ಅಭ್ಯರ್ಥಿಗಳಿಗೆ ಟಿಕೆಟ್‌ ಕೊಟ್ಟು ಬಳಿಕ ಹಿಂಪಡೆದ ಆರ್‌ಜೆಡಿ! ಹೈ ಡ್ರಾಮಾ

Published : Oct 15, 2025, 06:44 AM IST
Ranjan Yadav returns to RJD

ಸಾರಾಂಶ

ಆರ್‌ಜೆಡಿ ಅಭ್ಯರ್ಥಿಗಳಿಗೆ ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಬಿ ಫಾರಂ ನೀಡಿ ಬಳಿಕ ಅದನ್ನು ಹಿಂದಕ್ಕೆ ಪಡೆದುಕೊಂಡ ವಿಚಿತ್ರ ಘಟನೆ ಸೋಮವಾರ ಇಲ್ಲಿ ನಡೆದಿದೆ. ತೇಜಸ್ವಿ ಯಾದವ್‌ ತವರಿಗೆ ಮರಳುತ್ತಲೇ ಈ ಎಡವಟ್‌ ಬೆಳಕಿಗೆ

 ಪಟನಾ: ಆರ್‌ಜೆಡಿ ಅಭ್ಯರ್ಥಿಗಳಿಗೆ ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಬಿ ಫಾರಂ ನೀಡಿ ಬಳಿಕ ಅದನ್ನು ಹಿಂದಕ್ಕೆ ಪಡೆದುಕೊಂಡ ವಿಚಿತ್ರ ಘಟನೆ ಸೋಮವಾರ ಇಲ್ಲಿ ನಡೆದಿದೆ.

ಸೋಮವಾರ ದೆಹಲಿಯಲ್ಲಿ ಕೋರ್ಟ್‌ ವಿಚಾರಣೆಗೆ ಹಾಜರಾಗಿದ್ದ ಲಾಲು ದಂಪತಿ, ಪಟನಾಕ್ಕೆ ಮರಳುತ್ತಲೇ ಟಿಕೆಟ್‌ ಹಂಚುವುದಾಗಿ ಪ್ರಕಟಿಸಿದ್ದಾರೆ. ಹೀಗಾಗಿ ಹಲವು ಆಕಾಂಕ್ಷಿಗಳು ಲಾಲು ಮನೆಗೆ ಧಾವಿಸಿದ್ದಾರೆ. ಹೀಗಾಗಿ ಮನೆಯ ಬಳಿ ನೂಕುನುಗ್ಗಲಿನ ಪರಿಸ್ಥಿತಿ ನಿರ್ಮಾಣವಾಗಿದೆ.

ಅದಾದ ಬಳಿಕ ಕೆಲ ಆಕಾಂಕ್ಷಿಗಳಿಗೆ ಲಾಲು ದಂಪತಿ ಬಿ ಫಾರಂ ನೀಡಿ ಕಳುಹಿಸಿಕೊಟ್ಟಿದ್ದಾರೆ. ಆದರೆ ಲಾಲು ಉತ್ತರಾಧಿಕಾರಿ ಮತ್ತು ಸಂಭವನೀಯ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್‌, ಮತ್ತೊಂದು ವಿಮಾನದಲ್ಲಿ ತವರಿಗೆ ಮರಳುತ್ತಲೇ ಈ ಎಡವಟ್‌  ಬೆಳಕಿಗೆ ಬಂದಿದೆ.

ಮೈತ್ರಿಪಕ್ಷಗಳ ಜೊತೆ ನಮ್ಮ ಮಾತುಕತೆ ಇನ್ನೂ ಅಂತಿಮವಾಗಿಲ್ಲ. ಈ ಹಂತದಲ್ಲಿ ನಮ್ಮ ಏಕಪಕ್ಷೀಯ ನಿರ್ಧಾರ ಮಿತ್ರಪಕ್ಷಗಳ ಮುನಿಸಿಗೆ ಕಾರಣವಾಗಬಹುದು ಎಂದು ಹೇಳಿ, ಯಾರ್‍ಯಾರಿಗೆ ಬಿಫಾರಂ ವಿತರಿಸಲಾಗಿತ್ತೋ ಅವರಿಗೆಲ್ಲಾ ಮರಳಿ ಬರುವಂತೆ ಹೇಳಿ, ತಾಂತ್ರಿಕ ಕಾರಣದ ನೆಪವೊಡ್ಡಿ ಬಿಫಾರಂ ಹಿಂಪಡೆಯಲಾಗಿದೆ.

ಕ್ಷೇತ್ರ ಹಂಚಿಕೆ ಬಗ್ಗೆ ನಿತೀಶ್‌ ಮುನಿಸು? 

ಪಟನಾ: ಮುಂಬರುವ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಬಿಹಾರದಲ್ಲಿ ಅಧಿಕಾರಕ್ಕೇರುವ ಹಂಬಲದಲ್ಲಿರುವ ಎನ್‌ಡಿಎ ಕೂಟದಲ್ಲಿ ಸೀಟು ಹಂಚಿಕೆ ವಿಚಾರವಾಗಿ ಮತ್ತೆ ಅಸಮಾಧಾನ ಹೊಗೆಯಾಡತೊಡಗಿದೆ. ತಮ್ಮ ಜೆಡಿಯು ಪಕ್ಷಕ್ಕೆ 101 ಸೀಟುಗಳು ಲಭಿಸಿದ್ದರೂ, ಸಿಎಂ ನಿತೀಶ್‌ ಕುಮಾರ್‌ ಅವರು ದಕ್ಕದ 9 ಕ್ಷೇತ್ರಗಳಿಂದಾಗಿ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ.

243 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 101, ಜೆಡಿಯು 101, ಜನಶಕ್ತಿ ಪಕ್ಷ 29, ಎಚ್‌ಎಎಂ, ಆರ್‌ಎಲ್‌ಎಂ ತಲಾ 6 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. ಆದರೆ ಜೆಡಿಯು ಪ್ರಾಬಲ್ಯವಿರುವ 9 ಕ್ಷೇತ್ರಗಳು ಈ ಬಾರಿ ಚಿರಾಗ್‌ ಪಾಸ್ವಾನ್‌ರ ಎಲ್‌ಜೆಪಿ ಪಾಲಾಗಿರುವುದಕ್ಕೆ ನಿತೀಶ್‌ ಮುನಿಸಿಕೊಂಡಿದ್ದು, ಪಕ್ಷದ ನಾಯಕರ ಬಳಿ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ ಹಾಗೂ ಈ ಬಗ್ಗೆ ಇನ್ನೊಮ್ಮೆ ಬಿಜೆಪಿ ಜತೆ ಚರ್ಚಿಸುವಂತೆ ಪಕ್ಷದ ಹಂಗಾಮಿ ಸಚಿವ ಸಂಜಯ್ ಝಾ ಮತ್ತು ಜೇಂದ್ರ ಸಚಿವ ಲಲನ್‌ ಸಿಂಗ್‌ಗೆ ಹೇಳಿದ್ದಾರೆ ಎನ್ನಲಾಗಿದೆ.

ಇತರ ಪಕ್ಷಗಳಿಂದಲೂ ಅಪಸ್ವರ?

ಜೆಡಿಯು ಮಾತ್ರವಲ್ಲ, ಮೈತ್ರಿಕೂಟದ ಭಾಗವಾಗಿರುವ ಕೇಂದ್ರ ಸಚಿವ ಜಿತನ್‌ ರಾಮ್‌ ಮಾಂಝಿ ನೇತೃತ್ವದ ಹಿಂದೂಸ್ತಾನಿ ಅವಾಮಿ ಮೋರ್ಚಾ ಮತ್ತು ಉಪೇಂದ್ರ ಕುಶ್ವಾಹ ನೇತೃತ್ವದ ರಾಷ್ಟ್ರೀಯ ಲೋಕ ಮೋರ್ಚಾ ತಲಾ 6 ಕ್ಷೇತ್ರಗಳನ್ನು ಪಡೆದಿದ್ದರೂ ಈ ಹಂಚಿಕೆಯಿಂದ ತೃಪ್ತರಾಗಲಿಲ್ಲ ಎನ್ನಲಾಗುತ್ತಿದೆ.

PREV
Read more Articles on

Recommended Stories

ಹೈವೇಲಿ ಗಲೀಜು ಶೌಚಾಲಯ ಕಂಡರೆ ವರದಿ ಮಾಡಿ ₹ 1000 ರೀ ಚಾರ್ಜ್‌ ಪಡೀರಿ
ಶೇ.10 ಕಮಿಷನ್‌ ಆಸೆಗೆ 22 ಮಕ್ಕಳ ಕೊಂದ ವೈದ್ಯರು!