ಅಕ್ಕಿ ಬೆಲೆ ಏರಿಕೆ ತಡೆಗೆ ಕೇಂದ್ರದ ಮಧ್ಯಪ್ರವೇಶ

Published : Nov 07, 2026, 06:26 AM IST
Rice

ಸಾರಾಂಶ

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮುಂಗಾರು ಕೊರತೆಯಿಂದಾಗಿ ಅಕ್ಕಿ ಬೆಲೆಯಲ್ಲಿ ಭಾರೀ ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ದರ ಇಳಿಕೆಗೆ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಘೋಷಿಸಿದೆ.

ನವದೆಹಲಿ: ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮುಂಗಾರು ಕೊರತೆಯಿಂದಾಗಿ ಅಕ್ಕಿ ಬೆಲೆಯಲ್ಲಿ ಭಾರೀ ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ದರ ಇಳಿಕೆಗೆ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಘೋಷಿಸಿದೆ. ಅಕ್ಕಿ ದಾಸ್ತಾನಿಗೆ ಮಿತಿ ಹೇರುವ ಅಧಿಕಾರವನ್ನು ದಕ್ಷಿಣದ 5 ರಾಜ್ಯ ಸರ್ಕಾರಗಳಿಗೆ ನೀಡುವ ಜೊತೆಗೆ, ದೇಶದ ಎಲ್ಲಾ ಮಾರಾಟಗಾರರು ಹಾಗೂ ಗಿರಣಿ ಮಾಲೀಕರು ತಮ್ಮ ಬಳಿ ಇರುವ ಅಕ್ಕಿಯ ಪ್ರಮಾಣವನ್ನು ಘೋಷಿಸಬೇಕು ಎಂದು ಕೇಂದ್ರ ಸರ್ಕಾರ ಶುಕ್ರವಾರ ಆದೇಶಿಸಿದೆ.

ಇದರನ್ವಯ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಸಗಟು, ಚಿಲ್ಲರೆ ವ್ಯಾಪಾರಿಗಳು, ಸಂಸ್ಕರಣಾಗಾರರು ಮತ್ತು ಗಿರಣಿದಾರರು ಬಾಸ್ಮತಿ ಅಕ್ಕಿ, ಬಾಸ್ಮತಿ ಅಲ್ಲದ ಅಕ್ಕಿ, ಬಾಸ್ಮತಿ ಅಲ್ಲದ ಪ್ರೀಮಿಯಂ ಅಕ್ಕಿ, ಕುಚಿಲಕ್ಕಿ, ಅಕ್ಕಿ ನುಚ್ಚು ಮತ್ತು ಭತ್ತ ಎಂಬ 6 ವರ್ಗಗಳ ಅಡಿಯಲ್ಲಿ ದಾಸ್ತಾನು ಪ್ರಮಾಣವನ್ನು ಘೋಷಿಸಬೇಕು. ಈ ಬಗೆಗಿನ ಮಾಹಿತಿಯನ್ನು foodstock.dfpd.gov.in ಪೋರ್ಟಲ್‌ನಲ್ಲಿ ಪ್ರತಿ ಶುಕ್ರವಾರ ನವೀಕರಿಸಬೇಕು. ಮಾಡದಿದ್ದಲ್ಲಿ, 1955ರ ಅಗತ್ಯ ಸರಕುಗಳ ಕಾಯ್ದೆಯ ಸೆಕ್ಷನ್ 6 ಮತ್ತು 7ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

ಇದೇ ವೇಳೆ, ದಕ್ಷಿಣದ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ಕೇರಳಂ, ತಮಿಳುನಾಡು ಮತ್ತು ತೆಲಂಗಾಣದ ಸರ್ಕಾರಗಳಿಗೆ ಭತ್ತ ಹಾಗೂ ಅಕ್ಕಿ ದಾಸ್ತಾನು ಪ್ರಮಾಣವನ್ನು ನಿಗದಿಪಡಿಸುವ ಅಧಿಕಾರ ನೀಡಲಾಗಿದೆ. ಇದು 2027ರ ಜ.31ರ ವರೆಗೆ ಜಾರಿಯಲ್ಲಿರಲಿದೆ. ಅನಧಿಕೃತ ಸಂಗ್ರಹಣೆ ಮತ್ತು ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕುವುದು ಇದರ ಉದ್ದೇಶ.

ಹೆಚ್ಚುವರಿ ಅಕ್ಕಿ ಬಿಡುಗಡೆ:

ಅಕ್ಕಿ ದರ ಹೆಚ್ಚಳವು ಜನರಿಗೆ ಹೊರೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ, ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಸಿಗುವ ‘ಭಾರತ್‌ ಅಕ್ಕಿ’ ರೂಪದಲ್ಲಿ ಮಾರಾಟ ಮಾಡಲೆಂದು ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ ನಿಯಮಿತ (ಎನ್‌ಎಎಫ್‌ಇಡಿ), ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ ನಿಯಮಿತ (ಎನ್‌ಸಿಸಿಎಫ್‌) ಮತ್ತು ಕೇಂದ್ರೀಯ ಭಂಡಾರ್‌ಗೆ ಹೆಚ್ಚುವರಿ ಅಕ್ಕಿಯನ್ನು ಕೇಂದ್ರ ಬಿಡುಗಡೆ ಮಾಡಿದೆ. ಇದನ್ನು ವಿಶೇಷವಾಗಿ ದಕ್ಷಿಣ ಭಾರತದಲ್ಲಿ ವಿತರಿಸಲು ಸೂಚಿಸಲಾಗಿದೆ.

ಜತೆಗೆ, 2026-27ರ ಅವಧಿಯಲ್ಲಿ ಇ-ಹರಾಜು ಪ್ರಕ್ರಿಯೆಯ ಮೂಲಕ 25 ಲಕ್ಷ ಟನ್‌ ಬದಲು ದುಪ್ಪಟ್ಟು (50 ಲಕ್ಷ ಟನ್‌) ಅಕ್ಕಿಯನ್ನು ಸಗಟು ಮಾರಾಟಗಾರರಿಗೆ ಮಾರುವ ಗುರಿಯನ್ನು ಸರ್ಕಾರ ಇಟ್ಟುಕೊಂಡಿದೆ. ಈಗಾಗಲೇ ಅ.31ರ ವರೆಗೆ 25 ಲಕ್ಷ ಟನ್‌ ಅಕ್ಕಿ ಮಾರಾಟ ಮಾಡಲಾಗಿದೆ.

ಬೆಲೆ ವಿಪರೀತ ಏರಿಕೆ:

ಈ ವರ್ಷ ಅಕ್ಕಿ ಬೆಲೆ ವಿಪರೀತ ಏರಿಕೆ ಕಂಡಿದೆ. ಆಗಸ್ಟ್‌ನಲ್ಲಿದ್ದ ಶೇ.5.89ರಷ್ಟಿದ್ದ ಅಕ್ಕಿ ಚಿಲ್ಲರೆ ಹಣದುಬ್ಬರ ದರ ಸೆಪ್ಟೆಂಬರ್‌ನಲ್ಲಿ ಶೇ.8.25ರಷ್ಟಾಗಿದೆ. ಈ ಅವಧಿಯಲ್ಲಿ ಸರಾಸರಿ ಚಿಲ್ಲರೆ ಬೆಲೆ ಪ್ರತಿ ಕೆಜಿಗೆ ಸುಮಾರು 48.23 ರು. ಇದ್ದು, ಹಿಂದಿನ ವರ್ಷಕ್ಕಿಂತ ಶೇ.12ರಷ್ಟು ಹೆಚ್ಚಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸರ್ಕಾರಿ ಫಲಾನುಭವಿ ಆಯ್ಕೆಗೆ ವೋಟರ್‌ ಐಡಿ ಬಳಕೆ ಹಕ್ಕಿನ ಕಳವು: ರಾಹುಲ್‌ ಆಕ್ರೋಶ
ಅಮೆರಿಕದ 2 ಅತಿದೊಡ್ಡ ನಗರಕ್ಕೆ ಭಾರತೀಯ ಮೂಲದ ಮೇಯರ್‌