ಪ್ರಧಾನಿ, ಸಿಎಂಗಳು ಜೈಲಿಗೆ ಹೋದ್ರೆ ವಜಾ : ಮಸೂದೆ ಮಂಡನೆ

KannadaprabhaNewsNetwork |  
Published : Aug 21, 2025, 01:00 AM ISTUpdated : Aug 21, 2025, 04:32 AM IST
ಅಮಿತ್‌ ಶಾ ಮುಖದ ಮೇಲೆ ವಿಪಕ್ಷ ಸಂಸದರು ಕಾಗದ ಹರಿದು ಬಿಸಾಡಿದರು. | Kannada Prabha

ಸಾರಾಂಶ

5 ವರ್ಷಕ್ಕಿಂತ ಹೆಚ್ಚಿನ ಶಿಕ್ಷೆಗೆ ಗುರಿಯಾಗುವ ಆರೋಪದ ಪ್ರಕರಣದಲ್ಲಿ ಪ್ರಧಾನಿ, ಮುಖ್ಯಮಂತ್ರಿ ಮತ್ತು ಸಚಿವರ ವಜಾಕ್ಕೆ ಅವಕಾಶ ಕಲ್ಪಿಸುವ ಮಹತ್ವದ ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬುಧವಾರ ಲೋಕಸಭೆಯಲ್ಲಿ ಮಂಡಿಸಿದರು.

  ನವದೆಹಲಿ :  5 ವರ್ಷಕ್ಕಿಂತ ಹೆಚ್ಚಿನ ಶಿಕ್ಷೆಗೆ ಗುರಿಯಾಗುವ ಆರೋಪದ ಪ್ರಕರಣದಲ್ಲಿ ಪ್ರಧಾನಿ, ಮುಖ್ಯಮಂತ್ರಿ ಮತ್ತು ಸಚಿವರ ವಜಾಕ್ಕೆ ಅವಕಾಶ ಕಲ್ಪಿಸುವ ಮಹತ್ವದ ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬುಧವಾರ ಲೋಕಸಭೆಯಲ್ಲಿ ಮಂಡಿಸಿದರು. ಆದರೆ ಇಂದು ಸಂವಿಧಾನ ಮತ್ತು ಒಕ್ಕೂಟ ವಿರೋಧಿ ಕಾಯ್ದೆ ಎಂದು ಮಸೂದೆಯನ್ನು ಪ್ರತಿ ಹರಿದು ಎಸೆದು ವಿಪಕ್ಷಗಳು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ ಕಾರಣ ಲೋಕಸಭೆಯಲ್ಲಿ ಭಾರೀ ಗದ್ದಲದ ವಾತಾವರಣ ನಿರ್ಮಾಣವಾಯಿತು.

ಬಿಜೆಪಿಯು ಈ ವಿಧೇಯಕವನ್ನು ರಾಜಕೀಯವನ್ನು ಅಪರಾಧಮುಕ್ತಗೊಳಿಸುವ ಉದ್ದೇಶದ ಹೆಜ್ಜೆ ಎಂದು ಕರೆದರೆ, ಪ್ರತಿಪಕ್ಷಗಳು ಪ್ರಜಾಪ್ರಭುತ್ವದ ಕಗ್ಗೊಲೆ, ಕ್ರೂರ ಕಾನೂನು, ಈ ‍‍‍ವಿಧೇಯಕ ಸಂವಿಧಾನ ಹಾಗೂ ಒಕ್ಕೂಟ ವ್ಯವಸ್ಥೆ ವಿರೋಧಿ. ಅನ್ಯ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಮೇಲೆ ಬಿಜೆಪಿ ಇದನ್ನು ಅಸ್ತ್ರವಾಗಿ ಬಳಕೆ ಮಾಡುವ ಸಾಧ್ಯತೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದವು.

ಜೊತೆಗೆ ಮಸೂದೆ ಮಂಡಿಸಿದ ಅಮಿತ್‌ ಶಾ ವಿರುದ್ಧ ಕಾಂಗ್ರೆಸ್‌ನ ವೇಣುಗೋಪಾಲ್‌ ವೈಯಕ್ತಿಕ ವಾಗ್ದಾಳಿ ನಡೆಸಿದ್ದು, ಉಭಯ ನಾಯಕರ ನಡುವೆ ಭಾರೀ ಮಾತಿನ ಸಮರಕ್ಕೂ ವೇದಿಕೆ ಕಲ್ಪಿಸಿ ಕಾವೇರಿದ ವಾತಾವರಣ ನಿರ್ಮಿಸಿತು. ಅಂತಿಮವಾಗಿ ವಿಧೇಯಕವನ್ನು ಆಯ್ಕೆ ಸಮಿತಿಗೆ ಒಪ್ಪಿಸಲು ಸರ್ಕಾರ ಸೂಚಿಸಿ, ತಕ್ಷಣಕ್ಕೆ ಕೋಲಾಹಲ ತಣ್ಣಗಾಗಿಸುವ ಯತ್ನ ಮಾಡಿತು.

ತೀವ್ರ ಗದ್ದಲ:

ಇದಕ್ಕೂ ಮೊದಲು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ ತಿದ್ದುಪಡಿ ವಿಧೇಯಕ, ಸಂವಿಧಾನ ತಿದ್ದುಪಡಿ ವಿಧೇಯಕ, ಜಮ್ಮು ಮತ್ತು ಕಾಶ್ಮೀರ ಮರುರಚನೆ ತಿದ್ದುಪಡಿ ವಿಧೇಯಕ-2025 ಅನ್ನು ಅಮಿತ್‌ ಶಾ ಮಂಡಿಸುತ್ತಿದ್ದಂತೆ ತೀವ್ರ ಗದ್ದಲ ಸೃಷ್ಟಿಯಾಯಿತು. ಸ್ಪೀಕರ್‌ ಅವರ ಸೂಚನೆಯ ಹೊರತಾಗಿಯೂ ಘೋಷಣೆ ಮುಂದುವರಿಸಿದ ಪ್ರತಿಪಕ್ಷಗಳ ಕೆಲ ಸಂಸದರು ಅಮಿತ್‌ ಶಾ ಅವರ ಮುಂದೆ ತೆರಳಿ ವಿಧೇಯಕದ ಪ್ರತಿಗಳನ್ನು ಹರಿದು ಹಾಕಿದರೆ, ವೇಣುಗೋಪಾಲ್‌ ಅವರು ಸಭಾಧ್ಯಕ್ಷರ ಕುರ್ಚಿಯತ್ತ ವಿಧೇಯಕದ ಪ್ರತಿಗಳನ್ನು ಹರಿದು ಎಸೆದು ಆಕ್ರೋಶ ಹೊರಹಾಕಿದರು.

ಎಐಎಂಐಎಂನ ಅಸಾದುದ್ದೀನ್‌ ಓವೈಸಿ ಮತ್ತು ಕಾಂಗ್ರೆಸ್‌ನ ಮನೀಶ್‌ ತಿವಾರಿ, ಕೆ.ವೇಣುಗೋಪಾಲ್‌ ಅವರು ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಗೆ ಈ ವಿಧೇಯಕ ವಿರುದ್ಧವಾಗಿದೆ ಎಂದು ಕಿಡಿಕಾರಿದರು. ಆದರೆ ಅಮಿತ್‌ ಶಾ ಮಾತ್ರ ಆ ಆರೋಪಗಳನ್ನು ತಳ್ಳಿಹಾಕಿದರು. ಈ ವಿಧೇಯಕವನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಿಕೊಡಲಾಗುತ್ತಿದ್ದು, ಸಮಿತಿಯಲ್ಲಿ ಪ್ರತಿಪಕ್ಷದ ಸದಸ್ಯರೂ ಇರಲಿದ್ದಾರೆ. ಅವರು ತಮ್ಮ ಆಕ್ಷೇಪಗಳನ್ನು ದಾಖಲಿಸಬಹುದು ಎಂದು ಭರವಸೆ ನೀಡಿದರು. 

 ಮಸೂದೆಯಲ್ಲೇನಿದೆ?

- 5 ವರ್ಷಕ್ಕಿಂತ ಹೆಚ್ಚಿನ ಶಿಕ್ಷೆಗೆ ಒಳಪಡುವ ಕೇಸಿಗೆ ವಿಧೇಯಕ ಅನ್ವಯ

- ಪಿಎಂ, ಸಿಎಂ, ಸಚಿವರು ಸತತ 30 ದಿನ ಜೈಲಲ್ಲಿದ್ದರೆ ಪದಚ್ಯುತಿಗೆ ಅರ್ಹ

- ಈ 30 ದಿನ ಅವಧಿಯಲ್ಲಿ ಜಾಮೀನಿಗೆ ಕೋರ್ಟ್‌ಗೆ ಹೋಗಲು ಅವಕಾಶ

- ಜಾಮೀನು ಸಿಗದೇ ಇದ್ದರೆ 31ನೇ ದಿನ ಅವರು ಹುದ್ದೆಯಿಂದ ವಜಾ

- ಭವಿಷ್ಯದಲ್ಲಿ ಜಾಮೀನು ಪಡೆದುಕೊಂಡರೆ ಮತ್ತೆ ಹುದ್ದೆ ಅವಕಾಶ.

PREV
Read more Articles on

Recommended Stories

ಗುಂಡಿ ಬಿದ್ದ ಹೆದ್ದಾರಿಯಲ್ಲಿ ಸುಂಕ ವಸೂಲಾತಿ ಇಲ್ಲ: ಸುಪ್ರೀಂ ತೀರ್ಪು
ಆರೋಗ್ಯ, ಜೀವ ವಿಮೆಗೆ ಶೂನ್ಯ ಜಿಎಸ್‌ಟಿಗೆ ಸರ್ಕಾರದ ಒಲವು