ನವದೆಹಲಿ: ‘ಇಂದು ನನಗೆ ನಿಜವಾಗಿಯೂ ಹೊಸವರ್ಷ, ನ್ಯಾಯ ಎಂಬುದು ಹೀಗೆಯೇ ಇರುತ್ತದೆ. ನಾನು ಮತ್ತೊಮ್ಮೆ ಉಸಿರಾಡುವಂತಾಗಿದೆ’ ಎಂದು ಸುಪ್ರೀಂಕೋರ್ಟ್‌ನ ತೀರ್ಪಿಗೆ ಸಂತ್ರಸ್ತೆ ಬಿಲ್ಕಿಸ್ ಬಾನೋ ಹರ್ಷ ವ್ಯಕ್ತಪಡಿಸಿದ್ದಾರೆ.
‘ನನಗೆ ಇಂದು ನಿಜವಾಗಿಯೂ ಹೊಸ ವರ್ಷ. ಇಂದು ನಾನು ಸಮಾಧಾನಗೊಂಡೆ. ಒಂದೂವರೆ ವರ್ಷದ ಬಳಿಕ ಮೊದಲ ಬಾರಿ ನನ್ನ ಮುಖದಲ್ಲಿ ನಗು ಮೂಡಿತು. ನಾನು ನನ್ನ ಮಕ್ಕಳನ್ನು ಅಪ್ಪಿಕೊಂಡು ಸಂತೋಷ ಪಟ್ಟೆ. ಪರ್ವತ ಗಾತ್ರದ ಕಲ್ಲೊಂದನ್ನು ನನ್ನ ಎದೆಯ ಮೇಲಿಂದ ತೆಗೆದಿಟ್ಟಂತಾಗಿದೆ. ಈಗ ನಾನು ಮತ್ತೊಮ್ಮೆ ಉಸಿರಾಡಬಹುದು’ ಎಂದು ಅವರು ಹೇಳಿದ್ದಾರೆ.
‘ನ್ಯಾಯ ಎಂಬುದು ಹೀಗೆಯೇ ಇರುತ್ತದೆ. ನಾನು, ನನ್ನ ಮಕ್ಕಳು ಹಾಗೂ ದೇಶದ ಎಲ್ಲಾ ಮಹಿಳೆಯರಿಗೂ ನ್ಯಾಯ ಸಿಗುತ್ತದೆ ಎಂಬ ಭರವಸೆ ನೀಡಿದ ಸುಪ್ರೀಂಕೋರ್ಟ್‌ಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಇಂತಹ ಕಷ್ಟದ ಸಮಯದಲ್ಲೂ ನನ್ನ ಪತಿ, ಮಕ್ಕಳು ಮತ್ತು ನನ್ನ ವಕೀಲೆ ನನ್ನ ಜೊತೆ ಇದ್ದರು. ಶೋಭಾ ಗುಪ್ತಾ ಅವರು 20 ವರ್ಷಗಳಿಂದ ನನ್ನ ಭರವಸೆ ಕುಂದದಂತೆ ನೋಡಿಕೊಂಡರು. ಸಾವಿರಾರು ಜನರು ನನ್ನ ಜೊತೆ ನಿಂತರು. ಕರ್ನಾಟಕದಿಂದಲೂ 40 ಸಾವಿರ ಮಂದಿ ನನಗಾಗಿ ಪತ್ರ ಬರೆದಿದ್ದರು. ಇವರೆಲ್ಲರಿಗೂ ಧನ್ಯವಾದಗಳು’ ಎಂದು ಅವರು ಸಂತೋಷ ಹಂಚಿಕೊಂಡಿದ್ದಾರೆ.