ಲೋಕಸಮರಕ್ಕೆ ಬಿಜೆಪಿ ವಿಡಿಯೋ ಪ್ರಚಾರ ಶುರು

KannadaprabhaNewsNetwork |  
Published : Jan 26, 2024, 01:49 AM ISTUpdated : Jan 26, 2024, 07:24 AM IST
ನರೇಂದ್ರ ಮೋದಿ | Kannada Prabha

ಸಾರಾಂಶ

‘ವಾಸ್ತವ ನೇಯುವ ಕಾರಣಕ್ಕೇ ಜನರು ಮೋದಿಯನ್ನು ಆರಿಸುತ್ತಾರೆ’ ಎನ್ನುವ ಗೀತೆಯನ್ನು ಬಿಡುಗಡೆ ಮಾಡುವ ಮೂಲಕ ಮೋದಿ 3ನೇ ಅವಧಿಗೆ ಪ್ರಧಾನಿಯಾಗಲು ಬಿಜೆಪಿ ಅಬ್ಬರದ ಪ್ರಚಾರ ಆರಂಭ ಮಾಡಿದೆ. ಶೀಘ್ರ ಮತ್ತೊಂದು ಗೀತೆ ಮಾಡಲಿದ್ದೇವೆ ಎಂದು ಬಿಜೆಪಿ ತಿಳಿಸಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಸತತ ಮೂರನೇ ಅವಧಿಗೆ ಪ್ರಧಾನಿ ಪೀಠದಲ್ಲಿ ಕೂರಿಸುವ ಗುರಿಯೊಂದಿಗೆ ಲೋಕಸಭೆ ಚುನಾವಣೆ ವಿಡಿಯೋ ಪ್ರಚಾರಕ್ಕೆ ಗುರುವಾರ ಬಿಜೆಪಿ ಅಧಿಕೃತ ಚಾಲನೆ ನೀಡಿದೆ. 

ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯನ್ನು ಸ್ಮರಿಸುವ ದೃಶ್ಯಗಳನ್ನು ಒಳಗೊಂಡ ‘ಸಪ್ನೆ ನಹೀ ಹಕೀಕತ್‌ ಬನತೇ ಹೈ, ತಭಿ ತೋ ಸಬ್‌ ಮೋದಿ ಕೋ ಚುನ್ತೆ ಹೈ’ (ಕನಸುಗಳನ್ನು ಅಲ್ಲ, ವಾಸ್ತವವನ್ನು ನೇಯುತ್ತಾರೆ, ಅದಕ್ಕೇ ಜನರೂ ಮೋದಿಯನ್ನೇ ಆರಿಸುತ್ತಾರೆ) ಎಂಬ ಗೀತೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಲೋಕಾರ್ಪಣೆ ಮಾಡಿದ್ದಾರೆ.

ಸದ್ಯದಲ್ಲೇ ಮೋದಿ ಅವರ ಕುರಿತಾಗಿ ಮತ್ತೊಂದು ಗೀತೆ, ಬ್ಯಾನರ್‌, ಡಿಜಿಟಲ್‌ ಫಿಲಂ ಹಾಗೂ ಪ್ರಚಾರ ಆಂದೋಲನಗಳನ್ನು ಆರಂಭಿಸಲು ಬಿಜೆಪಿ ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ. 

ಮೋದಿ ಅವರು ಎಲ್ಲ ಕ್ಷೇತ್ರಗಳಲ್ಲೂ ಮಾಡಿರುವ ಸಾಧನೆ ಹಾಗೂ ಅವರು ಪದೇ ಪದೇ ಜನರ ಸ್ವಾಭಾವಿಕ ಆಯ್ಕೆಯಾಗಿದ್ದಾರೆ ಎಂಬುದನ್ನೇ ನಿರೂಪಿಸಲು ಮುಂದಾಗಿದೆ ಎನ್ನಲಾಗಿದೆ.

ಗುರುವಾರ ಬಿಡುಗಡೆ ಮಾಡಿದ ಜಾಗೃತಿ ಗೀತೆ ಜನರ ಒಡಲಾಳದಿಂದ ಸ್ವಾಭಾವಿಕವಾಗಿ ಉದಯಿಸಿರುವಂತಹದ್ದು. ಜನರ ಭಾವನೆಗೆ ತಕ್ಕಂತೆ ಅದನ್ನು ಪಕ್ಷ ಅಳವಡಿಸಿಕೊಂಡಿದೆ ಅಷ್ಟೆ ಎಂದು ಬಿಜೆಪಿ ತಿಳಿಸಿದೆ.

ಈ ಗೀತೆಯಲ್ಲಿ ಅಯೋಧ್ಯೆಯಲ್ಲಿ ಲೋಕಾರ್ಪಣೆಯಾದ ರಾಮಮಂದಿರದಲ್ಲಿ ಪ್ರಧಾನಿ ಮೋದಿ ಅವರು ರಾಮನ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡುವ ದೃಶ್ಯವಿದೆ. ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ ದೇಶ ಮಂದ ಪ್ರಗತಿಯಲ್ಲಿತ್ತು.

ಆದರೆ ಮೋದಿ ಅವರು ದೇಶವನ್ನು ಪ್ರಗತಿಯ ಪಥದಲ್ಲಿ ಕೂರಿಸಿದ್ದಾರೆ. ಜನರ ಭರವಸೆಗಳನ್ನು ಈಡೇರಿಸಿದ್ದಾರೆ ಎಂದು ವಿಡಿಯೋದಲ್ಲಿ ವಿವರಿಸಲಾಗಿದೆ. 

ಜಿ20 ಶೃಂಗದ ಅಧ್ಯಕ್ಷತೆ, ಚಂದ್ರಯಾನ-3, ಮೂಲಸೌಕರ್ಯ, ವಿದೇಶಾಂಗ ನೀತಿ, ಕ್ರೀಡೆ ಹಾಗೂ ಇನ್ನಿತರೆ ನೀತಿ ನಿರೂಪಣೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ಕೇರಳದ 2 ರು. ಡಾಕ್ಟರ್ ನಿಧನ