ರಾಹುಲ್‌ ಗಾಂಧಿ ದೇಶದ ನಂ.1 ಭಯೋತ್ಪಾದಕ: ಸಚಿವ, ಬಿಜೆಪಿ ನಾಯಕ ರವನೀತ್ ಸಿಂಗ್ ಬಿಟ್ಟು

KannadaprabhaNewsNetwork | Updated : Sep 16 2024, 04:42 AM IST

ಸಾರಾಂಶ

ಕೇಂದ್ರ ಸಚಿವ ರವೀಂದ್ರ ಸಿಂಗ್ ಬಿಟ್ಟು ರಾಹುಲ್ ಗಾಂಧಿಯವರನ್ನು 'ನಂ.1 ಭಯೋತ್ಪಾದಕ' ಎಂದು ಕರೆದು ವಿವಾದ ಸೃಷ್ಟಿಸಿದ್ದಾರೆ.  

ಭಾಗಲ್ಪುರ (ಬಿಹಾರ): ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ರವನೀತ್ ಸಿಂಗ್ ಬಿಟ್ಟು ಅವರು, ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಂ.1 ಭಯೋತ್ಪಾದಕ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಭಾಗಲ್ಪುರದಲ್ಲಿ ಮಾತನಾಡಿದ ಅವರು, ‘ಸಿಖ್ಖರಿಗೆ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಇಲ್ಲ ಎಂದು ಅಮೆರಿಕದಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ. ಈ ಮೂಲಕ ಸಿಖ್ಖರನ್ನು ಒಡೆಯಲು ಯತ್ನಿಸಿದ್ದಾರೆ. ಸಿಖ್ಖರು ಯಾವುದೇ ಪಕ್ಷದೊಂದಿಗೆ ಸಂಬಂಧ ಹೊಂ ದಿಲ್ಲ. ಆದರೂ ಅವರನ್ನು ಒಂದು ಪಕ್ಷಕ್ಕೆ ಸೀಮಿತ ಮಾಡುವ ಯತ್ನ ನಡೆದಿದೆ’ ಎಂದರು.

‘ಇಂಥ ಹೇಳಿಕೆ ನೀಡಿದ ರಾಹುಲ್‌ ದೇಶದ ನಂ.1 ಭಯೋತ್ಪಾದಕ. ಇಂದು ದೇಶವನ್ನು ವಿಭಜಿಸಿದವರು, ಬಾಂಬ್, ಮದ್ದುಗುಂಡು ಬಳಸಿದವರು, ರೈಲಿನಲ್ಲಿ ಸ್ಫೋ ಟ ನಡೆಸಿದವರು ರಾಹುಲ್ ಗಾಂಧಿ ಬೆಂಬಲಕ್ಕೆ ನಿಂತಿದ್ದಾರೆ. ತನಿಖಾ ಸಂಸ್ಥೆಗಳು ಯಾರನ್ನಾದರೂ ಬಂಧಿಸಬೇಕು ಎಂದರೆ ಮೊದಲು ಅದು ರಾಹುಲ್‌ ಗಾಂಧಿ’ ಎಂದು ಕಿಡಿಕಾರಿದರು.

 ==

ರಾಹುಲ್‌ ಸಂವಿಧಾನ ವಿರೋಧಿ ಮನಸ್ಥಿತಿ ವ್ಯಕ್ತಿ: ಧನಕರ್‌

ನವದೆಹಲಿ : ಮೀಸಲಾತಿ ರದ್ದು ಕುರಿತ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಹೇಳಿಕೆಗೆ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರು ಪರೋಕ್ಷವಾಗಿ ಹರಿಹಾಯ್ದಿದ್ದಾರೆ. ‘ಸಂವಿಧಾನಿಕ ಹುದ್ದೆ ಹೊಂದಿರುವ ವ್ಯಕ್ತಿಯಿಂದ ಬರುವ ಇಂತಹ ಮಾತುಗಳು ಸಂವಿಧಾನ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.ಇದಕ್ಕೆ ಕಾಂಗ್ರೆಸ್‌ ತಿರುಗೇಟು ನೀಡಿದ್ದು, ‘ಮೀಸಲಾತಿಗೆ ಇರುವ ಶೇ.50ರ ಮಿತಿಯನ್ನು ತೆಗೆದು ಹಾಕುವಂತೆ ರಾಹುಲ್‌ ಆಗ್ರಹಿಸಿದ್ದಾರೆ. ಆ ಬೇಡಿಕೆಯನ್ನು ಬೆಂಬಲಿಸುತ್ತೀರಾ?’ ಎಂದು ಕೇಳಿದೆ.

ಮುಂಬೈನಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಧನಕರ್‌, ‘ಸಂವಿಧಾನಿಕ ಹುದ್ದೆ ಹೊಂದಿದ ವ್ಯಕ್ತಿಯೊಬ್ಬ ವಿದೇಶಿ ನೆಲದಲ್ಲಿ ಮೀಸಲಾತಿ ರದ್ದುಗೊಳಿಸುವ ಬಗ್ಗೆ ಮಾತನಾಡುತ್ತಾನೆ. ಇದು ಸಂವಿಧಾನವಿರೋಧಿ ಮನಸ್ಥಿತಿ. ಮೀಸಲಾತಿ ಬಗೆಗಿನ ಪೂರ್ವಗ್ರಹಪೀಡಿತ ಅಧಿಕಾರ ದಂಡವನ್ನು ಹಸ್ತಾಂತರಿಸಲಾಗಿದೆ. ಮೀಸಲಾತಿಯಿಂದ ಬೇರೊಬ್ಬರ ಅವಕಾಶ ಕಸಿದಂತಾಗುವುದಿಲ್ಲ. ಸಮಾಜದ ಆಧಾರಸ್ತಂಭವಾಗಿರುವವರ ಕೈಯನ್ನು ಮೀಸಲಾತಿ ಮೂಲಕ ಹಿಡಿಯಲಾಗುತ್ತದೆ’ ಎಂದು ವಿಶ್ಲೇಷಿಸಿದರು.

==

ಪತ್ರಕರ್ತನ ಮೇಲೆ ಹಲ್ಲೆ: ಪಿತ್ರೋಡಾ ಕ್ಷಮೆ

ವಾಷಿಂಗ್ಟನ್‌: ಇತ್ತೀಚೆಗೆ ಅಮೆರಿಕದಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ತಂಡದಿಂದ ಹಲ್ಲೆಗೊಳಗಾದ ಇಂಡಿಯಾ ಟುಡೇ ಪತ್ರಕರ್ತ ರೋಹಿತ್ ಶರ್ಮಾ ಅವರಿಗೆ ಕರೆ ಮಾಡಿ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ವೈಯಕ್ತಿಕ ಕ್ಷಮೆಯಾಚಿಸಿದ್ದಾರೆ.ಶರ್ಮಾಗೆ ಕರೆ ಮಾಡಿದ್ದ ಪಿತ್ರೋಡಾ ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಸುವುದಾಗಿ ಪ್ರತಿಜ್ಞೆ ಮಾಡಿದರು ಮತ್ತು ಇಂಥ ದಾಳಿ ಸ್ವೀಕಾರಾರ್ಹವಲ್ಲ. ಪತ್ರಿಕಾ ಸ್ವಾತಂತ್ರ್ಯಕ್ಕೆ ನಾನು ಬದ್ಧ ಎಂದರು ಎಂದು ಶರ್ಮಾ ಹೇಳಿದ್ದಾರೆ.

Share this article