ರಾಹುಲ್‌ ಆಧುನಿಕ ರಾವಣ: ಬಿಜೆಪಿ ಟ್ವೀಟ್‌

KannadaprabhaNewsNetwork | Updated : Oct 07 2023, 11:21 AM IST

ಸಾರಾಂಶ

 ರಾಹುಲ್‌ ಗಾಂಧಿಯನ್ನು ರಾವಣನ ಪಾತ್ರದಲ್ಲಿ ತೋರಿಸಿ ಸಿನಿಮಾವೊಂದರ ಪೋಸ್ಟರ್‌ ಎಂಬಂತೆ ಚಿತ್ರಿಸಿರುವ ಬಿಜೆಪಿ ಈ ಚಿತ್ರವನ್ನು ಜಾರ್ಜ್ ಸೊರೋಸ್‌ ನಿರ್ದೇಶನ ಮಾಡುತ್ತಿದ್ದಾರೆ ಎಂಬ ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಿ ವ್ಯಂಗ್ಯವಾಡಿದೆ.

10 ತಲೆಗಳ ರಾಹುಲ್‌ ‘ಸಿನಿಮಾ ಪೋಸ್ಟರ್‌’ ಮೂಲಕ ವ್ಯಂಗ್ಯ - ಚಿತ್ರ ರಾವಣ, ನಿರ್ಮಾಣ ಕಾಂಗ್ರೆಸ್‌, ನಿರ್ದೇಶನ ಸೊರೋಸ್‌ ಎಂದು ಬರಹ ನವದೆಹಲಿ: ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಭಾರೀ ಜಟಾಪಟಿ ನಡೆಸುತ್ತಿರುವ ಹೊತ್ತಲ್ಲೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯನ್ನು ರಾವಣನ ಪಾತ್ರದಲ್ಲಿ ತೋರಿಸಿ ಸಿನಿಮಾವೊಂದರ ಪೋಸ್ಟರ್‌ ಎಂಬಂತೆ ಚಿತ್ರಿಸಿರುವ ಬಿಜೆಪಿ ಈ ಚಿತ್ರವನ್ನು ಜಾರ್ಜ್ ಸೊರೋಸ್‌ ನಿರ್ದೇಶನ ಮಾಡುತ್ತಿದ್ದಾರೆ ಎಂಬ ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಿ ವ್ಯಂಗ್ಯವಾಡಿದೆ. 

ಬುಧವಾರ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಟ್ವೀಟ್‌ ಮಾಡಿದ್ದ ಕಾಂಗ್ರೆಸ್‌ ‘ದೊಡ್ಡ ಸುಳ್ಳುಗಾರ’ ಎಂಬ ಶೀರ್ಷಿಕೆ ನೀಡಿ ವ್ಯಂಗವಾಡಿತ್ತು. ಅಲ್ಲದೇ ‘ಜುಮ್ಲಾ ಬಾಯ್‌’ (ನಾಟಕಕಾರ) ಎಂದು ಟೀಕಿಸಿತ್ತು. ಇದರ ಬೆನ್ನಲ್ಲೇ ಪ್ರತೀಕಾರವಾಗಿ ಬಿಜೆಪಿ ಈ ಪೋಸ್ಟ್‌ ಬಿಡುಗಡೆ ಮಾಡಿದೆ. ಹೀಗಾಗಿ ಜಾಲತಾಣಗಳಲ್ಲಿ ಉಭಯ ಪಕ್ಷಗಳ ಪೋಸ್ಟರ್ ವಾರ್‌ ಶುರುವಾಗಿದೆ ಎನ್ನಲಾಗುತ್ತಿದೆ. 

ತನ್ನ ಎಕ್ಸ್‌ ಖಾತೆಯಲ್ಲಿ ಪೋಸ್ಟರ್‌ ಹಂಚಿಕೊಂಡಿರುವ ಬಿಜೆಪಿ, 10 ತಲೆ ಇರುವ ರಾಹುಲ್‌ ಚಿತ್ರಕ್ಕೆ, ಚಿತ್ರ-ರಾವಣ, ನಿರ್ಮಾಣ- ಕಾಂಗ್ರೆಸ್‌ ಪಕ್ಷ ಮತ್ತು ನಿರ್ದೇಶಕ ಜಾರ್ಜ್ ಸೊರೊಸ್‌ ಎಂದು ಬರೆದಿದೆ. ಅಲ್ಲದೇ ‘ರಾಹುಲ್‌ ಗಾಂಧಿ ನವಯುಗದ ರಾವಣ. ಅವನು ದುಷ್ಟ, ಧರ್ಮ ವಿರೋಧಿ, ರಾಮ ವಿರೋಧಿಯಾಗಿದ್ದು ಭಾರತವನ್ನು ನಾಶ ಮಾಡುವುದೇ ಅವನ ಗುರಿಯಾಗಿದೆ’ ಎಂದು ಟೀಕಿಸಲಾಗಿದೆ. ಜಾರ್ಜ್‌ ಸೊರೋಸ್‌ ಅಮೆರಿಕದ ಉದ್ಯಮಿ ಆಗಿದ್ದು, ಇತ್ತೀಚೆಗೆ ನರೇಂದ್ರ ಮೋದಿ ಸರ್ಕಾರ, ಉದ್ಯಮಿ ಗೌತಮ್‌ ಅದಾನಿ ಅವರ ವಿರುದ್ಧ ಹಲವು ಅಕ್ರಮಗಳ ಆರೋಪ ಹೊರಿಸಿದ್ದರು. ಆಗಾಗ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೇಳಿಕೆ ನೀಡುವ ಅಮೆರಿಕದ ಉದ್ಯಮಿ ಜಾರ್ಜ್‌ ಸೊರೋಸ್‌ ವಿರುದ್ಧ ಬಿಜೆಪಿ ಕಿಡಿಕಾರುತ್ತಲೇ ಇರುತ್ತದೆ. ಅಲ್ಲದೇ ಭಾರತ ವಿರೋಧಿ ಹೇಳಿಕೆ ನೀಡಿದ ಆರೋಪವು ಜಾರ್ಜ್ ಮೇಲಿವೆ

ಇದೇ ವೇಳೆ ತನ್ನ ‘ಘಮಂಡಿಯಾ ಫೈಲ್ಸ್‌’ನ 4ನೇ ಸಂಚಿಕೆಯ ವಿಡಿಯೋ ಬಿಡುಗಡೆ ಮಾಡಿರುವ ಬಿಜೆಪಿ ‘ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಡಳಿತದಲ್ಲಿ ರಾಜ್ಯದಲ್ಲಿ ಪ್ರತೀ ಹಳ್ಳಿಯಲ್ಲೂ ಹಲ್ಲೆ, ಕೊಲೆ ಮತ್ತು ಹಿಂಸೆ ಮೂಲಕ ಚುನಾವಣೆ ಗೆಲ್ಲಲಾಗುತ್ತಿದೆ ಎಂದು ಆರೋಪಿಸಿದೆ.

Share this article