ಜೆಎನ್‌.1 ರೂಪಾಂತರಿಯಿಂದ ಹೆಚ್ಚು ಅಪಾಯವಿಲ್ಲ: ತಜ್ಞರು

KannadaprabhaNewsNetwork | Published : Dec 22, 2023 1:30 AM

ಸಾರಾಂಶ

ಜೆಎನ್‌.1 ರೂಪಾಂತರಿಗೆ ಹೆದರುವ ಅಗತ್ಯವಿಲ್ಲ, ಈಗಿರುವ ಚಿಕಿತ್ಸೆಯೇ ಪರಿಣಾಮಕಾರಿ, 2 ಡೋಸ್‌ ಲಸಿಕೆಯಿಂದಾಗಿ ದೇಹ ಇದರ ವಿರುದ್ಧ ಹೋರಾಡುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಜೆಎನ್‌.1 ರೂಪಾಂತರಿಗೆ ಹೆದರುವ ಅಗತ್ಯವಿಲ್ಲ, ಈಗಿರುವ ಚಿಕಿತ್ಸೆಯೇ ಪರಿಣಾಮಕಾರಿ, 2 ಡೋಸ್‌ ಲಸಿಕೆಯಿಂದಾಗಿ ದೇಹ ಇದರ ವಿರುದ್ಧ ಹೋರಾಡುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಪಿಟಿಐ ನವದೆಹಲಿದೇಶಾದ್ಯಂತ ಕೋವಿಡ್‌ನ ಹೊಸ ರೂಪಾಂತರಿ ತಳಿ ಜೆಎನ್‌.1 ಬಗ್ಗೆ ಆತಂಕ ಹರಡಿರುವುದರ ಬೆನ್ನಲ್ಲೇ ಈ ಬಗ್ಗೆ ಸಮಾಧಾನಕರ ಮಾತುಗಳನ್ನಾಡಿರುವ ತಜ್ಞರು, ‘ಈ ರೂಪಾಂತರಿಯಿಂದ ಹೆಚ್ಚು ಅಪಾಯವಿಲ್ಲ. ಇದು ಹರಡುತ್ತಿರುವುದರ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ನಮ್ಮಲ್ಲೀಗ ಲಭ್ಯವಿರುವ ಚಿಕಿತ್ಸೆಗಳೇ ಈ ವೈರಸ್‌ಗೂ ಸಾಕು’ ಎಂದು ಹೇಳಿದ್ದಾರೆ.ಈ ಕುರಿತು ಸುದ್ದಿಸಂಸ್ಥೆ ಜೊತೆ ಮಾತನಾಡಿದ ಹಿರಿಯ ಆರೋಗ್ಯ ತಜ್ಞ ಡಾ.ಚಂದ್ರಕಾಂತ್‌ ಲಹಾರಿಯಾ, ‘ಶ್ವಾಸಕೋಶಕ್ಕೆ ಸಂಬಂಧಿಸಿದ ಎಲ್ಲಾ ವೈರಸ್‌ಗಳೂ ಹೀಗೇ ಬದಲಾಗುತ್ತಿರುತ್ತವೆ ಮತ್ತು ಹರಡುತ್ತವೆ. ಜೆಎನ್‌.1 ರೂಪಾಂತರಿ ವೈರಸ್‌ ಹರಡುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ. ಇದರ ಬಗ್ಗೆ ಆತಂಕಪಡುವ ಅಗತ್ಯವೂ ಇಲ್ಲ. ಇದರ ಸೋಂಕು ಕಡಿಮೆ ಪ್ರಮಾಣದಲ್ಲಿರುತ್ತದೆ. ಎಲ್ಲಾ ವೈರಸ್‌ಗಳೂ ರೂಪಾಂತರಗೊಳ್ಳುತ್ತವೆ. ಈ ವೈರಸ್‌ಗೆ ನಮ್ಮಲ್ಲೀಗ ಲಭ್ಯವಿರುವ ಚಿಕಿತ್ಸೆಯೇ ಸಾಕು. ಹಾಲಿ ಇರುವ ಸುರಕ್ಷತಾ ಕ್ರಮಗಳನ್ನು ಜನರು ಪಾಲಿಸಬೇಕು’ ಎಂದು ಹೇಳಿದ್ದಾರೆ.‘ವೈರಸ್‌ಗಳು ರೂಪಾಂತರಗೊಳ್ಳುವುದು ಅತ್ಯಂತ ಸಹಜ. ಭಾರತದಲ್ಲಿ ಜನರು ಈಗಾಗಲೇ ಒಮಿಕ್ರೋನ್‌ ಸೇರಿದಂತೆ ಸಾರ್ಸ್‌ ಕೋವ್‌-2 ವೈರಸ್‌ನ ಬೇರೆ ಬೇರೆ ರೂಪಾಂತರಿಗಳಿಗೆ ತೆರೆದುಕೊಂಡಿದ್ದಾರೆ. ಎಲ್ಲರೂ ಕನಿಷ್ಠ ಎರಡು ಡೋಸ್‌ ಲಸಿಕೆ ಪಡೆದಿದ್ದಾರೆ. ಹೀಗಾಗಿ ಜೆಎನ್‌.1 ರೂಪಾಂತರಿಯಿಂದ ಹೊಸ ಅಪಾಯವೇನೂ ಇಲ್ಲ. ಈ ರೂಪಾಂತರಿಯ ಸೋಂಕಿತರು ತೀವ್ರ ಅನಾರೋಗ್ಯಕ್ಕೆ ತುತ್ತಾಗುವುದಿಲ್ಲ’ ಎಂದು ತಿಳಿಸಿದ್ದಾರೆ.ಹೈದರಾಬಾದ್‌ನ ಸಾಂಕ್ರಾಮಿಕರ ರೋಗಗಳ ತಜ್ಞ ಡಾ.ಕಾರ್ತೀಕ್‌ ವೇದುಲ, ‘ಜೆಎನ್‌.1 ರೂಪಾಂತರಿಯು ಒಮಿಕ್ರೋನ್‌ನ ರೂಪಾಂತರಿಯಾದ ಬಿಎ.2.86ನ ಇನ್ನೊಂದು ತಳಿಯಾಗಿದೆ. ಇದು ಅಪಾಯಕಾರಿ ಲಕ್ಷಣಗಳನ್ನು ತೋರುವ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಹೀಗಾಗಿ ಜನರು ಹೆದರುವ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ.ಇನ್ನೊಬ್ಬ ವೈರಾಣು ತಜ್ಞ ಡಾ.ವಿನೋದ್‌ ಸರ್ಕಾರಿಯಾ, ‘ಜೆಎನ್‌.1 ರೂಪಾಂತರಿ ನಮ್ಮ ದೇಶದಲ್ಲಿ ನವೆಂಬರ್‌ನಿಂದಲೇ ಹರಡುತ್ತಿದೆ. ಬೇರೆ ರೂಪಾಂತರಿಗಳಿಗೆ ಹೋಲಿಸಿದರೆ ಇದು ಹೆಚ್ಚು ಅಪಾಯ ಉಂಟುಮಾಡುವ ಸಾಧ್ಯತೆಯಿಲ್ಲ. ಕೋವಿಡ್‌-19 ಸಮಯದಲ್ಲಿ ಜನರು ಅನುಸರಿಸಿದ ಮುನ್ನೆಚ್ಚರಿಕೆ ಕ್ರಮಗಳನ್ನೇ ಈಗಲೂ ಅನುಸರಿಸಿದರೆ ಸಾಕು’ ಎಂದು ತಿಳಿಸಿದ್ದಾರೆ.

Share this article