ಐಪಿಎಸ್ ಅಧಿಕಾರಿಗಳ ಅಮಾನತು: ನಟಿ ನಟಿ ಕಾದಂಬರಿ ಜೇತ್ವಾನಿ ಕಿರುಕುಳ ಪ್ರಕರಣದಲ್ಲಿ ತಿರುವು

KannadaprabhaNewsNetwork | Updated : Sep 16 2024, 04:45 AM IST

ಸಾರಾಂಶ

ಮುಂಬೈ ಮೂಲದ ನಟಿ ಕಾದಂಬರಿ ಜೇತ್ವಾನಿ ಅವರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಆಂಧ್ರಪ್ರದೇಶ ಸರ್ಕಾರವು 3 ಐಪಿಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ. 

ಹೈದರಾಬಾದ್‌: ಮುಂಬೈ ಮೂಲದ ನಟಿ-ಮಾಡೆಲ್ ಕಾದಂಬರಿ ಜೇತ್ವಾನಿ ಅವರನ್ನು ವಂಚನೆ ಪ್ರಕರಣದಲ್ಲಿ ಸರಿಯಾದ ತನಿಖೆ ಮಾಡದೇ ಅಕ್ರಮವಾಗಿ ಬಂಧಿಸಿ ಕಿರುಕುಳ ನೀಡಿದ ಆರೋಪದಲ್ಲಿ ಆಂಧ್ರ ಪ್ರದೇಶ ಸರ್ಕಾರವು ನಿರ್ದೇಶಕ ಜನರಲ್ (ಡಿಜಿ) ಸೇರಿದಂತೆ 3 ಐಪಿಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಸೀತಾರಾಮ ಆಂಜನೇಯುಲು, ಕ್ರಾಂತಿ ರಾಣಾ ಟಾಟಾ, ವಿಶಾಲ್ ಗುನ್ನಿ ಅಮಾನತಾದ ಅಧಿಕಾರಿಗಳು. ವೈಎಸ್ಸಾರ್‌ ನಾಯಕನೊಬ್ಬ ಕಾದಂಬರಿ ವಿರುದ್ಧ ದೂರು ನೀಡಿದ್ದ. ಅದರೆ ಸರಿಯಾದ ತನಿಖೆ ನಡೆಸಿಲ್ಲ ಎಂದು ನಟಿ ದೂರಿದ್ದರು.

==

ಸಂಸ್ಕೃತಿ ಬಿಡುತ್ತಿರುವ ಇಂಗ್ಲಿಷ್‌ ಮೀಡಿಯಂ ಮಕ್ಕಳು: ಮ.ಪ್ರ. ಸಚಿವ

ಭೋಪಾಲ್‌: ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ನಮ್ಮ ಸಂಸ್ಕೃತಿ, ಆಚರಣೆಗಳನ್ನು ತೊರೆದಿದ್ದಾರೆ ಎಂದು ಮಧ್ಯಪ್ರದೇಶದ ಸಂಸ್ಕೃತಿ ಸಚಿವ ಧರ್ಮೇಂದ್ರ ಸಿಂಗ್‌ ಲೋಧಿ ಹೇಳಿದ್ದಾರೆ.ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ನಮ್ಮ ಹಿಂದಿನವರು ‘ಅಸತೋ ಮಾ ಸದ್ಗಮಯ, ತಮಸೋ ಮಾ ಜ್ಯೋತಿರ್ಗಮಯ’ ಎಂದು ಹೇಳುತ್ತಿದ್ದರು. ಆದರೆ ಇಂದಿನ ಇಂಗ್ಲಿಷ್‌ ಮಾಧ್ಯಮದ ಮಕ್ಕಳು ಕ್ಯಾಂಡಲ್‌ ಹೊತ್ತಿಸುತ್ತಾರೆ. ಬಳಿಕ ಅದನ್ನು ಆರಿಸಿ ಕೇಕ್‌ ಕತ್ತರಿಸುತ್ತಾರೆ. ಬೆಳಕಿನಿಂದ ಕತ್ತಲಿನೆಡೆಗೆ ಸಾಗುತ್ತಾರೆ. ಕೇಕ್‌ ಮೇಲೆ ಉಗುಳಿ ಅದನ್ನೇ ಎಲ್ಲರೂ ತಿನ್ನುತ್ತಾರೆ. ಇದನ್ನು ಪ್ರಗತಿಪರ ಎಂದು ಹೇಳುತ್ತಾರೆ’ ಎಂದರು.

‘ಹಿಂದೆಲ್ಲಾ ಮಕ್ಕಳು ದೇಗುಲಗಳಿಗೆ ಹೋಗಿ, ದೀಪ ಹಚ್ಚುತ್ತಿದ್ದರು. ಜನ್ಮದಿನದಂದು ಊಟ ಹಾಕಿಸುತ್ತಿದ್ದರು. ಆದರೆ ಈಗ ಅದೆಲ್ಲಾ ಬದಲಾಗಿದೆ’ ಎಂದು ವಿಷಾದಿಸಿದರು.

==

ಬ್ರಿಟನ್‌ ಅಕ್ರಮ ವಲಸಿಗರ ದೋಣಿ ದುರಂತ: 8 ಜನರ ಸಾವು

ನೈಸ್‌ (ಫ್ರಾನ್ಸ್‌): ಫ್ರಾನ್ಸ್‌ನಿಂದ ಬ್ರಿಟನ್‌ಗೆ ಇಂಗ್ಲಿಷ್‌ ಚಾನೆಲ್‌ (ಅಟ್ಲಾಂಟಿಕ್‌ ಸಾಗರದ ಜಲಸಂಧಿ) ಮೂಲಕ ಅಕ್ರಮ ವಲಸೆ ಹೋಗುತ್ತಿದ್ದ ಜನರ ದೋಣಿ ಅಪಘಾತಕ್ಕೀಡಾಗಿ 8 ಜನರು ಸಾವನ್ನಪ್ಪಿದ್ದಾರೆ.ಉತ್ತರ ಫ್ರಾನ್ಸ್‌ನಿಂದ ಅಕ್ರಮ ವಲಸಿಗರು ದೋಣಿ ಮೂಲಕ ಇಂಗ್ಲಿಷ್‌ ಚಾನೆಲ್‌ ದಾಟುತ್ತಿದ್ದರು. ಈ ವೇಳೆ ಅವರಿದ್ದ ದೋಣಿಯು ಬಂಡೆಗೆ ಅಪ್ಪಳಿಸಿ ದುರ್ಘಟನೆ ಸಂಭವಿಸಿದೆ. ವಲಸಿಗರು ಇಸ್ಲಾಮಿಕ್‌ ದೇಶಗಳಾದ ಅಫ್ಘಾನಿಸ್ತಾನ, ಇರಾನ್‌, ಸಿರಿಯಾ, ಈಜಿಪ್ಟ್, ಸುಡಾನ್‌ ಮತ್ತು ಎರಿಟ್ರಿಯಾ ದೇಶದವರು.

ಫ್ರಾನ್ಸ್‌ ಮತ್ತು ಹಾಲೆಂಡ್‌ನಿಂದ ಬ್ರಿಟನ್‌ಗೆ ಅಕ್ರಮ ವಲಸೆ ಹೋಗುವವರು ಇದೇ ಬ್ರಿಟಿಷ್‌ ಚಾನೆಲ್‌ ಬಳಸುತ್ತಾರೆ. ಆದರೆ ದೋಣಿಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಕಿಕ್ಕಿರಿದು ತುಂಬಿರುತ್ತಾರೆ.

ಇದೇ ರೀತಿ ಪ್ರತಿನಿತ್ಯ ಆಫ್ರಿಕಾದಿಂದ ಯೂರೋಪ್‌ ಖಂಡಕ್ಕೆ ಮೆಡಿಟರೇನಿಯನ್‌ ಸಮುದ್ರ ಬಳಸಿ ಸಾವಿರಾರು ಜನರು ಅಕ್ರಮವಾಗಿ ಪ್ರವೇಶಿಸುತ್ತಾರೆ.

==

ಅನ್ಯ ಧರ್ಮದವರ ಜತೆ ವ್ಯವಹಾರ ಬೇಡ: ಹಿಂದುಗಳಿಗೆ ರಾಣೆ ಕರೆ

ಮುಂಬೈ: ‘ಹಿಂದೂಗಳು ತಮ್ಮ ಧರ್ಮದವರೊಂದಿಗೆ ಮಾತ್ರ ಆಸ್ತಿ ವ್ಯವಹಾರದಲ್ಲಿ ತೊಡಗಬೇಕು’ ಎಂದು ಬಿಜೆಪಿ ಶಾಸಕ ನಿತೇಶ್‌ ರಾಣೆ ನೀಡಿದ ಹೇಳಿಕೆ ವಿವಾದ ಸೃಷ್ಟಿಸಿದೆ.ಮಹಾರಾಷ್ಟ್ರದ ಉಲ್ವೆಯಲ್ಲಿ ಗಣೇಶ ಪಂಡಾಲ್‌ ಪೂಜೆಯಲ್ಲಿ ಭಾಗವಹಿಸಿದ ರಾಣೆ, ‘ಒಂದು ಧರ್ಮದ ಗ್ರಂಥಗಳು ಮತಾಂತರ ಅಥವ ಹಿಂದೂಗಳ ಹತ್ಯೆಯನ್ನು ಪ್ರತಿಪಾದಿಸುತ್ತವೆ. ಹಾಗಾಗಿ ಆಸ್ತಿ ವ್ಯವಹಾರ ನಡೆಸುವ ಮೊದಲು ಆಧಾರ್‌ ಕಾರ್ಡ್‌ ಪರಿಶೀಲಿಸಬೇಕು ಹಾಗೂ ‘ಹಿಂದೂ ಅಲ್ಲದವರೊಂದಿಗೆ ಯಾವುದೇ ವ್ಯವಹಾರ ನಡೆಸುವುದಿಲ್ಲ’ ಎಂದು ಪ್ರಮಾಣ ಸ್ವೀಕರಿಸಬೇಕು’ ಎಂದು ರಿಯಲ್ ಎಸ್ಟೇಟ್ ದಲ್ಲಾಳಿಗಳಿಗೆ ಆಗ್ರಹಿಸಿದರು.

ಎಐಎಂಐಎಂ ಕಿಡಿ: ಶಾಸಕರ ಹೇಳಿಕೆ ದೇಶದ ಜಾತ್ಯತೀತತೆ ಹಾಗೂ ಸಂವಿಧಾನದ ವಿರುದ್ಧವಾಗಿದೆ ಎಂದು ಆರೋಪಿಸಿ ಎಐಎಂಐಎಂ ಪ್ರತಿಭಟನೆಗಿಳಿದಿದೆ.

ಕೆಲ ದಿನಗಳ ಹಿಂದೆ ಸಾಧು ರಾಮಗಿರಿ ಮಹಾರಾಜ್‌ ವಿರುದ್ಧ ಮಾತನಾಡಿದರೆ ಮಸೀದಿಗೆ ನುಗ್ಗಿ ಮುಸ್ಲಿಮರಿಗೆ ಹೊಡೆಯುವುದಾಗಿ ಹೇಳಿದ್ದ ರಾಣೆ ಹೇಳಿದ್ದರು.

==

ಗುತ್ತಿಗೆ ರೀತಿ ರದ್ದತಿ ಹಿಂದೂ ಮದುವೆ ಸಾಧ್ಯವಿಲ್ಲ: ಹೈಕೋರ್ಟ್‌

ಪ್ರಯಾಗರಾಜ್‌: ಹಿಂದೂ ಧರ್ಮದ ಮದುವೆಗಳು ತುಂಬ ಪಾವಿತ್ರ್ಯತೆ ಒಳಗೊಂಡಿರುತ್ತದೆ. ಅದನ್ನು ಒಂದು ಗುತ್ತಿಗೆ ರದ್ದುಪಡಿಸಿದಂತೆ ವಿಸರ್ಜಿಸಲು ಸಾಧ್ಯವಿಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ಹೇಳಿದೆ.ಮದುವೆಯನ್ನು ರದ್ದುಗೊಳಿಸಬೇಕು ಎಂದು ಕೋರಿದ್ದ ಅರ್ಜಿ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ,‘ನ್ಯಾಯಾಲಯ ಕೇವಲ ಇಬ್ಬರ ಒಪ್ಪಿಗೆ ಆಧರಿಸಿ ವಿಚ್ಛೇದನ ಕೊಡಿಸಬಹುದು. ವಿವಾಹವನ್ನು ರದ್ದುಪಡಿಸಲು ಆಗದು. ಅದೇ ರೀತಿ ಅರ್ಜಿದಾರ ಮೊದಲು ಕೊಟ್ಟ ಒಪ್ಪಿಗೆಯನ್ನು ಬದಲಿಸಿದರೆ ತಮ್ಮ ಮೊದಲ ನಿರ್ಧಾರಕ್ಕೆ ಬದ್ಧವಾಗಿರಬೇಕು ಎಂದು ಕೋರ್ಟ್‌ ಬಲವಂತ ಮಾಡಲು ಆಗದು’ ಎಂದಿತು.

Share this article