ಭೋಪಾಲ್: ಮಧ್ಯಪ್ರದೇಶದಲ್ಲಿ 22 ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರಿಫ್ ಸಿರಫ್ ಅನ್ನು ಶಿಫಾರಸು ಮಾಡಲು ಡಾ. ಪ್ರವೀಣ್ ಸೋನಿ ಶೇ.10ರಷ್ಟು ಕಮಿಷನ್ ಪಡೆಯುತ್ತಿದ್ದರು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.ಮಕ್ಕಳ ಸಾವಿನ ಬೆನ್ನಲ್ಲೇ ಪೊಲೀಸರು, ಮಕ್ಕಳಿಗೆ ಸಿರಪ್ ಶಿಫಾರಸು ಮಾಡಿದ್ದ ಡಾ. ಪ್ರವೀಣ್ ಸೋನಿಯನ್ನು ಬಂಧಿಸಿದ್ದರು.
ಪ್ರಕರಣದ ವಿಚಾರಣೆ ವೇಳೆ, ಕೋಲ್ಡ್ರಿಫ್ ಸಿರಫ್ ಶಿಫಾರಸು ಮಾಡಲು ಶ್ರೀಶನ್ ಕಂಪನಿಯಿಂದ ಶೇ.10ರಷ್ಟು ಕಮಿಷನ್ ಪಡೆಯುತ್ತಿದ್ದೆ ಎಂಬುದನ್ನು ಡಾ.ಸೋನಿ ಒಪ್ಪಿದ್ದಾರೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಕೋಲ್ಡ್ರಿಫ್ ಔಷಧ ಸೇವಿಸಿದ ಹಲವು ಮಕ್ಕಳಲ್ಲಿ ಮೂತ್ರ ಸಂಬಂಧಿ ಸಮಸ್ಯೆ ಕಾಣಿಸಿಕೊಂಡ ಬಳಿಕವೂ ಡಾ.ಸೋನಿ ಸೇರಿದಂತೆ ಹಲವು ವೈದ್ಯರು ಮಕ್ಕಳಿಗೆ ಕೋಲ್ಡ್ರಿಫ್ ಸಿರಪ್ ಶಿಫಾರಸು ಮುಂದುವರೆಸಿದ್ದರು ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.
ಚಿಕ್ಕಮಕ್ಕಳಿಗೆ ಕೋಲ್ಡ್ರಿಫ್ ಸೂಕ್ತವಲ್ಲ ಎಂದು ಗೊತ್ತಿದ್ದರೂ ಆ.24ರಿಂದ ಅ.4ರ ಅವಧಿಯಲ್ಲಿ ಹಲವು ಮಕ್ಕಳಿಗೆ ಡಾ.ಸೋನಿ ಅದೇ ಸಿರಫ್ ಶಿಫಾರಸು ಮಾಡಿದ್ದರು ಎಂದೂ ಪೊಲೀಸರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಈ ನಡುವೆ ಜಾಮೀನು ಕೋರಿ ನ್ಯಾಯಾಲಕ್ಕೆ ವೈದ್ಯ ಸಲ್ಲಿಸಿದ್ದ ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದೆ.