5ನೇ ತಲೆಮಾರಿನ ಯುದ್ಧ ವಿಮಾನ ತಯಾರಿಕೆಗೆ ರಕ್ಷಣಾ ಇಲಾಖೆ ಒಪ್ಪಿಗೆ

KannadaprabhaNewsNetwork |  
Published : May 28, 2025, 12:20 AM IST
ಉತ್ಪಾದನೆ | Kannada Prabha

ಸಾರಾಂಶ

ಚೀನಾ ಮತ್ತು ಪಾಕಿಸ್ತಾನದಿಂದ ಹೆಚ್ಚುತ್ತಿರುವ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ಐದನೇ ತಲೆಮಾರಿನ ಸ್ವದೇಶಿ ಅತ್ಯಾಧುನಿಕ ಮಧ್ಯಮ ತೂಕದ ಯುದ್ಧ ವಿಮಾನ (ಎಎಂಸಿಎ) ತಯಾರಿಸುವ ಯೋಜನೆಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮಂಗಳವಾರ ಸಹಿಹಾಕಿದ್ದಾರೆ. ಈ ಮೂಲಕ ಸ್ವದೇಶಿ ಅತ್ಯಾಧುನಿಕ ಯುದ್ಧವಿಮಾನ ತಯಾರಿಕಾ ಪ್ರಕ್ರಿಯೆಗೆ ಹೊಸ ವೇಗ ಸಿಗುವ ನಿರೀಕ್ಷೆ ಇದೆ.

ಎಎಂಸಿಎ ಪ್ರಾಜೆಕ್ಟ್‌ಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸಹಿ

ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಯುದ್ಧವಿಮಾನ ತಯಾರಿಕೆ?

ನವದೆಹಲಿ: ಚೀನಾ ಮತ್ತು ಪಾಕಿಸ್ತಾನದಿಂದ ಹೆಚ್ಚುತ್ತಿರುವ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ಐದನೇ ತಲೆಮಾರಿನ ಸ್ವದೇಶಿ ಅತ್ಯಾಧುನಿಕ ಮಧ್ಯಮ ತೂಕದ ಯುದ್ಧ ವಿಮಾನ (ಎಎಂಸಿಎ) ತಯಾರಿಸುವ ಯೋಜನೆಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮಂಗಳವಾರ ಸಹಿಹಾಕಿದ್ದಾರೆ. ಈ ಮೂಲಕ ಸ್ವದೇಶಿ ಅತ್ಯಾಧುನಿಕ ಯುದ್ಧವಿಮಾನ ತಯಾರಿಕಾ ಪ್ರಕ್ರಿಯೆಗೆ ಹೊಸ ವೇಗ ಸಿಗುವ ನಿರೀಕ್ಷೆ ಇದೆ.

ಏರೋನಾಟಿಲ್‌ ಡೆವಲಪ್‌ಮೆಂಟ್‌ ಏಜೆನ್ಸಿ(ಎಡಿಎ)ಯು ಇತರೆ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಈ ಯುದ್ಧವಿಮಾನ ತಯಾರಿಕಾ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲಿದೆ. ಸರ್ಕಾರಿ, ಖಾಸಗಿ ಕಂಪನಿಗಳು ಸ್ವತಂತ್ರವಾಗಿ ಅಥವಾ ಜಂಟಿಯಾಗಿ ಅಥವಾ ಹಲವು ಕಂಪನಿಗಳ ಒಕ್ಕೂಟ ರಚಿಸಿಕೊಂಡು ಈ ಯುದ್ಧವಿಮಾನ ತಯಾರಿಕಾ ಕಾರ್ಯಕ್ರಮಕ್ಕೆ ಬಿಡ್‌ ಸಲ್ಲಿಸಬಹುದಾಗಿದೆ. ಆದರೆ, ಬಿಡ್‌ ಸಲ್ಲಿಸುವ ಕಂಪನಿ ಮಾತ್ರ ಭಾರತೀಯ ಕಂಪನಿ ಆಗಿರಬೇಕು. ಜತೆಗೆ, ಅದು ಭಾರತೀಯ ಕಾನೂನುಗಳು ಮತ್ತು ನಿಯಂತ್ರಣಗಳಿಗೆ ಬದ್ಧವಾಗಿರಬೇಕು ಎಂದು ರಕ್ಷಣಾ ಇಲಾಖೆ ಹೇಳಿದೆ.

ಹಗುರ ಯುದ್ಧ ವಿಮಾನ(ಎಲ್‌ಸಿಎ) ತೇಜಸ್‌ ಅಭಿವೃದ್ಧಿ ಬಳಿಕ ಮಧ್ಯಮ ತೂಕದ ಯುದ್ಧ ವಿಮಾನ ಅಭಿವೃದ್ಧಿಪಡಿಸುವ ಭಾರತದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ. ಪ್ರಧಾನಿ ಮೋದಿ ನೇತೃತ್ವದ ಭದ್ರತೆಗೆ ಸಂಬಂಧಿಸಿದ ಸಚಿವ ಸಂಪುಟ ಸಭೆ ಕಳೆದ ವರ್ಷವೇ ಈ ಯುದ್ಧ ವಿಮಾನ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿತ್ತು. ಈ ಯೋಜನೆಯ ಆರಂಭಿಕ ವೆಚ್ಚ 15 ಸಾವಿರ ಕೋಟಿ ರು. ಎಂದು ಅಂದಾಜಿಸಲಾಗಿದೆ.

==

ಏನಿದು ಎಎಂಸಿಎ ಯುದ್ಧವಿಮಾನ?

ಎಎಂಸಿಎಯು ಐದನೇ ತಲೆಮಾರಿನ ಮಧ್ಯಮ ತೂಕದ ಎರಡು ಎಂಜಿನ್‌ನ ಸ್ಟೆಲ್ತ್‌ ಮತ್ತು ಮಲ್ಟಿರೋಲ್‌ ಯುದ್ಧ ವಿಮಾನವಾಗಿದೆ. ಆಧುನಿಕ ಯುದ್ಧತಂತ್ರಗಳಿಗೆ ಅನುಗುಣವಾಗಿ ಈ ಯುದ್ಧವಿಮಾನ ನಿರ್ಮಿಸಲಾಗುತ್ತದೆ. ಇದರ ತೂಕ 25 ಟನ್‌ ಆಗಿರಲಿದೆ. 6.5 ಟನ್‌ನ ಆಂತರಿಕ ಇಂಧನ ಸಾಮರ್ಥ್ಯ ಹೊಂದಲಿರುವ ಈ ವಿಮಾನಗಳಲ್ಲಿ ಎಐ ಅನ್ನು ಬಳಸಲಾಗುತ್ತದೆ. ಯುಎವಿ ಜತೆಗೆ ಸಮನ್ವಯ ಸಾಧಿಸಿಕೊಂಡು ವೈರಿಪಡೆಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಈ ಯುದ್ಧವಿಮಾನಗಳಿಗಿದೆ. ಆಧುನಿಕ ಯುದ್ಧತಂತ್ರಗಳಿಗೆ ಪೂರಕವಾಗಿ ಈ ಯುದ್ಧವಿಮಾನಗಳು ಅಭಿವೃದ್ಧಿಯಾಗಲಿವೆ.

ಸುಮಾರು 1500 ಕೆ.ಜಿ.ಯಷ್ಟು ಕ್ಷಿಪಣಿಗಳನ್ನು ಸಾಗಿಸುವ ಸಾಮರ್ಥ್ಯ ಈ ವಿಮಾನಕ್ಕೆ ಇರಲಿದೆ. ಇದು ಈಗಾಗಲೇ ಅಭಿವೃದ್ಧಿಪಡಿಸಲಾಗುತ್ತಿರುವ ತೇಜಸ್‌ ಯುದ್ಧವಿಮಾನಗಳಿಗಿಂತ ಭಿನ್ನವಾಗಿರಲಿದೆ. ಶತ್ರುಗಳ ರಾಡಾರ್‌ನಿಂದ ತಪ್ಪಿಸಿಕೊಂಡು ದಾಳಿ ನಡೆಸುವ ಸಾಮರ್ಥ್ಯ ಈ ಯುದ್ಧವಿಮಾನಗಳಿಗೆ ಇರಲಿದೆ. ಈಗಾಗಲೇ ಅಮೆರಿಕ(ಎಫ್‌-22, ಎಫ್‌-35ಎ), ಚೀನಾ( ಜೆ-20) ಮತ್ತು ರಷ್ಯಾವು(ಸುಖೋಯ್‌ ಎಸ್‌ಯು-57) ಈಗಾಗಲೇ ಐದನೇ ತಲೆಮಾರಿನ ಯುದ್ಧವಿಮಾನ ಅಭಿವೃದ್ಧಿಪಡಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದುಡಿಯುವ ಸ್ತ್ರೀಗೆ ಪತಿ ಜೀವನಾಂಶ ಕೊಡಬೇಕಿಲ್ಲ: ಅಲಹಾಬಾದ್‌ ‘ಹೈ’
ಸಂಸತ್‌ ದಾಳಿಗೆ 24 ವರ್ಷ: ಹುತಾತ್ಮರಿಗೆ ಗಣ್ಯರ ಗೌರವ