ಮಂಗ ಹಿಡಿದುಕೊಟ್ಟರೆ ಮಹಾ ಸರ್ಕಾರದಿಂದ 600 ರು. ಬಹುಮಾನ!

KannadaprabhaNewsNetwork |  
Published : Apr 28, 2026, 01:30 AM IST
ಕೋತಿ | Kannada Prabha

ಸಾರಾಂಶ

ಮಂಗಗಳ ಉಪಟಳ ತಡೆಯುವ ಉದ್ದೇಶದಿಂದ, ಜನವಸತಿ ಪ್ರದೇಶಗಳಲ್ಲಿರುವ ಮಂಗಗಳನ್ನು ಸುರಕ್ಷಿತವಾಗಿ ಹಿಡಿದುಕೊಡುವವರಿಗೆ ಮಹಾರಾಷ್ಟ್ರ ಸರ್ಕಾರ 600 ರು. ಬಹುಮಾನ ಘೋಷಿಸಿದೆ.

ಪುಣೆ: ಮಂಗಗಳ ಉಪಟಳ ತಡೆಯುವ ಉದ್ದೇಶದಿಂದ, ಜನವಸತಿ ಪ್ರದೇಶಗಳಲ್ಲಿರುವ ಮಂಗಗಳನ್ನು ಸುರಕ್ಷಿತವಾಗಿ ಹಿಡಿದುಕೊಡುವವರಿಗೆ ಮಹಾರಾಷ್ಟ್ರ ಸರ್ಕಾರ 600 ರು. ಬಹುಮಾನ ಘೋಷಿಸಿದೆ. ಇದರನ್ವಯ ಪ್ರತಿ ಮಂಗವನ್ನು ಹಿಡಿದುಕೊಟ್ಟಾಗಲೂ ಈ ಮೊತ್ತ ಪಡೆಯಬಹುದಾಗಿದೆ. ಕಂದಾಯ ಮತ್ತು ಅರಣ್ಯ ಇಲಾಖೆಯು ಏ.22ರಂದು ಈ ಯೋಜನೆಯನ್ನು ಘೋಷಿಸಿದೆ. ಮಂಗಗಳ ಸುರಕ್ಷತೆ ದೃಷ್ಟಿಯಿಂದ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನೂ ಜಾರಿಗೊಳಿಸಿದೆ. ಮಂಗಗಳನ್ನು ಬಲೆ ಅಥವಾ ಪಂಜರಗಳಂತಹ ಸುರಕ್ಷಿತ ವಿಧಾನಗಳನ್ನು ಬಳಸಿ ಸೆರೆಹಿಡಿಯಬೇಕು. ಪ್ರತಿ ಕಾರ್ಯಾಚರಣೆಯನ್ನು ಫೋಟೊ ಸಾಕ್ಷ್ಯಗಳೊಂದಿಗೆ ದಾಖಲಿಸಬೇಕು. ಸೆರೆ ಹಿಡಿದ ನಂತರ, ಅವುಗಳನ್ನು ಮಾನವ ವಾಸಸ್ಥಳಗಳಿಂದ ಕನಿಷ್ಠ 10 ಕಿ.ಮೀ. ದೂರದಲ್ಲಿರುವ ಅರಣ್ಯ ಪ್ರದೇಶಗಳಿಗೆ ಸ್ಥಳಾಂತರಿಸಬೇಕು ಎಂದು ತಿಳಿಸಿದೆ.

==

ಇಂಧನ ಕೊರತೆ ಭೀತಿ: ಆಂಧ್ರ ಬಂಕ್‌ಗಳ ಬಳಿ ವಾಹನಗಳ ಭಾರೀ ಕ್ಯೂ

ಅಮರಾವತಿ: ಸರ್ಕಾರದ ಅಭಯದ ಹೊರತಾಗಿಯೂ, ರಾಜ್ಯದಲ್ಲಿ ಇಂಧನ ಅಭಾವ ತಲೆದೋರಿದೆ ಎಂಬ ವದಂತಿಯನ್ನು ನಂಬಿ ರಾಜ್ಯದ ಹಲವು ಕಡೆ ಪೆಟ್ರೋಲ್‌ ಬಂಕ್‌ಗಳ ಮುಂದೆ ವಾಹನ ಸವಾರರು ಕಿ.ಮೀಗಟ್ಟಲೇ ಸರತಿ ಸಾಲಿನಲ್ಲಿ ನಿಂತಿದ್ದ ಘಟನೆ ಸೋಮವಾರ ನಡೆದಿದೆ. 2-3 ದಿನಗಳ ಹಿಂದೆ ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ಅಭಾವ ಉಂಟಾಗಿದ್ದು, ಕೆಲ ಬಂಕ್‌ಗಳಲ್ಲಿ ‘ನೋ ಸ್ಟಾಕ್‌ ಬೋರ್ಡ್‌’ ಹಾಕಲಾಗಿತ್ತು. ಇದು ವಾಹನ ಸವಾರರಲ್ಲಿ ಅತಂಕ ಮೂಡಿಸಿದೆ. ಪರಿಣಾಮ ಕೆಲ ಕಡೆ ಜನರು ಇಂಧನ ತುಂಬಿಸಿಕೊಳ್ಳಲು ಪ್ಲಾಸ್ಟಿಕ್ ಬಾಟಲಿಗಳನ್ನೂ ತೆಗೆದುಕೊಂಡು ಬಂದಿದ್ದ ದೃಶ್ಯ ಹಲವೆಡೆ ಕಂಡು ಬಂತು. ಇದರ ಬೆನ್ನಲ್ಲೇ ಸಿಎಂ ಚಂದ್ರಬಾಬು ನಾಯ್ಡು ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಹಾಗೂ ತೈಲ ಲಭ್ಯತೆಯ ಬಗ್ಗೆ 3 ತಾಸಿಗೊಮ್ಮೆ ತಮಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸದ್ಯದಲ್ಲಿಯೇ ಪರಿಸ್ಥಿತಿ ಸರಿ ಹೋಗುವ ವಿಶ್ವಾಸ ಅಧಿಕಾರಿಗಳು ವ್ಯಕ್ತಪಡಿಸಿದ್ದು, ‘ಗ್ರಾಹಕರು ಭಯದಿಂದ ಇಂಧನ ಸಂಗ್ರಹಿಸಬೇಡಿ’ ಎಂದು ಮನವಿ ಮಾಡಿದ್ದಾರೆ.

==

ಡಿಜಿಟಲ್‌ಗೆ ಮೊರೆ: ಆ್ಯಕ್ಸಿಸ್‌ ಬ್ಯಾಂಕಿಂದ 3000 ಜನಕ್ಕೆ ಕೊಕ್‌

ನವದೆಹಲಿ: ಉತ್ಪಾದಕತೆಗೆ ಡಿಜಿಟಲ್‌ ಸ್ಪರ್ಶ ನೀಡಿರುವ ಆ್ಯಕ್ಸಿಸ್‌ ಬ್ಯಾಂಕ್‌ 2025-26ರ ಹಣಕಾಸು ವರ್ಷದಲ್ಲಿ ಬ್ಯಾಂಕ್‌ ತನ್ನ 3 ಸಾವಿರ ಉದ್ಯೊಗಿಗಳನ್ನು ವಜಾ ಮಾಡಿದೆ ಎಂದು ಶನಿವಾರ ವರದಿಯಾಗಿದೆ. ತಂತ್ರಜ್ಞಾನದಲ್ಲಿನ ನಿರಂತರ ಹೂಡಿಕೆಗಳಿಂದ ಉತ್ಪಾದಕತೆಯಲ್ಲಿ ಹೆಚ್ಚಿರುವ ಲಾಭದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬ್ಯಾಂಕ್‌ ಸಮರ್ಥಿಸಿಕೊಂಡಿದೆ. ಈ ಕುರಿತು ಕಾರ್ಯಕ್ರಮವೊಂದರಲ್ಲಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಅಮಿತಾಭ್‌ ಚೌಧರಿ ಮಾಹಿತಿ ನೀಡಿ, ಬ್ಯಾಂಕ್‌ನ ದೀರ್ಘಕಾಲೀನ ಡಿಜಿಟಲ್ ರೂಪಾಂತರ ಮೇಲೆ ಗಮನ ಹರಿಸಿದ್ದು ನೌಕರಿ ಕಡಿತ ಪ್ರವೃತ್ತಿಗೆ ಕಾರಣ ಎಂದಿದ್ಧಾರೆ. 1.04 ಇದ್ದ ಬ್ಯಾಂಕ್‌ ಔದ್ಯೋಗಿಕ ಸಾಮರ್ಥ್ಯ ಕಡಿತದ ನಂತರ ಈಗ 1.01 ಲಕ್ಷಕ್ಕೆ ಇಳಿದಿದೆ. ಅಲ್ಲದೆ 2025-26 ಹಣಕಾಸು ವರ್ಷದಲ್ಲಿ ಬ್ಯಾಂಕ್‌ ದೇಶದ ವಿವಿಧೆಡೆ 400 ಶಾಖೆಗಳನ್ನು ವಿಸ್ತರಿಸಿದೆ.

==

ಮಹಿಳಾ ಮೀಸಲು ಬಿಲ್‌ ಚರ್ಚೆಗೆ ಬಿಜೆಪಿ ಆಡಳಿತದ 4 ಕಡೆ ವಿಶೇಷ ಅಧಿವೇಶನ

ನವದೆಹಲಿ: ಲೋಕಸಭೆಯಲ್ಲಿ ಸೋಲು ಕಂಡ ಮಹಿಳಾ ಮೀಸಲಾತಿ ತಿದ್ದುಪಡಿ ಮತ್ತು ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಯ ಬಗ್ಗೆ ಬಿಜೆಪಿ ಆಡಳಿತವಿರುವ 4 ರಾಜ್ಯಗಳ ವಿಧಾನಸಭೆಯಲ್ಲಿ ವಿಶೇಷ ಅಧಿವೇಶನ ಕರೆಯಲಾಗಿದೆ. ಇದರ ಭಾಗವಾಗಿ ಮಧ್ಯಪ್ರದೇಶ ಮತ್ತು ಹರ್ಯಾಣದಲ್ಲಿ ಸೋಮವಾರ ಚರ್ಚೆ ಕೈಗೆತ್ತಿಕೊಳ್ಳಲಾಗಿತ್ತಾದರೂ, ವಿಪಕ್ಷಗಳ ಸಭಾತ್ಯಾಗದಿಂದ ಕೊಂಚ ಅಡಚಣೆಯಾಯಿತು. ಅತ್ತ ದೆಹಲಿಯಲ್ಲಿ ಮಂಗಳವಾರ ಮತ್ತು ಒಡಿಶಾದಲ್ಲಿ ಏ.30ರಂದು ಚರ್ಚೆ ನಡೆಯಲಿದೆ. ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ಒದಗಿಸುವ ಮಸೂದೆಯ ಜಾರಿಗೆ ವಿರೋಧವಿಲ್ಲವಾದರೂ, ಅದರೊಂದಿಗೆ ಮಂಡನೆಯಾಗಿದ್ದ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಬಗ್ಗೆ ಸ್ಪಷ್ಟನೆ ಇಲ್ಲದಿದ್ದ ಕಾರಣ ವಿಪಕ್ಷಗಳು ಅದನ್ನು ವಿರೋಧಿಸಿ, ಕಾನೂನಾಗುವುದರಿಂದ ತಡೆದಿದ್ದವು. ಈ ಹಿನ್ನೆಲೆಯಲ್ಲಿ ಆ ಬಗ್ಗೆ ವಿಧಾನಸಭೆಗಳಲ್ಲಿ ಚರ್ಚೆ ನಡೆಸುವ ಮೂಲಕ ಮತ್ತೊಮ್ಮೆ ವಿಷಯವನ್ನು ಮುನ್ನೆಲೆಗೆ ತಂದು ಜನಾಭಿಪ್ರಾಯ ರೂಪಿಸುವ ಉದ್ದೇಶ ಬಿಜೆಪಿಯದ್ದಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಝಾಲ್ಮುರಿಗೆ ಕೌಂಟರ್‌:ತರಕಾರಿ ಮಾರ್ಕೆಟ್‌ನಲ್ಲಿ ದೀದಿ
ಮದುವೆ ಎಂದೇಳಿ ₹9.35 ಕೋಟಿ ವಂಚನೆ: ನಟಿ ಆಶು ವಿರುದ್ಧ ಕೇಸ್‌