ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ : ಐತಿಹಾಸಿಕ ಜಯಭೇರಿ - ಎನ್‌ಡಿಎ ಮಹಾರಾಜ

KannadaprabhaNewsNetwork |  
Published : Nov 24, 2024, 01:49 AM ISTUpdated : Nov 24, 2024, 04:37 AM IST
ಮಹಾ ಚುನಾವಣೆ | Kannada Prabha

ಸಾರಾಂಶ

ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಎರಡೂ ರಾಜ್ಯಗಳಲ್ಲಿ ಹಾಲಿ ಅಧಿಕಾರದಲ್ಲಿರುವ ಮೈತ್ರಿಕೂಟಗಳೇ ಮತ್ತೆ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿದೆ.

 ಮುಂಬೈ/ ರಾಂಚಿ :   ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಎರಡೂ ರಾಜ್ಯಗಳಲ್ಲಿ ಹಾಲಿ ಅಧಿಕಾರದಲ್ಲಿರುವ ಮೈತ್ರಿಕೂಟಗಳೇ ಮತ್ತೆ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿದೆ. 

ಮಹಾರಾಷ್ಟ್ರದಲ್ಲಿ ಬಿಜೆಪಿ- ಶಿವಸೇನೆ ಮತ್ತು ಅಜಿತ್‌ ಪವಾರ್‌ ಬಣದ ಎನ್‌ಸಿಪಿ ಮೈತ್ರಿಕೂಟ ಮೊದಲ ಬಾರಿ 200ರ ಅಂಕಿ ದಾಟಿ ಭರ್ಜರಿ ಬಹುಮತದೊಂದಿಗೆ ಗೆಲುವು ಸಾಧಿಸಿದೆ. ಅತ್ತ ಜಾರ್ಖಂಡ್‌ನಲ್ಲಿ ಜೆಎಂಎಂ, ಕಾಂಗ್ರೆಸ್‌, ಆರ್‌ಜೆಡಿ ಮೈತ್ರಿಕೂಟ ಸತತ 2ನೇ ಬಾರಿ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿದೆ. ಸತತ 2ನೇ ಬಾರಿ ಪಕ್ಷವೊಂದು ಇಲ್ಲಿ ಗೆದ್ದಿರುವುದು ಇದೇ ಮೊದಲು.

ವಿಶೇಷವೆಂದರೆ ಎರಡೂ ರಾಜ್ಯಗಳಲ್ಲಿ ಹಾಲಿ ಆಡಳಿತಾರೂಢ ಸರ್ಕಾರಗಳಿಗೇ ಮತದಾರ ಮತ್ತೆ ಮಣೆ ಹಾಕುವ ಜೊತೆಗೆ ಕಳೆದ ಚುನಾವಣೆಗಿಂತಲೂ ಹೆಚ್ಚಿನ ಸ್ಥಾನಬಲದೊಂದಿಗೆ ಅಧಿಕಾರದ ಗದ್ದುಗೆ ನೀಡಿದ್ದಾನೆ. ಇದು ಎರಡೂ ಸರ್ಕಾರಗಳು ಆಡಳಿತ ವಿರೋಧಿ ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾಗಿದೆ ಎಂಬ ಸ್ಪಷ್ಟ ಸಂದೇಶ ನೀಡುವಲ್ಲಿ ಯಶಸ್ವಿಯಾಗಿದೆ.

ಇನ್ನೊಂದೆಡೆ ತೀವ್ರ ಕುತೂಹಲ ಕೆರಳಿಸಿದ್ದ ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಸೋದರ ರಾಹುಲ್‌ ರಾಜೀನಾಮೆಯಿಂದಾಗಿ ನಡೆದ ಉಪಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಭರ್ಜರಿ ಮತಗಳ ಅಂತರದಿಂದ ಗೆದ್ದು ಮೊದಲ ಬಾರಿಗೆ ಲೋಕಸಭೆ ಪ್ರವೇಶದ ಅವಕಾಶ ಪಡೆದಿದ್ದಾರೆ. ಇದರೊಂದಿಗೆ ಏಕಕಾಲದಲ್ಲಿ ಗಾಂಧೀ ಕುಟುಂಬದ ಮೂವರು ಸಂಸತ್‌ ಪ್ರವೇಶಿಸಿದಂತಾಗಿದೆ. ಹಾಲಿ ಸೋನಿಯಾ ಗಾಂಧಿ ರಾಜ್ಯಸಭೆ, ರಾಹುಲ್ ಗಾಂಧಿ ಲೋಕಸಭಾ ಸದಸ್ಯರಾಗಿದ್ದಾರೆ.

ಭರ್ಜರಿ ಗೆಲುವು:

ಕಳೆದ 5 ವರ್ಷದ ಅವಧಿಯಲ್ಲಿ ಶಿವಸೇನೆ, ಎನ್‌ಸಿಪಿ ವಿಭಜನೆಗೆ ಸಾಕ್ಷಿಯಾಗಿದ್ದ, ಬದ್ಧ ವೈರಿಗಳೇ ಒಂದಾದ, ಸ್ನೇಹಿತರೇ ವೈರಿಗಳಾದ ಘಟನೆಗಳು, ಪಕ್ಷಾಂತರದ ಹೈಡ್ರಾಮಾಗಳಿಗೆ ಸಾಕ್ಷಿಯಾಗಿದ್ದ, ಹಿಂದುತ್ವದ ಪ್ರಬಲ ಪ್ರತಿಪಾದಕರು ಅತ್ತಿಂದಿತ್ತಾಗಿದ್ದ ಮಹಾರಾಷ್ಟ್ರ ರಾಜ್ಯ ರಾಜಕೀಯ ಇದೀಗ ಮಹಾಯುತಿ ಒಕ್ಕೂಟಕ್ಕೆ ಜೈಕಾರ ಹಾಕಿದೆ.

ರಾಜ್ಯ ವಿಧಾನಸಭೆಯ 288 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ- ಶಿವಸೇನೆ ಮತ್ತು ಅಜಿತ್‌ ಪವಾರ್‌ ಬಣದ ಎನ್‌ಸಿಪಿ 230ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಮರಳಿ ಅಧಿಕಾರ ಪಡೆದುಕೊಂಡಿದೆ. ಅದರಲ್ಲೂ ಬಿಜೆಪಿ ತಾನು ಸ್ಪರ್ಧಿಸಿದ 149 ಸ್ಥಾನಗಳ ಪೈಕಿ 130ಕ್ಕೂ ಹೆಚ್ಚು ಗೆಲುವು ಸಾಧಿಸುವ ಮೂಲಕ ಸಾರ್ವಕಾಲಿಕ ಅದ್ಭುತ ಗೆಲುವಿನ ದಾಖಲೆ ಮಾಡಿದೆ. 

ಬಿಜೆಪಿಯ ಈ ಭರ್ಜರಿ ಗೆಲುವು, ಮಾಜಿ ಸಿಎಂ, ಬಿಜೆಪಿಯ ದೇವೇಂದ್ರ ಫಡ್ನವೀಸ್‌ ಅವರನ್ನು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಉಮೇದುನಾರನಾಗಿ ಹೊರಹೊಮ್ಮುವಂತೆ ಮಾಡಿದೆ.

ಇನ್ನೊಂದೆಡೆ ಈ ಬಾರಿ ಗೆಲುವು ನಿಶ್ಚಿತ ಎಂಬ ಭರವಸೆಯಲ್ಲಿದ್ದ ಇಂಡಿಯಾ ಕೂಟದ ಪಕ್ಷಗಳಾದ, ರಾಜ್ಯದಲ್ಲಿ ಮಹಾ ವಿಕಾಸ ಅಘಾಡಿ ಹೆಸರಲ್ಲಿ ಮೈತ್ರಿಕೂಟ ರಚಿಸಿದ್ದ ಕಾಂಗ್ರೆಸ್, ಉದ್ಧವ್‌ ಬಣದ ಶಿವಸೇನೆ ಮತ್ತು ಶರದ್‌ ಪವಾರ್‌ ಬಣದ ಎನ್‌ಸಿಪಿಗೆ ಫಲಿತಾಂಶ ಭಾರೀ ನಿರಾಸೆ ಮೂಡಿಸಿದೆ. ಅಘಾಡಿ ಕೂಟ ಸ್ಪರ್ಧಿಸಿದ್ದ 219 ಸ್ಥಾನಗಳ ಪೈಕಿ 50ರಲ್ಲಿ ಗೆಲ್ಲಲೂ ವಿಫಲವಾಗಿವೆ. ಈ ಫಲಿತಾಂಶ ಕಾಂಗ್ರೆಸ್‌ ಮತ್ತು ಪವಾರ್‌ಗಿಂತ ಹೆಚ್ಚಾಗಿ ಉದ್ಧವ್ ಬಣದ ಶಿವಸೇನೆಗೆ ಅಸ್ತಿತ್ವದ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ ಎಂಬ ವಿಶ್ಲೇಷಣೆ ಕೇಳಿಬಂದಿದೆ.

ಇಂಡಿಯಾ ಕೂಟಕ್ಕೆ ಜಾರ್ಖಂಡ್‌:ಮಹಾರಾಷ್ಟ್ರದಲ್ಲಿ ಹೀನಾಯ ಸೋಲು ಕಂಡ ಆಘಾತದಲ್ಲಿದ್ದ ಇಂಡಿಯಾ ಕೂಟಕ್ಕೆ ಜಾರ್ಖಂಡ್‌ ಫಲಿತಾಂಶ ಸ್ವಲ್ಪ ನೆಮ್ಮದಿ ನೀಡಿದೆ. ರಾಜ್ಯದ 81 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಎಂಎಂ- ಕಾಂಗ್ರೆಸ್‌- ಆರ್‌ಜೆಡಿ ಮೈತ್ರಿಕೂಟ 56 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಗೆಲುವು ಸಾಧಿಸಿದೆ. ಇನ್ನೊಂದೆಡೆ ಬಿಜೆಪಿ ಕೂಟ 24 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ