಮೋದಿ ಅವರು ಬೆಂಗಳೂರಿನಲ್ಲಿ ಇಡ್ಲಿ ಮಾರುವ ಟಿ.ಎಸ್. ನಿಂಗಮ್ಮ ಹೆಸರು ಉಲ್ಲೇಖಿಸಿದ್ದಾರೆ. ‘ಬೆಂಗಳೂರಿನ ಟಿ.ಎಸ್. ನಿಂಗಮ್ಮ ಮತ್ತು ಅವರ ಪತಿ ಇಡ್ಲಿ, ದೋಸೆ ಮತ್ತು ಸಾಂಬಾರ್ ಮಾರಾಟ ಮಾಡುವ ಸಣ್ಣ ಉದ್ಯಮವೊಂದನ್ನು ಪ್ರಾರಂಭಿಸಿದರು. ಈ ವ್ಯವಹಾರವು ಉತ್ತಮವಾಗಿ ನಡೆಯತೊಡಗಿತಾದರೂ, ಅದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಬಂಡವಾಳದ ಅಗತ್ಯವಿತ್ತು. ಈ ವೇಳೆ ಅವರಿಗೆ ನಗರ ಪ್ರದೇಶದ ಬೀದಿಬದಿ ವ್ಯಾಪಾರಿಗಳಿಗೆ ಮೇಲಾಧಾರ ರಹಿತ ಸಾಲ ನೀಡುವ ‘ಪಿಎಂ ಸ್ವನಿಧಿ’ಯ (ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ) ಬೆಂಬಲ ದೊರೆಯಿತು.
ಈ ಸಾಲ ಸೌಲಭ್ಯ ಬಳಸಿಕೊಂಡು ನಿಂಗಮ್ಮ ತಳ್ಳುಗಾಡಿಯನ್ನು ಉನ್ನತೀಕರಿಸಿದರು, ಸರಕುಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಪ್ರಾರಂಭಿಸಿದರು ಮತ್ತು ಹೊಸ ತಿನಿಸುಗಳ ಮಾರಾಟ ಆರಂಭಿಸಿದರು. ಪರಿಣಾಮ ಗ್ರಾಹಕರು ಮತ್ತು ಆದಾಯ ಹೆಚ್ಚಾದಂತೆ, ಕುಟುಂಬದ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಯಿತು. ಇಂದು ಅವರು ತಮ್ಮ 3 ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಒದಗಿಸಲು ಸಮರ್ಥರಾಗಿದ್ದಾರೆ’ ಎಂದು ಮೋದಿ ಹೇಳಿದರು. ಈ ಮೂಲಕ, ಮಹಿಳೆಯೊಬ್ಬರ ವ್ಯವಹಾರ ವೃದ್ಧಿಯಾದಾಗ ಅವರ ಕುಟುಂಬದ ಭವಿಷ್ಯವೂ ಉನ್ನತಗತಿಯತ್ತ ಸಾಗುತ್ತದೆ ಎಂದು ಪ್ರಧಾನಿ ಪ್ರತಿಪಾದಿಸಿದರು.
ಮೂಲತಃ ಹಾಸನದರಾದ ನಿಂಗಮ್ಮ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದು, ವಿಜಯನಗರದ ಹೊಸಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಹೋಟೆಲ್ ಹಾಕಿಕೊಂಡಿದ್ದಾರೆ. ಪ್ರಧಾನಿ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿರುವ ಬಗ್ಗೆ ಮಾತನಾಡಿದ ಅವರು, ‘ನನ್ನಂತಹ ಬೀದಿಬದಿ ವ್ಯಾಪಾರಿಯ ಶ್ರಮವನ್ನು ಗುರುತಿಸಿ ಪ್ರಸ್ತಾಪಿಸಿದ ಪ್ರಧಾನಿ ಮೋದಿಯವರಿಗೆ ಧನ್ಯವಾದ. ಪಿಎಂ ಸ್ವನಿಧಿ ಯೋಜನೆಯಿಂದ ಮೊದಲು 10ಸಾವಿರ ರು., ನಂತರ 20 ಸಾವಿರ ರು. ಹಾಗೂ ಬಳಿಕ 50 ಸಾವಿರ ರು. ಸಾಲದ ನೆರವು ಸಿಕ್ಕಿತು. ದಲ್ಲಾಳಿಗಳ ಕಿರಿಕಿರಿಯಿಲ್ಲದೆ ನೇರವಾಗಿ ಸಾಲ ಸಿಕ್ಕಿದ್ದರಿಂದ ವ್ಯಾಪಾರ ವಿಸ್ತರಣೆಯಾಗಿ, ಮಕ್ಕಳ ವಿದ್ಯಾಭ್ಯಾಸಕ್ಕೂ ದೊಡ್ಡ ಅನುಕೂಲವಾಯಿತು. ಇಂದು ಈ ವ್ಯಾಪಾರದ ಮೂಲಕ ನನ್ನನ್ನು ಸೇರಿದಂತೆ 4 ಕುಟುಂಬಗಳು ಜೀವನ ಸಾಗಿಸುತ್ತಿವೆ’ ಎಂದು ಹರ್ಷಿಸಿದ್ದಾರೆ.
- ಮೂಲತಃ ಹಾಸನದರಾದ ನಿಂಗಮ್ಮ ಪ್ರಸ್ತುತ ಬೆಂಗಳೂರಿನ ವಿಜಯನಗರ ನಿವಾಸಿ
- ಬೆಂಗಳೂರಿನ ವಿಜಯನಗರದ ಹೊಸಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಅವರ ಹೋಟೆಲ್
- ಮೊದಲು ಚಿಕ್ಕದಾಗಿದ್ದ ಹೋಟೆಲ್, ‘ಪಿಎಂ ಸ್ವಾನಿಧಿ’ ಯೋಜನೆ ಸಹಾಯ ಬಳಿಕ ವಿಸ್ತರಣೆ
- ಯೋಜನೆಯಿಂದ ಮೊದಲು ₹10,000, ₹20,000, ಬಳಿಕ ₹50,000 ರು. ಸಾಲದ ನೆರವು
- ದಲ್ಲಾಳಿಗಳ ಕಿರಿಕಿರಿಯಿಲ್ಲದೆ ನೇರವಾಗಿ ಸಾಲ ಸಿಕ್ಕಿದ್ದರಿಂದ ವ್ಯಾಪಾರ ವಿಸ್ತರಣೆ ಸಾಕಾರ
- ಮಕ್ಕಳ ವಿದ್ಯಾಭ್ಯಾಸಕ್ಕೂ ಅನುಕೂಲ. ಈಕೆಯ ವ್ಯಾಪಾರದಿಂದ 4 ಕುಟುಂಬಗಳ ಜೀವನ