ತಾಷ್ಕೆಂಟ್: 2 ದಿನಗಳ ಭೇಟಿಗಾಗಿ ಮಧ್ಯ ಏಷ್ಯಾ ರಾಷ್ಟ್ರವಾದ ಉಜ್ಬೇಕಿಸ್ತಾನಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಅತ್ಯುನ್ನತ ಪ್ರಶಸ್ತಿಯಾದ ‘ಒಲಿಯ್ ದರಜಾಲಿ ದೋಸ್ತ್‌ಲಿಕ್’ (ಉನ್ನತ ದರ್ಜೆಯ ಸ್ನೇಹ) ನೀಡಿ ಗೌರವಿಸಲಾಗಿದೆ. ಅಧ್ಯಕ್ಷ ಶವ್ಕತ್ ಮಿರ್ಜಿಯೊಯೆವ್ ಪ್ರದಾನ ಮಾಡಿರುವ ಈ ಪ್ರಶಸ್ತಿಯು, ಮೋದಿಯವರಿಗೆ ದೊರಕಿರುವ 36ನೇ ಅಂತಾರಾಷ್ಟ್ರೀಯ ಪ್ರಶಸ್ತಿಯಾಗಿದೆ. ಇದನ್ನು ಭಾರತ ಮತ್ತು ಉಜ್ಬೇಕ್‌ನ ಸ್ನೇಹಕ್ಕೆ ಅರ್ಪಿಸುವುದಾಗಿ ಮೋದಿ ಹೇಳಿದ್ದಾರೆ.
ಮೋದಿ ಉಜ್ಬೇಕ್ ಭೇಟಿ ವೇಳೆ ಉಭಯ ದೇಶಗಳು ಹಲವು ಮಹತ್ವದ ಒಪ್ಪಂದಗಳಿಗೆ ಸಹಿಹಾಕಿವೆ. 2023ರ ಹೊತ್ತಿಗೆ ಉಭಯ ದೇಶಗಳ ವಾರ್ಷಿಕ ವ್ಯಾಪಾರವನ್ನು ಸದ್ಯ ಇರುವ 9,538 ಕೋಟಿ ರು.ನಿಂದ 47,690 ಕೋಟಿ ರು.ಗೆ ಏರಿಸುವುದು, ನಾಗರಿಕ ಪರಮಾಣು ಇಂಧನ ವಲಯದಲ್ಲಿನ ಸಹಕಾರದ ಭಾಗವಾಗಿ ಉಜ್ಬೇಕಿಸ್ತಾನದಿಂದ ಭಾರತಕ್ಕೆ ದೀರ್ಘಕಾಲೀನ ಯುರೇನಿಯಂ ಪೂರೈಕೆಯಂತಹ ಒಡಂಬಡಿಕೆಗಳು ಏರ್ಪಟ್ಟಿವೆ.
ಜತೆಗೆ, ವ್ಯಾಪಾರ, ಹೂಡಿಕೆ, ಮೂಲಸೌಕರ್ಯ, ನಿರ್ಣಾಯಕ ಖನಿಜಗಳು, ಗಣಿಗಾರಿಕೆ, ರಕ್ಷಣೆ ಮತ್ತು ಭದ್ರತೆ, ಕೃಷಿ, ಔಷಧೀಯ ವಲಯ, ಆರೋಗ್ಯ, ಮಾಹಿತಿ ತಂತ್ರಜ್ಞಾನ, ಯುಪಿಐ ಸೇರಿದಂತೆ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿನ ಸಹಕಾರಕ್ಕೆ ಸಂಬಂಧಿಸಿದ ಒಪ್ಪಂದಗಳಿಗೂ ಅಂಕಿತ ಹಾಕಲಾಗಿದೆ.