ನವದೆಹಲಿ: ಮಂಕಿಪಾಕ್ಸ್ ಸಾಂಕ್ರಾಮಿಕ ವ್ಯಾಪಕವಾಗಿರುವ ದೇಶದಿಂದ ಬಂದ ಯುವಕನೊಬ್ಬನಲ್ಲಿ ಶಂಕಿತ ಮಂಕಿಪಾಕ್ಸ್ ಲಕ್ಷಣಗಳು ಕಂಡುಬಂದ ಬೆನ್ನಲ್ಲೇ, ಕೇಂದ್ರ ಸರ್ಕಾರ ಹೈಅಲರ್ಟ್ ಘೋಷಿಸಿದೆ. ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿರುವಂತೆ ಮತ್ತು ಇದಕ್ಕೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಅದು ಸೂಚಿಸಿದೆ.
ಈ ಕುರಿತು ರಾಜ್ಯಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಅಪೂರ್ವ ಚಂದ್ರ, ‘ಇದುವರೆಗೂ ದೇಶದಲ್ಲಿ ಮಂಕಿಪಾಕ್ಸ್‌ನ ಯಾವುದೇ ಪ್ರಕರಣ ದೃಢಪಟ್ಟಿಲ್ಲ. ಆದರೆ ಎಲ್ಲಾ ಬೆಳವಣಿಗೆಗಳ ಮೇಲೆ ಕೇಂದ್ರ ಸರ್ಕಾರ ನಿಗಾ ಇಟ್ಟಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲಾ ರಾಜ್ಯಗಳು, ವಿದೇಶಗಳಿಂದ ಬಂದ ಎಲ್ಲಾ ಶಂಕಿತರನ್ನು ತಪಾಸಣೆಗೆ ಒಳಪಡಿಸಬೇಕು, ಶಂಕಿತ ಸೋಂಕಿತರ ನಿರ್ವಹಣೆಗೆ ಸಜ್ಜಾಗಿರಬೇಕು’ ಎಂದಿದ್ದಾರೆ.
‘ಶಂಕಿತ ಸೋಂಕಿತರು ಕಂಡುಬಂದರೆ ಅವರ ಸಂಪರ್ಕಕ್ಕೆ ಬಂದವರ ಪಟ್ಟಿ ಮಾಡಲು ಸಜ್ಜಾಗಿರಬೇಕು. ಇದಕ್ಕೆ ಅನುವಾಗುವಂತೆ ತಮ್ಮ ರಾಜ್ಯಗಳಲ್ಲಿನ ಆರೋಗ್ಯ ಕೇಂದ್ರಗಳಲ್ಲಿನ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಬೇಕು, ಆಸ್ಪತ್ರೆಗಳಲ್ಲಿನ ಐಸೋಲೇಷನ್ ಕೊಠಡಿಗಳನ್ನು ಗುರುತಿಸಬೇಕು, ಯಾವುದೇ ಪರಿಸ್ಥಿತಿ ಎದುರಿಸಲು ಅಗತ್ಯವಾದ ಸಂಚಾರ ವ್ಯವಸ್ಥೆ, ಮಾನವ ಸಂಪನ್ಮೂಲ ಲಭ್ಯತೆ ಖಚಿತಪಡಿಸಿಕೊಳ್ಳಬೇಕು. ಸೋಂಕು ಪತ್ತೆಗೆ ಅರ್ಹ ಪ್ರಯೋಗಾಲಯಗಳ ಕಾರ್ಯನಿರ್ವಹಣೆ ಖಚಿತಪಡಿಸಿಕೊಳ್ಳಬೇಕು. ಸೋಂಕು ತಡೆ ಮತ್ತು ಸೋಂಕು ಪ್ರಸರಣ ತಡೆಗೆ ಅಗತ್ಯವಾದ ಕಾರ್ಯಸೂಚಿ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು’ಎಂದು ಸೂಚಿಸಿದ್ದಾರೆ.