ಬಿಎಸ್ಸೆನ್ನೆಲ್‌ಗೆ ಸತತ 2ನೇ ತ್ರೈಮಾಸಿಕದಲ್ಲೂ ₹280 ಕೋಟಿ ಲಾಭ

KannadaprabhaNewsNetwork |  
Published : May 28, 2025, 12:30 AM IST
ಬಿಎಸ್‌ಎನ್‌ಎಲ್‌ | Kannada Prabha

ಸಾರಾಂಶ

ಸರ್ಕಾರಿ ಒಡೆತನದ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್‌ಗೆ, ಮಾ.31ರಂದು ಕೊನೆಯಾದ 4ನೇ ತ್ರೈಮಾಸಿಕದಲ್ಲಿ 280 ಕೋಟಿ ರು. ಲಾಭಗಳಿಸಿದೆ.

ನವದೆಹಲಿ: ಸರ್ಕಾರಿ ಒಡೆತನದ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್‌ಗೆ, ಮಾ.31ರಂದು ಕೊನೆಯಾದ 4ನೇ ತ್ರೈಮಾಸಿಕದಲ್ಲಿ 280 ಕೋಟಿ ರು. ಲಾಭಗಳಿಸಿದೆ. ಇದರೊಂದಿಗೆ ಸತತ 2ನೇ ತ್ರೈಮಾಸಿಕದಲ್ಲೂ ಸಂಸ್ಥೆ ಲಾಭಗಳಿಸಿದಂತಾಗಿದೆ. ಕಳೆದ ತ್ರೈಮಾಸಿಕದಲ್ಲಿ ಸಂಸ್ಥೆ 262 ಕೋಟಿ ರು. ಲಾಭಗಳಿಸಿದ್ದು, 18 ವರ್ಷಗಳಲ್ಲೇ ಮೊದಲನೆಯದ್ದಾಗಿತ್ತು. ಕಳೆದ ವರ್ಷದ 4ನೇ ತ್ರೈಮಾಸಿಕದಲ್ಲಿ ಸಂಸ್ಥೆ 849 ಕೋಟಿ ರು. ನಷ್ಟದಲ್ಲಿತ್ತು. ಸತತ 2 ತ್ರೈಮಾಸಿಕದ ಲಾಭದ ಪರಿಣಾಮ 2024ನೇ ಹಣಕಾಸು ವರ್ಷದಲ್ಲಿ 5370 ಕೋಟಿ ರು.ನಷ್ಟದಲ್ಲಿದ್ದ ಬಿಎಸ್‌ಎನ್‌ಎಲ್‌ನ ನಷ್ಟ ಇದೀಗ 2247 ಕೋಟಿ ರು.ಗೆ ಇಳಿದಿದೆ.

==

ಯೂನಸ್‌ ಸರ್ಕಾರದ ವಿರುದ್ಧ ಬೀದಿಗಿಳಿದ ಅಧಿಕಾರಿ, ಶಿಕ್ಷಕರು

ಢಾಕಾ: ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್‌ ಯೂನಸ್‌ರ ಸಮಸ್ಯೆಗಳು ಮುಂದುವರೆದಿದ್ದು, ಇದೀಗ ದೇಶವ್ಯಾಪಿ ಸಾವಿರಾರು ಶಿಕ್ಷಕರು ಬೀದಿಗಿಳಿದು ಹೋರಾಟ ಆರಂಮಭಿಸಿದ್ದಾರೆ. ವೇತನ ಹೆಚ್ಚಳ, ಪದೋನ್ನತಿ ಬಯಸಿ ದೇಶಾದ್ಯಂತ ಪ್ರಾಥಮಿಕ ಶಾಲೆಯ ಸಾವಿರಾರು ಸಹಾಯಕ ಶಿಕ್ಷಕರು ಮೇ 5ರಿಂದ ತರಗತಿಗಳನ್ನು ಭಾಗಶಃ ಬಹಿಷ್ಕರಿಸಿದ್ದು, ಕಳೆದ 2 ದಿನಗಳಿಂದ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಬೇಡಿಕೆ ಈಡೇರುವವರೆಗೂ ಮುಷ್ಕರ ಮುಂದುವರೆಸುವುದಾಗಿ ಕರೆ ಕೊಟ್ಟಿದ್ದಾರೆ. ಮತ್ತೊಂದೆಡೆ ನಾಗರಿಕ ಸೇವಾ ಅಧಿಕಾರಿಗಳು ಮಧ್ಯಂತರ ಸರ್ಕಾರ ಜಾರಿಗೆ ತಂದೆ ಕಾನೂನಿನ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

==

₹38 ಲಕ್ಷ ಬಹುಮಾನ ಘೋಷಿಸಿದ್ದ 10 ಸೇರಿ 8 ನಕ್ಸಲರು ಶರಣು

ಸುಕ್ಮಾ: ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಮಂಗಳವಾರ 18 ನಕ್ಸಲರು ಶರಣಾಗಿದ್ದಾರೆ. ಈ ಪೈಕಿ 10 ನಕ್ಸಲರ ಸುಳಿವು ನೀಡಿದವರಿಗೆ 38 ಲಕ್ಷ ರು. ಬಹುಮಾನ ಘೋಷಿಸಲಾಗಿತ್ತು. ‘ಸ್ಥಳೀಯ ಬುಡಕಟ್ಟು ಜನಾಂಗದವರ ಮೇಲೆ ನಕ್ಸಲರ ದೌರ್ಜನ್ಯ, ಮಾವೋವಾದದ ಅಮಾನವೀಯ ಸಿದ್ಧಾಂತದಿಂದ ಬೇಸತ್ತು, ರಾಜ್ಯ ಸರ್ಕಾರದ ನಿಯಾದ್ ನೆಲ್ಲನಾರ್ ಯೋಜನೆಯಿಂದ ಪ್ರೇರಿತರಾಗಿ ಶರಣಾಗಿದ್ದಾರೆ. ಶರಣಾದವರಿಗೆ ತಲಾ 50,000 ರು.ಗಳ ನೆರವು ನೀಡಿ, ಪುನರ್ವಸತಿ ಕಲ್ಪಿಸಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ವರ್ಷ, ಸುಕ್ಮಾ ಸೇರಿದಂತೆ 7 ಜಿಲ್ಲೆಗಳನ್ನು ಒಳಗೊಂಡಿರುವ ಬಸ್ತಾರ್ ಪ್ರದೇಶದಲ್ಲಿ 792 ನಕ್ಸಲರು ಶರಣಾಗಿದ್ದರು.

==

ಸಂತಾನಶಕ್ತಿ ಕುಂಠಿತ ವದಂತಿ: ಪೊಲಿಯೋ ಅಧಿಕಾರಿ ಗುಂಡಿಟ್ಟು ಹತ್ಯೆ

ಇಸ್ಲಾಮಾಬಾದ್‌: ಪೋಲಿಯೋ ಲಸಿಕೆ ಹಾಕಿದರೆ ಸಂತಾನಶಕ್ತಿ ಕುಂಠಿತವಾಗುತ್ತದೆ ಎಂಬ ವದಂತಿ ಪಾಕಿಸ್ತಾನದಲ್ಲಿ ಮತ್ತೊಬ್ಬ ಅಧಿಕಾರಿಯನ್ನು ಬಲಿ ಪಡೆದಿದೆ. ಮಂಗಳವಾರ ಬಲೂಚಿಸ್ತಾನದ ಪೋಲಿಯೋ ಲಸಿಕಾ ಆಂದೋಲನದ ಮೇಲೆ ಅನಾಮಿಕ ವ್ಯಕ್ತಿಗಳು ನಡೆಸಿದ ದಾಳಿಯಲ್ಲಿ ಸಿಬ್ಬಂದಿ ರಕ್ಷಣೆಗೆ ನಿಯೋಜನೆಗೊಂಡಿದ್ದ ಪೊಲೀಸರೊಬ್ಬರು ಹತರಾಗಿದ್ದಾರೆ. ಇದಕ್ಕೆ ಪಾಕ್‌ ರಾಷ್ಟ್ರಪತಿ ಆಸಿಫ್‌ ಅಲಿ ಜರ್ದಾರಿ ಸಂತಾಪ ಸೂಚಿಸಿ,‘ಪೋಲಿಯೋದಿಂದ ಯಾವುದೇ ಸಂತಾನ ಶಕ್ತಿ ನಾಶವಾಗುವುದಿಲ್ಲ. ದಯವಿಟ್ಟು ಎಲ್ಲರೂ ಪೋಲಿಯೋ ಲಸಿಕೆ ಹಾಕಿಸಿಕೊಳ್ಳಿ’ ಎಂದು ಮನವಿ ಮಾಡಿದ್ದಾರೆ. ವಿಶ್ವದಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಹೊರತುಪಡಿಸಿ ಮಿಕ್ಕೆಲ್ಲಾ ದೇಶಗಳು ಪೋಲಿಯೋ ಮುಕ್ತವಾಗಿವೆ.

==

7 ಕಿ.ಮೀ ದೂರದಲ್ಲಿನ ರಾಜಭವನಕ್ಕೆ ತೆರಳಲು ಗೌರ್ನರ್‌ ಕಾಪ್ಟರ್‌ ಬಳಕೆ

ಇಂಫಾಲ್‌: ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿ ನೆರೆದಿದ್ದ ಪ್ರತಿಭಟನಾಕಾರರನ್ನು ತಪ್ಪಿಸಲು ಅಲ್ಲಿನ ರಾಜ್ಯಪಾಲ ಅಜಯ್‌ ಕುಮಾರ್‌ ಭಲ್ಲಾ ಅವರು ಏರ್ಪೋರ್ಟ್‌ನಿಂದ ರಾಜಭವನ ಮಧ್ಯೆ 7 ಕಿ.ಮೀ.ದೂರವನ್ನು ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದ್ದಾರೆ. ಇತ್ತೀಚೆಗೆ ರಾಜ್ಯ ಸರ್ಕಾರವು ಸಾರಿಗೆ ಮೇಲೆ ‘ಮಣಿಪುರ ರಾಜ್ಯ ಸಾರಿಗೆ’ ಎಂಬ ಹೆಸರು ತೆಗೆಯುವಂತೆ ಆದೇಶ ಹೊರಡಿಸಿತ್ತು. ಇದನ್ನು ವಿರೋಧಿಸಿದ ಅಲ್ಲಿನ ಮೈತೇಯಿ ಜನರ ಸಂಘವು ರಾಜ್ಯಪಾಲ, ಅಧಿಕಾರಿಗಳ ವಿರುದ್ಧ ಮೆರವಣಿಗೆ, ಪ್ರತಿಭಟನೆ ಮತ್ತು ಮಾನವ ಸರಪಳಿ ನಿರ್ಮಿಸಿತ್ತು. ಸೋಮವಾರ ದೆಹಲಿಯಿಂದ ಇಂಫಾಲ್‌ಗೆ ಬಂದಿಳಿದ ರಾಜ್ಯಪಾಲ ಭಲ್ಲಾ, ಭದ್ರತೆ ಕಾರಣದಿಂದಾಗಿ ಕಾರು ತೊರೆದು ಕಾಪ್ಟರ್‌ ಮೂಲಕ ರಾಜಭವನಕ್ಕೆ ತೆರಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದುಡಿಯುವ ಸ್ತ್ರೀಗೆ ಪತಿ ಜೀವನಾಂಶ ಕೊಡಬೇಕಿಲ್ಲ: ಅಲಹಾಬಾದ್‌ ‘ಹೈ’
ಸಂಸತ್‌ ದಾಳಿಗೆ 24 ವರ್ಷ: ಹುತಾತ್ಮರಿಗೆ ಗಣ್ಯರ ಗೌರವ