ರಾಮನಗರ ಹೆಸರು ಬದಲಿಗೆ ಕೇಂದ್ರ ಸರ್ಕಾರ ತಡೆ : ಯಾವುದೇ ಪ್ರಕ್ರಿಯೆ ನಡೆಸದಂತೆ ಸೂಚನೆ

KannadaprabhaNewsNetwork |  
Published : Mar 20, 2025, 01:15 AM ISTUpdated : Mar 20, 2025, 04:57 AM IST
ರಾಮನಗರ | Kannada Prabha

ಸಾರಾಂಶ

ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಕೇಂದ್ರ ಸರ್ಕಾರ ತಡೆಯೊಡ್ಡಿದ್ದು, ಈ ನಿರ್ಧಾರದ ಕುರಿತು ಯಾವುದೇ ಪ್ರಕ್ರಿಯೆ ನಡೆಸದಂತೆ ಸೂಚನೆ ನೀಡಿದೆ.

 ಬೆಂಗಳೂರು : ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಕೇಂದ್ರ ಸರ್ಕಾರ ತಡೆಯೊಡ್ಡಿದ್ದು, ಈ ನಿರ್ಧಾರದ ಕುರಿತು ಯಾವುದೇ ಪ್ರಕ್ರಿಯೆ ನಡೆಸದಂತೆ ಸೂಚನೆ ನೀಡಿದೆ.

ತನ್ಮೂಲಕ ಬ್ರ್ಯಾಂಡ್ ಬೆಂಗಳೂರು ಹೆಸರಿನ ಪ್ರಯೋಜನವನ್ನು ರಾಮನಗರ ಜಿಲ್ಲೆಗೂ ವಿಸ್ತರಿಸಲು ಉದ್ದೇಶಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಉದ್ದೇಶಕ್ಕೆ ಅಡ್ಡಿ ಆದಂತಾಗಿದೆ.

2024ರ ಜುಲೈ ತಿಂಗಳಲ್ಲಿ ರಾಜ್ಯ ಸಚಿವ ಸಂಪುಟ ಸಭೆಯು ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಲು ತೀರ್ಮಾನ ಮಾಡಿತ್ತು. ಸ್ಥಳೀಯ ಶಾಸಕರು ಹಾಗೂ ಜನರ ಅಪೇಕ್ಷೆಯಂತೆ ವಿಷಯ ಮಂಡಿಸುತ್ತಿರುವುದಾಗಿ ಹೇಳಿದ್ದ ಡಿ.ಕೆ.ಶಿವಕುಮಾರ್‌ ಅವರು ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಮಂಡಿಸಿ ಒಪ್ಪಿಗೆ ಪಡೆದಿದ್ದರು.

ಬಳಿಕ ಹೆಸರು ಬದಲಾವಣೆಗೆ ಅನುಮೋದನೆ ಪಡೆಯಲು ರಾಜ್ಯ ಸರ್ಕಾರ ಸಚಿವ ಸಂಪುಟ ನಿರ್ಧಾರವನ್ನು ಕೇಂದ್ರ ಗೃಹ ಇಲಾಖೆಗೆ ಕಳುಹಿಸಿತ್ತು. ಕೇಂದ್ರ ಗೃಹ ಇಲಾಖೆ ಎರಡು ತಿಂಗಳ ಹಿಂದೆಯೇ ಪ್ರಸ್ತಾವನೆ ವಾಪಸ್‌ ಕಳುಹಿಸಿದೆ. ಕಾನೂನು ಸುವ್ಯವಸ್ಥೆಗೆ ಸಮಸ್ಯೆ ಉಂಟಾಗಬಹುದು ಎಂಬ ಕಾರಣವನ್ನು ಮಾತ್ರ ನೀಡಿ ಪ್ರಸ್ತಾವನೆ ಮುಂದುವರೆಸದಂತೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಕೇಂದ್ರ ಸರ್ಕಾರ ಸಕಾರಣ ಇಲ್ಲದೆ ಪ್ರಸ್ತಾವನೆ ವಾಪಸ್‌ ಕಳುಹಿಸಿದೆ. ಕಾನೂನು ಪ್ರಕಾರ, ಜಿಲ್ಲೆ ಅಥವಾ ಸ್ಥಳದ ಹೆಸರು ಮರುನಾಮಕರಣಕ್ಕೆ ಕೇಂದ್ರದಿಂದ ಒಪ್ಪಿಗೆ ಬೇಕಿಲ್ಲ. ಇದು ರಾಜ್ಯ ವ್ಯಾಪ್ತಿ ವಿಷಯವಾಗಿದ್ದು, ರಾಜ್ಯ ಸರ್ಕಾರ ನೋಂದಣಿ ಹಾಗೂ ದಾಖಲೆ ನಿರ್ವಹಣೆ ಉದ್ದೇಶಕ್ಕೆ ಕೇಂದ್ರ ಸರ್ಕಾರದ ಗಮನಕ್ಕೆ ತರುತ್ತದೆ ಎಂದು ಹೇಳಿದರು.

ಸಕಾರಣವಿಲ್ಲದೆ ತಿರಸ್ಕರಿಸುವಂತಿಲ್ಲ:

ಈ ಬಗ್ಗೆ ಕಾನೂನು ಇಲಾಖೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ‘ರಾಜ್ಯ ಸರ್ಕಾರ ಐತಿಹಾಸಿಕ, ಪಾರಂಪರಿಕ ಅಥವಾ ತಾಲೂಕು, ಜಿಲ್ಲಾ ಕೇಂದ್ರದಂಥ ಪ್ರಮುಖ ಸ್ಥಳ ಅಥವಾ ನಗರದ ಹೆಸರು ಬದಲಾವಣೆ ಮಾಡುವಾಗ ಕೇಂದ್ರದಿಂದ ನಿರಾಕ್ಷೇಪಣಾ ಪತ್ರ ಪಡೆಯುವುದು ಅವಶ್ಯ. ಆದರೆ ಇದು ರಾಜ್ಯದ ವ್ಯಾಪ್ತಿಯ ವಿಷಯವಾಗಿರುವುದರಿಂದ ಸಕಾರಣವಿಲ್ಲದೆ ಕೇಂದ್ರ ಸರ್ಕಾರ ತಿರಸ್ಕರಿಸುವಂತಿಲ್ಲ’ ಎಂದು ಹೇಳಿದ್ದಾರೆ.

ಅಲ್ಲದೆ, ಇದು ರಾಜ್ಯ ವಿಷಯದ ಪಟ್ಟಿಗೆ ಬರುವುದರಿಂದ ಯಾವ ರೀತಿಯಲ್ಲಿ ಮರುನಾಮಕರಣ ನಿರ್ಧಾರ ಮುಂದುವರೆಸಬೇಕು ಎಂಬ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರಂಭದಿಂದಲೂ ವಿವಾದ:

ನಾಮಕರಣ ಪ್ರಸ್ತಾವನೆ ಶುರುವಾದ ದಿನದಿಂದಲೂ ವಿವಾದ ಉಂಟಾಗಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ‘ನಾನು ಜೀವಂತವಿರುವವರೆಗೆ ರಾಮನಗರ ಜಿಲ್ಲೆ ಹೆಸರು ಬದಲಾಗಲು ಬಿಡುವುದಿಲ್ಲ. ಹೆಸರು ಬದಲಿಸಿದವರು ಸರ್ವ ನಾಶ ಆಗುತ್ತಾರೆ. ರಾಮನ ಹೆಸರಿರುವ ಜಿಲ್ಲೆ ಬದಲಾಯಿಸುವುದು ಕಾಂಗ್ರೆಸ್‌ನ ರಾಮ ವಿರೋಧಿ ಮನೋಭಾವ ತೋರಿಸುತ್ತದೆ’ ಎಂದು ಆರೋಪಿಸಿದ್ದರು.

ಡಿ.ಕೆ.ಶಿವಕುಮಾರ್ ಅವರು, ‘ರಾಮನಗರದ ಜನ ಮೂಲತಃ ಬೆಂಗಳೂರಿನವರೇ. ಬೆಂಗಳೂರು ಎಂಬ ಜಾಗತಿಕ ಖ್ಯಾತಿಯ ಹೆಸರನ್ನು ಜಿಲ್ಲೆಗೆ ಜೋಡಿಸುವುದರಿಂದ ಅಭಿವೃದ್ಧಿ ಮತ್ತು ಯುವ ಜನರಿಗೆ ಅವಕಾಶಗಳು ದೊರೆಯುತ್ತವೆ. ಜಿಲ್ಲೆಯ ಅಭಿವೃದ್ಧಿ ಸಹಿಸಲಾಗದವರು ಇದನ್ನು ವಿರೋಧಿಸುತ್ತಿದ್ದಾರೆ. ಆದರೆ ಮರುನಾಮಕರಣ ನಿರ್ಧಾರಕ್ಕೆ ಸರ್ಕಾರ ಬದ್ಧ’ ಎಂದು ಹೇಳಿ ತಮ್ಮ ನಿರ್ಧಾರ ಸಮರ್ಥಿಸಿಕೊಂಡಿದ್ದರು. ಇದೀಗ ಕೇಂದ್ರದ ತೀರ್ಮಾನದಿಂದ ಈ ಪ್ರಸ್ತಾವನೆಗೆ ತಾತ್ಕಾಲಿಕ ತಡೆ ಬಿದ್ದಂತಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ