ನವದೆಹಲಿ : ಈ ಹಿಂದೆ ದಿಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಈಗಿನ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ದಿಲ್ಲಿ ಮನೆಯಲ್ಲಿ ಅಪಾರ ಪ್ರಮಾಣದ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರನ್ನು ವಾಗ್ದಂಡನೆಗೆ ಗುರಿಪಡಿಸಲು ಕೇಂದ್ರ ಸರ್ಕಾರಕ್ಕೆ ಭಾರತದ ಮುಖ್ಯ ನ್ಯಾಯಾಧೀಶರು ಶಿಫಾರಸು ಮಾಡಿದ್ದಾರೆ.
ನ್ಯಾ। ವರ್ಮಾ ವಿರುದ್ಧ ಸುಪ್ರೀಂ ಕೋರ್ಟ್ ನೇಮಿತ ತನಿಖಾ ಸಂಸ್ಥೆ ನೀಡಿರುವ ವರದಿಯನ್ನು ಸಿಜೆಐ ನ್ಯಾ। ಸಂಜೀವ್ ಖನ್ನಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಜೊತೆ ಹಂಚಿಕೊಂಡಿದ್ದು, ವಾಗ್ದಂಡನೆಗೆ ಶಿಫಾರಸು ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.ನ್ಯಾ। ವರ್ಮಾ ನಿವಾಸದಲ್ಲಿ ಹಣಪತ್ತೆ ಸಂಬಂಧ ತನಿಖೆ ನಡೆಸಿಲು ಸುಪ್ರೀಂ ಕೋರ್ಟ್ ನೇಮಿಸಿದ್ದ ಮೂವರು ನ್ಯಾಯಾಧೀಶರ ನೇತೃತ್ವದ ತನಿಖಾ ಸಮಿತಿ ನ್ಯಾಯಮೂರ್ತಿ ನಿವಾಸದಲ್ಲಿ ಹಣ ಪತ್ತೆಯಾಗಿರುವುದು ದೃಢ ಎಂದು ವರದಿ ಸಲ್ಲಿಸಿತ್ತು. ಈ ಬೆನ್ನಲ್ಲೇ ಸಿಜೆಐ ಖನ್ನಾ ಮೋದಿ, ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ತನಿಖಾ ವರದಿಯ ಜೊತೆಗೆ ತಮ್ಮ ಪ್ರತಿಕ್ರಿಯೆ ಹಾಗೂ ನ್ಯಾ। ವರ್ಮಾ ಅವರ ಉತ್ತರವನ್ನೂ ಹಂಚಿಕೊಂಡಿದ್ದಾರೆ.
ಇದರಲ್ಲಿ, ರಾಜೀನಾಮೆ ನೀಡುವಂತೆ ನೀಡಿದ ಸಲಹೆಯನ್ನು ನ್ಯಾ। ವರ್ಮಾ ಪಾಲಿಸದ ಹಿನ್ನೆಲೆಯಲ್ಲಿ ಅವರನ್ನು ವಾಗ್ದಂಡನೆ ಮಾಡುವಂತೆ ಪತ್ರದಲ್ಲಿ ಸಿಜೆಐ ಅವರು ಉಲ್ಲೇಖಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ರಾಜೀನಾಮೆಗೆ ನ್ಯಾ। ವರ್ಮಾ ನಕಾರ, ವಾಗ್ದಂಡನೆ ಶೀಘ್ರ ಶುರು
ಸುಪ್ರೀಂ ಕೋರ್ಟ್‌ನಿಂದ ವಾಗ್ದಂಡನೆ ಶಿಫಾರಸಿಗೆಗೆ ಗುರಿಯಾಗಿರುವ ನ್ಯಾ। ಯಶವಂತ ವರ್ಮಾ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ವಾಗ್ದಂಡಗೆ ಪ್ರಕ್ರಿಯೆ ಶೀಘ್ರ ಆರಂಭವಾಗುವ ನಿರೀಕ್ಷೆಯಿದೆ ಎಂದು ಮೂಲಗಳು ಹೇಳಿವೆ.
ವಾಗ್ದಂಡನೆಗೆ ಗುರಿ ಆಗುವ ಮೊದಲ ಜಡ್ಜ್?
ಈವರೆಗೂ ಯಾವುದೇ ಜಡ್ಜ್ ವಾಗ್ದಂಡನೆಗೆ ಗುರಿಯಾಗಿಲ್ಲ. ವಾಗ್ದಂಡನೆಗ ಪ್ರಕ್ರಿಯೆ ಮುನ್ನವೇ ಅನೇಕ ಜಡ್ಜ್‌ಗಳು ರಾಜೀನಾಮೆ ನೀಡಿದ್ದರು.