;Resize=(412,232))
ನವದೆಹಲಿ: ವಿಮಾ ಸೇವೆಗಳನ್ನು ಪಾರದರ್ಶಕ ಮತ್ತು ಗ್ರಾಹಕಸ್ನೇಹಿ ಮಾಡುವ ಉದ್ದೇಶದಿಂದ ವಿಮಾ ವಿತರಕರ ಕಮಿಷನ್ ಕಡಿತಗೊಳಿಸುವುದು ಸೇರಿದಂತೆ ಇನ್ಶೂರೆನ್ಸ್ ಹಂಚಿಕೆ ನಿಯಮಾವಳಿಯಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಮಾಡುವ ಬಗ್ಗೆ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಪ್ರಸ್ತಾಪಿಸಿದೆ.
ಇದು ಷೇರುಪೇಟೆಯಲ್ಲಿ ಅಲ್ಲೋಲ- ಕಲ್ಲೋಲಕ್ಕೆ ಕಾರಣವಾಗಿದ್ದು, ಸೆನ್ಸೆಕ್ಸ್ 1248 ಅಂಕ ಕುಸಿದಿದೆ. ವಿಮಾ ಸೇವೆ ಒದಗಿಸುವ ಕಂಪನಿಗಳು, ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ಷೇರು ಬೆಲೆಗಳು ಕುಸಿತ ಕಂಡಿವೆ. ಹೂಡಿಕೆದಾರರಿಗೆ ಒಂದೇ ದಿನ 3.54 ಲಕ್ಷ ಕೋಟಿ ರು. ನಷ್ಟವಾಗಿದೆ.
ಪ್ರಾಧಿಕಾರದ ಪ್ರಸ್ತಾವನೆಯ ಅನ್ವಯ, ವಿಮೆ ವಿತರಿಸುವ ಕಂಪನಿಗಳು ಮತ್ತು ಏಜೆಂಟ್‌ಗಳ ಕಮೀಷನ್ ಅನ್ನು ವಿಮೆ ಪ್ರೀಮಿಯಂ ಅವಧಿಗೆ ಅನುಗುಣವಾಗಿ ಬದಲಾವಣೆ ಮಾಡುವ ಅಂದರೆ ಕಡಿತ ಮಾಡಲು ನಿರ್ಧರಿಸಲಾಗಿದೆ. ಈ ಪ್ರಸ್ತಾವನೆ ಅನ್ವಯ, ಪ್ರೀಮಿಯಂ ಕಟ್ಟುವ ಅವಧಿ 5 ವರ್ಷಕ್ಕಿಂತ ಕಡಿಮೆ ಇದ್ದರೆ, ಮೊದಲ ವರ್ಷ ವಿಮಾ ಕಂಪನಿಗೆ ಶೇ.5ರಷ್ಟು, ಏಜೆಂಟ್‌ಗಾದರೆ ಶೇ.6.25ರಷ್ಟು ಕಮಿಷನ್ ಹೋಗುತ್ತದೆ. 5 ವರ್ಷದ ವಿಮೆಯಾದರೆ ಕಂಪನಿಗೆ 10%, ಏಜೆಂಟ್‌ಗೆ 12.5%, 6-8 ವರ್ಷದ್ದಾದರೆ ಕಂಪನಿಗೆ 14%, ಏಜೆಂಟ್‌ಗೆ 17.5%, 9 ವರ್ಷಕ್ಕೆ ಕಂಪನಿಗೆ 18%, ಏಜೆಂಟ್‌ಗೆ 22.5%, 10 ವರ್ಷಕ್ಕಿಂತ ಹೆಚ್ಚಿನ ಪಾವತಿ ಅವಧಿ ಇದ್ದರೆ ಕಂಪನಿಗೆ 20%, ಏಜೆಂಟ್‌ಗೆ 25% ಕಮಿಷನ್ ಸಿಗಲಿದೆ. ಇದು, ಈ ಮೊದಲಿದ್ದ ಮೊತ್ತಕ್ಕಿಂತ ಶೇ.0.5ರಿಂದ ಹಿಡಿದು ಶೇ.10ಷ್ಟು (ಅವಧಿಯ ಮೇಲೆ ಅವಲಂಬಿತ) ಕಡಿಮೆ.
ಇದರೊಂದಿಗೆ, ಪಾಲಿಸಿ ದಾಖಲೆಗಳಲ್ಲಿ ಕಮಿಷನ್ ಕುರಿತ ಮಾಹಿತಿಯನ್ನು ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸುವ ಸಲಹೆಯನ್ನೂ ನೀಡಲಾಗಿದೆ.
ಕ್ರಾಸ್ ಸೆಲ್ಲಿಂಗ್‌ಗೆ (ಕಮಿಷನ್‌ಗಾಗಿ ತಪ್ಪಾದ ವಿಮೆ ಮಾರಾಟ) ಕಡಿವಾಣ ಹಾಕುವ, ಕಮಿಷನ್ ಕುರಿತು ಗ್ರಾಹಕರಿಗೆ ಸೂಕ್ತ ಮಾಹಿತಿ ಸಿಗುವಂತೆ ಮಾಡುವ, ಇನ್ಶೂರೆನ್ಸ್ ವಿಚಾರದಲ್ಲಿ ಹೆಚ್ಚಿನ ಪಾರದರ್ಶಕತೆ ಹಾಗೂ ವಿಮಾದಾರರಿಗೆ ಡಿಜಿಟಲ್ ಸೇವೆಗಳನ್ನು ವಿಸ್ತರಿಸುವ ಉದ್ದೇಶದಿಂದ ಹಲವು ಬದಲಾವಣೆಗಳನ್ನು ಪ್ರಸ್ತಾಪಿಸಲಾಗಿದೆ. ಇದರಿಂದ ವಿಮೆ ಪ್ರೀಮಿಯಂ ಕೂಡ ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಇದೇ ವೇಳೆ ಮೋಟಾರ್ ವಿಮೆ ಖರೀದಿಯಲ್ಲೂ ಬದಲಾವಣೆ ಪ್ರಸ್ತಾಪ ಮಾಡಲಾಗಿದೆ. ಹೊಸ ವಾಹನ ಖರೀದಿಗೆ ಡಿಜಿಟಲ್ ವೇದಿಕೆಗಳ ಮೂಲಕ ವಿಮೆ ಖರೀದಿ ಅವಕಾಶ ನೀಡಬೇಕು. ವಿಮೆ ವಿತರಿಸಲು ಬಯಸುವ ಡೀಲರ್‌ಗಳು ‘ವಿಮಾ ವಿತರಕ’ ಎಂದು ನೋಂದಾಯಿಸಿಕೊಳ್ಳುವುದು ಕಡ್ಡಾಯ. ಥರ್ಡ್ ಪಾರ್ಟಿ ವಿಮೆ ಕಡ್ಡಾಯವಾಗಿರಲಿದ್ದು, ಅದಕ್ಕೆ ವಿಧಿಸುವ ಕಮಿಷನ್ ಗಮನಾರ್ಹ ಪ್ರಮಾಣದಲ್ಲಿ ಕಡಿತ. ವಿಮೆ ಮಾರುವ ಡಿಜಿಟಲ್ ವೇದಿಕೆಗಳಿಗೆ ಶುಲ್ಕದ ಮಿತಿಯನ್ನು ಶೇ.5ಕ್ಕೆ ನಿಗದಿಪಡಿಸುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.
2023-25ರ ಅವಧಿಯಲ್ಲಿ ವಾಹನ ವಿಮೆ ಪ್ರೀಮಿಯಂನಲ್ಲಿ ಶೇ.34 ಮತ್ತು ಕಮಿಷನ್ ಪ್ರಮಾಣ ಶೇ.259ರಷ್ಟು ಭಾರೀ ಏರಿಕೆ ಕಂಡಿದೆ. 2025ರ ಹಣಕಾಸು ವರ್ಷವೊಂದರಲ್ಲೇ ವಿಮೆ ವಿತರಕರು ಪ್ರೀಮಿಯಂ ಸ್ವರೂಪದಲ್ಲಿ 29000 ಕೋಟಿ ರು. ಸಂಗ್ರಹಿಸಿದ್ದಾರೆ. ಇದರಲ್ಲಿ ಅವರಿಗೆ 7050 ಕೋಟಿ ರು.ನಷ್ಟು ಕಮಿಷನ್ ಸಂದಾಯವಾಗಿದೆ. ಹೀಗಾಗಿ ಕಮಿಷನ್ ಕಡಿತಕ್ಕೆ ಪ್ರಸ್ತಾಪ ಮಾಡಲಾಗಿದೆ.
ಈ ಪ್ರಸ್ತಾಪಿತ ಸುಧಾರಣೆಗಳು ಗ್ರಾಹಕ ಕೇಂದ್ರೀಕೃತ, ಪರಿಣಾಮಕಾರಿ ಮತ್ತು ಪಾರದರ್ಶಕ ವಿಮಾ ಹಂಚಿಕೆ ವ್ಯವಸ್ಥೆ ಸೃಷ್ಟಿಯ ಉದ್ದೇಶ ಹೊಂದಿದೆ ಎಂದು ಐಆರ್‌ಡಿಎಐ ತಿಳಿಸಿದೆ.