ಶಿಕ್ಷಕರ ಜಾಣ್ಮೆ ಮತ್ತು ತ್ವರಿತ ಚಿಂತನೆಯ ಪರಿಣಾಮ 1643 ವಿದ್ಯಾರ್ಥಿಗಳ ಪ್ರಾಣ ಉಳಿದ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ.

ನದಿಯಿಂದ 200 ಅಡಿ ಎತ್ತರದ ಶಾಲೆ ಪೂರ್ಣ ಮಣ್ಣುಪಾಲು

ಕಾಠ್ಮಂಡು: ಶಿಕ್ಷಕರ ಜಾಣ್ಮೆ ಮತ್ತು ತ್ವರಿತ ಚಿಂತನೆಯ ಪರಿಣಾಮ 1643 ವಿದ್ಯಾರ್ಥಿಗಳ ಪ್ರಾಣ ಉಳಿದ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ. ತ್ರಿಶೂಲಿ ಕಣಿವೆಯ ಮಾಧ್ಯಮಿಕ ಶಾಲೆಯ ಪ್ರಾಂಶುಪಾಲರಾದ ರಾಜೇಂದ್ರ ದಾವಡಿ ಅವರಿಗೆ ಪ್ರವಾಹದ ಬಗ್ಗೆ ಬೆಳಗ್ಗೆ 9:20ರ ವೇಳೆಗೆ ಸ್ನೇಹಿತರೊಬ್ಬರಿಂದ ಎಚ್ಚರಿಕೆ ಬಂದಿತ್ತು. ಆ ವೇಳೆ ಶಾಲೆಯಲ್ಲಿ ಸಾವಿರಾರು ಮಕ್ಕಳಿದ್ದು, ಅವರೆಲ್ಲರ ಸುರಕ್ಷತೆಯ ಜವಾಬ್ದಾರಿ ದಾವಡಿ ಅವರ ಮೇಲಿತ್ತು. ಮೊದಮೊದಲು ತಮ್ಮ ಶಾಲೆ ನದಿಯಿಂದ 200 ಅಡಿ ಎತ್ತರದಲ್ಲಿರುವ ಕಾರಣ ಸುರಕ್ಷಿತವಾಗಿದ್ದೇವೆ ಎಂದು ಅವರು ಭಾವಿಸಿದ್ದರು.

ಆದರೂ ಕೂಡಲೇ ಕಾರ್ಯಪ್ರವೃತರಾದ ಅವರು, ಶಾಲೆಯಿಂದ ಹೊರಬರುವಂತೆ ಎಲ್ಲಾ ಶಿಕ್ಷಕರಿಗೆ ಸೂಚಿಸುವ ಜೊತೆಗೆ, ಶಾಲೆಗೆ ಮಕ್ಕಳನ್ನು ಕರೆತರುತ್ತಿದ್ದ ಶಾಲಾ ಬಸ್‌ಗಳಿಗೆ ವಾಪಸ್‌ ಹೋಗುವಂತೆ ತಿಳಿಸಿದ್ದರು. ಜೊತೆಗೆ, ಆದಾಗಲೇ ಶಾಲೆಗೆ ಬಂದಿದ್ದ ಮಕ್ಕಳನ್ನೂ ಎತ್ತರದ ಪ್ರದೇಶವೊಂದಕ್ಕೆ ಕರೆದೊಯ್ದು ಬೋಧಿವೃಕ್ಷವೊಂದ ಕೆಳಗೆ ಕೂರಿಸಿದ್ದರು. ಅದಾದ ಕೆಲವೇ ಕ್ಷಣಗಳಲ್ಲಿ ಭೀಕರ ಪ್ರವಾಹಕ್ಕೆ ಇಡೀ ಶಾಲೆಯೇ ಕೊಚ್ಚಿ ಹೋಗಿತ್ತು. ಒಂದ ವೇಳೆ ರಾಜೇಂದ್ರ ಚಾವಡಿ ಕೆಲವೇ ಕ್ಷಣ ವ್ಯರ್ಥ ಮಾಡಿದ್ದರೂ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಪ್ರಾಣಪಕ್ಷಿ ಹಾರಿ ಹೋಗುತ್ತಿತ್ತು.