ಪಟನಾ/ನವದೆಹಲಿ: ‘ಕೇಂದ್ರೀಯ ತನಿಖಾ ಏಜೆನ್ಸಿಗಳ ದುರ್ಬಳಕೆ ಹಾಗೂ ಚುನಾವಣಾ ಬಾಂಡ್ ಮೂಲಕ ಅಕ್ರಮ ಹಣ ಸಂಗ್ರಹಿಸಿದ ಕಾರಣಕ್ಕೆ ಬಿಜೆಪಿ ನಾಯಕರು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂಡಿಯಾ ಕೂಟ ಅಧಿಕಾರಕ್ಕೆ ಬಂದ ಬಳಿಕ ಜೈಲಿಗೆ ಹಾಕಲಾಗುತ್ತದೆ’ ಎಂದು ಆರ್‌ಜೆಡಿ ನೇತಾರ ಲಾಲು ಯಾದವ್ ಅವರ ಪುತ್ರಿ ಹಾಗೂ ಪಕ್ಷದ ನಾಯಕಿ ಮಿಸಾ ಭಾರತಿ ಹೇಳಿದ್ದಾರೆ. ಅವರ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಮಿಸಾ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದ್ದು, ಇಂಥ ಹೇಳಿಕೆಗಳಿಗೆ ಲೋಕಸಭೆ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದಿದೆ.
ಮಿಸಾ ಹೇಳಿದ್ದೇನು?:
ಗುರುವಾರ ಪಟನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟಲಿಪುತ್ರ ಕ್ಷೇತ್ರದ ಆರ್‌ಜೆಡಿ ಅಭ್ಯರ್ಥಿ ಮಿಸಾ ಭಾರತಿ,
''''''''ಅವರು (ಪಿಎಂ) ಬಿಹಾರಕ್ಕೆ ಬಂದಾಗಲೆಲ್ಲಾ ಅವರು ನಮ್ಮ ಕುಟುಂಬದ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಾರೆ. ಭ್ರಷ್ಟಾಚಾರ ಎಷ್ಟು ದೊಡ್ಡದು ಎಂದು ನಿಮಗೆ ತಿಳಿದಿದೆಯೇ? ಬಿಜೆಪಿ ಕೇಂದ್ರೀಯ ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿದೆ ಹಾಗೂ ಚುನಾವಣಾ ಬಾಂಡ್ ಮೂಲಕ ಭ್ರಷ್ಟಾಚಾರ ಮಾಡಿದೆ. ದೇಶದ ಜನತೆ ಇಂಡಿಯಾ ಮೈತ್ರಿಕೂಟಕ್ಕೆ ಅಧಿಕಾರದ ಅವಕಾಶ ನೀಡಿದರೆ ಪ್ರಧಾನಿಯಿಂದ ಹಿಡಿದು ಎಲ್ಲ ಬಿಜೆಪಿ ನಾಯಕರು ಜೈಲು ಪಾಲಾಗುತ್ತಾರೆ’ ಎಂದರು.
ನಡ್ಡಾ ತಿರುಗೇಟು:
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ, ‘ಭ್ರಷ್ಟಾಚಾರದ ಆರೋಪದ ಮೇಲೆ ತನಿಖೆ ಎದುರಿಸುತ್ತಿರುವವರು ಮತ್ತು ಜಾಮೀನಿನ ಮೇಲೆ ಹೊರಗಿರುವವರು ಲಾಲು ಕುಟುಂಬದವರು. ಲಾಲು ಹಾಗೂ ಮಿಸಾ ವಿವಿಧ ಹಗರಣದ ಆಪಾದಿತರು. ಕಳಂಕರಹಿತ ರಾಜಕೀಯ ಜೀವನವನ್ನು ಹೊಂದಿರುವ ಮೋದಿ ಮೇಲೆ ಆರೋಪ ಮಾಡುತ್ತಿರುವುದು ಖಂಡನಾರ್ಹ. ಮೋದಿ ಅವರ ಮೇಲೆ ಯಾವುದೇ ಕಳಂಕ ಇಲ್ಲ. ಅಂತಹ ವ್ಯಕ್ತಿಯನ್ನು ಜೈಲಿಗೆ ಕಳುಹಿಸುವುದಾಗಿ ಮಿಸಾ ಹೇಳುತ್ತಿದ್ದಾರೆ. ಇಂಥವರಿಗೆ ಜನ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವರು’ ಎಂದರು.
ಇದಕ್ಕೆ ಉತ್ತರಿಸಿದ ಮಿಸಾ ಸೋದರ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ , ‘ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ದೇಶದಲ್ಲಿ ಕೆಲಸ ನಡೆಯಬೇಕು. ಪ್ರಧಾನಿ ಬರುವುದಾದರೆ, ಅವರು 5 ವರ್ಷಗಳಲ್ಲಿ ಬಿಹಾರಕ್ಕೆ ಏನು ಮಾಡುತ್ತಾರೆ ಎನ್ನುವುದನ್ನು ಹೇಳಬೇಕು... ಈ ಬಗ್ಗೆ ಚರ್ಚೆಯಾಗಬೇಕು. ಅದು ಬಿಟ್ಟು ಅನಗತ್ಯ ವಿಷಯದ ಬಗ್ಗೆ ಚರ್ಚೆ ಬೇಡ’ ಎಂದರು.