- ಸಂಗೀತ ನಿರ್ದೇಶಕ ಹಂಸಲೇಖ ಅಭಿಮತ
ಕನ್ನಡಪ್ರಭ ವಾರ್ತೆ ಮೈಸೂರು
ದೇಹ ಹಾಗೂ ಮನಸ್ಸು ಎರಡಕ್ಕೂ ಕೆಲಸ ಕೊಡಬೇಕು. ಆಗ ಮಾತ್ರ ಮನುಷ್ಯ ಪರಿಪೂರ್ಣನಾಗುತ್ತಾನೆ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ತಿಳಿಸಿದರು.ಲಕ್ಷ್ಮೀಪುರಂನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಆರಂಭಿಸಿರುವ ಸಮರ ಕಲೆಗಳ ಸರ್ಟಿಫಿಕೇಟ್‌ಮತ್ತು ಡಿಪ್ಲೊಮಾ ಕೋರ್ಸ್ ಗಳಿಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಸಮರಕಲೆಯನ್ನು ವಿಶ್ವವಿದ್ಯಾಲಯ ಮಟ್ಟದವರೆಗೆ ಸಾಗಿ ಬರಲು ರಾಜ್ಯದಲ್ಲಿ ಸಾಹಸ ಕಲಾವಿದ ಹಾಸನ ರಘು ಅವರ ಪರಿಶ್ರಮವಿದೆ. ಮುಖ್ಯವಾಹಿನಿಗೆ ತರುವುದು ಅವರ ಅಭಿಲಾಷೆಯಾಗಿತ್ತು. ಅದಕ್ಕೆ ವಿಶ್ವವಿದ್ಯಾಲಯ ಬೆಂಬಲಿಸಿರುವುದ ಸ್ವಾಗತಾರ್ಹ ಎಂದರು.
ಸಮರಕಲೆ ಕಲಿತವರು ಶಿಕ್ಷಣದತ್ತಲೂ ಆಸಕ್ತಿವಹಿಸಬೇಕು. ಇಲ್ಲವಾದರೆ, ಮುಗ್ಧರು, ದಡ್ಡರೆಂದುಕೊಳ್ಳುತ್ತಾರೆ. ನಮ್ಮ ಓದು ತಮಿಳುನಾಡಿನ ಆಟೋ ಚಾಲಕನಂತೆ ಇರಬೇಕು. ಅಲ್ಲಿಯ ಆಟೊಚಾಲಕ ನಿತ್ಯ ದಿನಪತ್ರಿಕೆ ಕೊಂಡು ಓದಿ ಎಲ್ಲಾ ವಿಷಯವನ್ನೂ ತಿಳಿದುಕೊಳ್ಳುತ್ತಾನೆ ಎಂದರು.
ಇದಕ್ಕೂ ಮುನ್ನ ಪುಟಾಣಿ ಪೈಲ್ವಾನರು ತೊಡೆತಟ್ಟಿ ಕುಸ್ತಿಗೆ ಬಿದ್ದರೆ, ಹೆಣ್ಣು ಮಕ್ಕಳು ಮರಕ್ಕೆ ಕಟ್ಟಿದ ಹಗ್ಗದಲ್ಲಿ ವಿವಿಧ ಕಸರತ್ತು ಪ್ರದರ್ಶಿಸಿ ನೋಡುಗರನ್ನು ಅಚ್ಚರಿಗೆ ದೂಡಿದರು. ಮಲ್ಲಗಂಬ ಏರಿದ ಯುವಕರು ಅಂಗೈಯಗಲದ ಜಾಗದಲ್ಲಿ ಚಾಕಚಕ್ಯತೆ ಮೆರೆದರೆ, ಸಾಹಸ ಕಲಾವಿದ ಹಾಸನ ರಘು ದೊಣ್ಣೆವರಸೆ ಪ್ರದರ್ಶಿಸಿ, ಮೂಗಿನ ಮೇಲೆ ಬೆರಳಿಡುವಂತೆ ಮಾಡಿದರು. ಬಸವರಾಜ್ ಕುದುರಿ ಮತ್ತು ತಂಡ ಮಲ್ಲಗಂಬ ಪ್ರದರ್ಶಿಸಿದರು.
ಲೇಖಕ ಪ್ರೊ.ಕೆ.ವೈ. ನಾರಾಯಣಸ್ವಾಮಿ, ವಿಶ್ವವಿದ್ಯಾಲಯದ ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ, ಕುಲಸಚಿವ ಎಂ.ಆರ್. ರಾಜೇಶ್, ಪರೀಕ್ಷಾಂಗ ಕುಲಸಚಿವ ಪ್ರೊ. ಮಹದೇವನ್, ಭಾರತೀಯ ಶೈಲಿ ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷ ಕೆ.ಎನ್. ವಿಜಯಕುಮಾರ್, ಪೈಲ್ವಾನ್ ಚಿನ್ನ, ಕರ್ನಾಟಕ ಸಾಹಸ ಕಲಾ ಅಕಾಡೆಮಿ ಎಂ. ಅಲ್ಪ್ ಪಾಷಾ, ಶಿವಮೊಗ್ಗ ವಿನೋದ್ ಇದ್ದರು.