ಮಿತ್ರಪಕ್ಷಗಳ ರಾಜ್ಯಗಳಾದ ಬಿಹಾರ, ಆಂಧ್ರಕ್ಕೆ ಕೇಂದ್ರ ಬಜೆಟ್‌ನಲ್ಲಿ ಭರ್ಜರಿ ಕೊಡುಗೆ

KannadaprabhaNewsNetwork | Updated : Jul 24 2024, 05:18 AM IST
Follow Us

ಸಾರಾಂಶ

ವಿಶೇಷ ಸ್ಥಾನಮಾನ ಹಾಗೂ 50 ಸಾವಿರ ಕೋಟಿ ರು. ಅನುದಾನ ಕೇಳಿದ್ದ ಮಿತ್ರಪಕ್ಷಗಳ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ಬಿಹಾರಕ್ಕೆ ಮೋದಿ ಸರ್ಕಾರ ಬಜೆಟ್‌ನಲ್ಲಿ ಕೇಳಿದಷ್ಟು ಅಲ್ಲದಿದ್ದರೂ ಭರ್ಜರಿ ಕೊಡುಗೆಯನ್ನೇ ನೀಡಿದೆ.

  ನವದೆಹಲಿ :  ವಿಶೇಷ ಸ್ಥಾನಮಾನ ಹಾಗೂ 50 ಸಾವಿರ ಕೋಟಿ ರು. ಅನುದಾನ ಕೇಳಿದ್ದ ಮಿತ್ರಪಕ್ಷಗಳ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ಬಿಹಾರಕ್ಕೆ ಮೋದಿ ಸರ್ಕಾರ ಬಜೆಟ್‌ನಲ್ಲಿ ಕೇಳಿದಷ್ಟು ಅಲ್ಲದಿದ್ದರೂ ಭರ್ಜರಿ ಕೊಡುಗೆಯನ್ನೇ ನೀಡಿದೆ. ಆಂಧ್ರಪ್ರದೇಶ ರಾಜಧಾನಿ ಅಮರಾವತಿ ಅಭಿವೃದ್ಧಿಗೆ 15 ಸಾವಿರ ಕೋಟಿ ರು. ಹಾಗೂ ಬಿಹಾರ ರಸ್ತೆ ಅಭಿವೃದ್ಧಿಗೆ 26 ಸಾವಿರ ಕೋಟಿ ರು. ಅನುದಾನ ಘೋಷಿಸಲಾಗಿದೆ.

ಇತ್ತೀಚೆಗೆ ಬಿಜೆಪಿಗೆ ಬಹುಮತ ಬಾರದ ಕಾರಣ ಎನ್‌ಡಿಎ ಅಂಗಪಕ್ಷಗಳಾದ ಬಿಹಾರದ ಜೆಡಿಯು ಹಾಗೂ ಆಂಧ್ರಪ್ರದೇಶದ ತೆಲುಗುದೇಶಂ ಪಕ್ಷಗಳೇ ಮೋದಿ ಸರ್ಕಾರಕ್ಕೆ ಆಧಾರವಾಗಿವೆ. ಹೀಗಾಗಿಯೇ ಈ ಎರಡೂ ಪಕ್ಷಗಳು ತಮ್ಮ ತಮ್ಮ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ಹಾಗೂ 50 ಸಾವಿರ ಕೋಟಿ ರು. ಅನುದಾನ ಕೇಳಿದ್ದವು.

ಆಂಧ್ರಕ್ಕೇನು?:

ಆಂಧ್ರಪ್ರದೇಶ ರಾಜಧಾನಿ ಅಮರಾವತಿ ಅಭಿವೃದ್ಧಿಗೆ 15 ಸಾವಿರ ಕೋಟಿ ರು. ನೀಡುವ ಜತೆಗೆ, ಆಂಧ್ರಪ್ರದೇಶ ಜನರ ಜೀವನಾಡಿಯಾದ ಪೋಲಾವರಂ ನೀರಾವರಿ ಯೋಜನೆ ಪೂರ್ಣಗೊಳಿಸಲು ಕೇಂದ್ರೀಯ ಆರ್ಥಿಕ ನೆರವು ಸಾರಲಾಗಿದೆ.

ಇನ್ನು ಎಪಿ ಮರುಸಂಘಟನೆ ಕಾಯಿದೆಯಡಿಯಲ್ಲಿ ರಾಯಲಸೀಮಾ, ಪ್ರಕಾಶಂ ಉತ್ತರ ಕರಾವಳಿ ಆಂಧ್ರಪ್ರದೇಶದ ಹಿಂದುಳಿದ ಪ್ರದೇಶಗಳಿಗೆ ನೀರು, ವಿದ್ಯುತ್, ರೈಲ್ವೆ ಮತ್ತು ರಸ್ತೆಗಳಂತಹ ಕೈಗಾರಿಕೆಗಳ ಅಭಿವೃದ್ಧಿ ಮತ್ತು ಅಗತ್ಯ ಮೂಲಸೌಕರ್ಯಗಳಿಗೆ ಸಹ ಹಣವನ್ನು ಒದಗಿಸಲಾಗುವುದು.

ವಿಶಾಖಪಟ್ಟಣಂ-ಚೆನ್ನೈ ಮತ್ತು ಹೈದರಾಬಾದ್-ಬೆಂಗಳೂರು ಕೈಗಾರಿಕಾ ಕಾರಿಡಾರ್‌ಗಳನ್ನೂ ಸಹ ವಿತ್ತ ಸಚಿವೆ ಘೋಷಿಸಿದ್ದಾರೆ.

ಬಿಹಾರಕ್ಕೇನು?:

ಕೇಂದ್ರ ಬಜೆಟ್ ಮಂಗಳವಾರ ಬಿಹಾರಕ್ಕೆ ದೊಡ್ಡ ಕ್ರಮಗಳನ್ನು ಅನಾವರಣಗೊಳಿಸಿದೆ, ರಾಜ್ಯದಲ್ಲಿನ ವಿವಿಧ ರಸ್ತೆ ಯೋಜನೆಗಳಿಗೆ 26,000 ಕೋಟಿ ರು. ಘೋಷಿಸಲಾಗಿದೆ. ಪ್ರವಾಹ ಪರಿಹಾರಕ್ಕಾಗಿ ಕೇಂದ್ರ ಸರ್ಕಾರವು ರಾಜ್ಯಕ್ಕೆ 11,500 ಕೋಟಿ ರು. ನೀಡಲಿದೆ.

ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕೇಂದ್ರವು ‘ಪೂರ್ವೋದಯ’ ಯೋಜನೆಯನ್ನು ಸಹ ರೂಪಿಸುತ್ತದೆ. ಪೂರ್ವ ಪ್ರದೇಶದ ಅಭಿವೃದ್ಧಿಗಾಗಿ ಅಮೃತಸರ-ಕೋಲ್ಕತಾ ಕೈಗಾರಿಕಾ ಕಾರಿಡಾರ್ ಅನ್ನು ಸರ್ಕಾರ ಉತ್ತೇಜಿಸಲಿದೆ.

ಸಾಲದ ಮೊತ್ತದ ಶೇ.3 ರಷ್ಟು ಬಡ್ಡಿ ರಿಯಾಯಿತಿಯೊಂದಿಗೆ ಸರ್ಕಾರವು ನೇರವಾಗಿ ಪ್ರತಿ ವರ್ಷ 1 ಲಕ್ಷ ವಿದ್ಯಾರ್ಥಿಗಳಿಗೆ ಇ-ವೋಚರ್‌ಗಳನ್ನು ನೀಡುತ್ತದೆ;

ಗಯಾ ವಿಷ್ಣುಪಾದ ಮತ್ತು ಮಹಾಬೋಧಿ ದೇವಸ್ಥಾನದ ಕಾರಿಡಾರ್‌ಗಳನ್ನು ವಿಶ್ವದರ್ಜೆಯ ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸುವ ಯೋಜನೆ ಹಮ್ಮಿಕೊಳ್ಳಲಾಗುವುದು ಹಾಗೂ ರಾಜಗೀರ್ ಮತ್ತು ನಳಂದಾವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಕೇಂದ್ರ ಯೋಜಿಸಿದ ಎಂದು ತಿಳಿಸಲಾಗಿದೆ.

ತಾರತಮ್ಯ ಮಾಡಿಲ್ಲ, ಎಲ್ಲಾ ರಾಜ್ಯಕ್ಕೂ ನೆರವು: ನಿರ್ಮಲಾ

ನವದೆಹಲಿ: ಬಜೆಟ್‌ನಲ್ಲಿ ಮಿತ್ರಪಕ್ಷಗಳ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ ಎಂಬ ವಿಪಕ್ಷಗಳ ಟೀಕೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಳ್ಳಿಹಾಕಿದ್ದಾರೆ. ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಹಣ ನೀಡಿದೆ. ಕೇವಲ 230 ಸ್ಥಾನಗಳನ್ನು ಗೆದ್ದಿರುವ ವಿಪಕ್ಷಗಳಿಗೆ ಅದನ್ನು ಪ್ರಶ್ನಿಸುವ ಹಕ್ಕಿಲ್ಲ ಎಂದು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ 3.0 ಸರ್ಕಾರ ಅವಧಿಯಲ್ಲಿ ಭಾರತದ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ತಂದಿದ್ದು, ಈ ನಿಟ್ಟಿನಲ್ಲಿ ಈ ಬಾರಿಯ ಬಜೆಟ್‌ನಲ್ಲಿ ಎಲ್ಲಾ ರಾಜ್ಯಗಳಿಗೆ 1.5 ಲಕ್ಷ ಕೋಟಿ ರು. ಹಣಕಾಸು ಸಹಾಯವನ್ನು ನೀಡಿದ್ದೇವೆ ಎಂದರು.