)
ನದಿಯಡಿ 34 ಕಿ.ಮೀ. ದೂರ ರಸ್ತೆ-ರೈಲು ಮಾರ್ಗಗಳು
6 ಗಂಟೆಯ ಪ್ರಯಾಣದ ಅವಧಿ 20 ನಿಮಿಷಕ್ಕೆ ಇಳಿಕೆ
18,662 ಕೋಟಿ ವೆಚ್ಚದ ಯೋಜನೆಗೆ ಕೇಂದ್ರ ಅಸ್ತುಪಿಟಿಐ ನವದೆಹಲಿದೇಶದ ಮೊದಲ ರಸ್ತೆ-ರೈಲು ಸುರಂಗ ಮಾರ್ಗಕ್ಕೆ (ಅವಳಿ ಸುರಂಗ ಮಾರ್ಗ) ಕೇಂದ್ರ ಸಚಿವ ಸಂಪುಟ ಶನಿವಾರ ಅನುಮೋದನೆ ನೀಡಿದೆ. ಈ ಮಾರ್ಗ ಅಸ್ಸಾಂನ ಗೋಹ್ಪುರ್-ನುಮಲಿಗಢ್ ನಡುವೆ ಬ್ರಹ್ಮಪುತ್ರಾ ನದಿಯಡಿ ವಾಹನಗಳು ಹಾಗೂ ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡಲಿದೆ ಹಾಗೂ ನೀರೊಳಗಿನ 35 ಕಿ.ಮೀ.ನಷ್ಟು ದೂರದವರೆಗೆ ನಿರ್ಮಾಣವಾಗಲಿದೆ.
ಈಗಾಗಲೇ ದೇಶದ ಮೊದಲ ನೀರಡಿಯ ಸುರಂಗ ಮಾರ್ಗವನ್ನು ಮೆಟ್ರೋ ರೈಲು ಮಾರ್ಗಕ್ಕಾಗಿ ಕೋಲ್ಕತಾದಲ್ಲಿ ಹೂಂಗ್ಲಿ ನದಿಯಡಿ ನಿರ್ಮಿಸಲಾಗುತ್ತಿದೆ. ದೇಶದ ಮೊದಲ ಸಮುದ್ರದಡಿಯ ಸುರಂಗ ಮಾರ್ಗವನ್ನು ಅಹಮದಾಬಾದ್-ಮುಂಬೈ ನಡುವಿನ ಸಂಚಾರಕ್ಕಾಗಿ ನಿರ್ಮಿಸಲಾಗುತ್ತಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಆದರೆ ಬ್ರಹ್ಮಪುತ್ರಾ ನದಿಯಲ್ಲಿ ರಸ್ತೆ ಹಾಗೂ ರೈಲಿಗಾಗಿ ಸುರಂಗ ಮಾರ್ಗ ನಿರ್ಮಿತವಾಗಲಿದ್ದು, ಒಟ್ಟಿಗೇ ನಿರ್ಮಾಣ ಆಗುತ್ತಿರುವುದು ಇದೇ ಮೊದಲು.
ಸದ್ಯ ನುಮಲಿಗಢ್-ಗೋಹ್ಪುರ್ ಅನ್ನು ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಪರ್ಕಿಸುವ ಅಂತರವು 240 ಕಿ.ಮೀ. ಆಗಿದೆ. ಈ ಮಾರ್ಗವು ಎನ್‌ಎಚ್-52ನಲ್ಲಿನ ಸಿಲಾಘಾಟ್ ಸಮೀಪದ ಕಲಿಯಂಬೋಮೋರಾ ಸೇತುವೆ ಮೂಲಕ ಹಾದು ಹೋಗುತ್ತದೆ. ಇದಕ್ಕಾಗಿ 6 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ನುಮಾಲಿಗಢ್ ತಲುಪಲು ಕಾಝಿರಂಗ ರಾಷ್ಟ್ರೀಯ ಉದ್ಯಾನ ಮತ್ತು ವಿಶ್ವನಾಥ ನಗರ ಮೂಲಕಹಾದು ಹೋಗಬೇಕಾಗುತ್ತದೆ. ಇದೀಗ ಪ್ರಸ್ತಾವಿತ ಹೊಸ ಸುರಂಗ ಮಾರ್ಗದಿಂದ ಈ ಅಂತರ 20 ನಿಮಿಷಕ್ಕೆ ಇಳಿಯಲಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಈ ಯೋಜನೆಯು 33.7 ಕಿ.ಮೀ. ಉದ್ದದ ಚತುಷ್ಪಥ ರಸ್ತೆ ಮಾರ್ಗವನ್ನು ಒಳಗೊಂಡಿದ್ದು, ಸುರಂಗ ಮಾರ್ಗವು ಬ್ರಹ್ಮಪುತ್ರ ನದಿಯಡಿ ಹಾದುಹೋಗಲಿದೆ. 2021ರಲ್ಲಿ ಪ್ರಸ್ತಾಪಿಸಲಾದ ಈ ಯೋಜನೆಗೆ ಈಗ ಅನುಮೋದನೆ ಸಿಕ್ಕಿದೆ. ಈ ಯೋಜನೆ ಮೂಲಕ ಗೋಹ್ಪುರ್-ನುಮಾಲಿಗಢ್ ನಡುವಿನ ಅಂತರವು 240 ಕಿ.ಮೀ.ನಿಂದ 34 ಕಿ.ಮೀ.ಗೆ ಇಳಿಯಲಿದೆ. ಎರಡೂ ನಗರಗಳ ನಡುವಿನ ಪ್ರಯಾಣ ಅವಧಿಯನ್ನು ಶೇ.95ರಷ್ಟು ಕಡಿತ ಮಾಡಲಿದೆ. ಅಂದರೆ ಆರು ಗಂಟೆಯಿಂದ ಕೇವಲ 20 ನಿಮಿಷಕ್ಕೆ ಇಳಿಸಲಿದೆ. ಈ ಮೂಲಕ ಇಂಧನ, ಸಾಗಣೆ ವೆಚ್ಚವನ್ನು ಭಾರೀ ಪ್ರಮಾಣದಲ್ಲಿ ಇಳಿಸಲಿದೆ.