ಮಹಾರಾಷ್ಟ್ರ ಬಿಜೆಪಿ ಸರ್ಕಾರದ 1 ಗ್ಯಾರಂಟಿ ಸ್ಕೀಂಗೆ ‘ಅರ್ಧ ಕೊಕ್‌’!

KannadaprabhaNewsNetwork |  
Published : Mar 19, 2025, 02:00 AM IST
ಅಜಿತ್‌ ಪವಾರ್‌ | Kannada Prabha

ಸಾರಾಂಶ

ಕರ್ನಾಟಕದ ಗೃಹ ಲಕ್ಷ್ಮಿ ಯೋಜನೆ ಮಾದರಿಯಲ್ಲಿ, ರಾಜ್ಯದ ಎಲ್ಲಾ ಮಹಿಳೆಯರ ಆರ್ಥಿಕ ಬಲವರ್ಧನೆಗೆ ಜಾರಿಗೊಳಿಸಲಾಗಿದ್ದ ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್‌ ಯೋಜನೆಯನ್ನು ಬಡ ಮಹಿಳೆಯರಿಗಷ್ಟೇ ಸೀಮಿತಗೊಳಿಸಲು ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ನಿರ್ಧರಿಸಿದೆ.

ಮಹಾರಾಷ್ಟ್ರದ 1 ಗ್ಯಾರಂಟಿ ಯೋಜನೆಗೆ ‘ಅರ್ಧ ಕೊಕ್‌’!

--

- ‘ಲಡ್ಕಿ ಬಹಿನ್‌’ ಮಾಸಾಶನ ಇನ್ನು ಶ್ರೀಮಂತರಿಗಿಲ್ಲ

- ಬಡ ಸ್ತ್ರೀಯರಿಗಷ್ಟೆ ₹1500 ಮಾಸಾಶನ: ಡಿಸಿಎಂ

---

- ‘ಲಡ್ಕಿ ಬಹಿನ್‌’ ಸ್ಕೀಂ ಮೂಲಕ ಮಹಿಳೆಯರಿಗೆ 1500 ಮಾಸಾಶನ

- ಮಹಾರಾಷ್ಟ್ರದಲ್ಲಿ ಮತ್ತೆ ಬಿಜೆಪಿ ಕೂಟ ಗೆಲ್ಲಲು ಇದು ಪ್ರಮುಖ ಕಾರಣ

- ಆದರ ಸ್ಕೀಂಗೆ ಭಾರಿ ವೆಚ್ಚ ಆಗುತ್ತಿದ್ದ ಕಾರಣ ಸರ್ಕಾರಕ್ಕೆ ಆರ್ಥಿಕ ಸಂಕಟ

- ಹೀಗಾಗಿ ಇನ್ನು ಶ್ರೀಮಂತರ ಬದಲು ಬಡ ಮಹಿಳೆಯರಿಗಷ್ಟೇ ಮಾಸಾಶನ

- ಆದರೆ ಮಾಸಾಶನವನ್ನು ₹2100ಕ್ಕೆ ಹೆಚ್ಚಿಸುವ ಭರವಸೆ ಬಗ್ಗೆ ಸರ್ಕಾರ ಮೌನ

==

ಮುಂಬೈ: ಕರ್ನಾಟಕದ ಗೃಹ ಲಕ್ಷ್ಮಿ ಯೋಜನೆ ಮಾದರಿಯಲ್ಲಿ, ರಾಜ್ಯದ ಎಲ್ಲಾ ಮಹಿಳೆಯರ ಆರ್ಥಿಕ ಬಲವರ್ಧನೆಗೆ ಜಾರಿಗೊಳಿಸಲಾಗಿದ್ದ ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್‌ ಯೋಜನೆಯನ್ನು ಬಡ ಮಹಿಳೆಯರಿಗಷ್ಟೇ ಸೀಮಿತಗೊಳಿಸಲು ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ನಿರ್ಧರಿಸಿದೆ.

ಇತ್ತೀಚೆಗೆ ಮಂಡನೆಯಾದ ಬಜೆಟ್‌ನಲ್ಲಿ ಯೋಜನೆಗೆ ಪ್ರಸಕ್ತ ವರ್ಷ ಅನುದಾನವನ್ನೂ ಕಡಿತ ಮಾಡಿತ್ತು, ಜೊತೆಗೆ ಚುನಾವಣೆಯಲ್ಲಿ ಘೋಷಿಸಿದ್ದಂತೆ ಮಾಸಿಕ ನೆರವಿನ ಪ್ರಮಾಣವನ್ನು 1500 ರು.ನಿಂದ 2100 ರು.ಗೆ ಹೆಚ್ಚಿಸುವ ಕುರಿತು ಯಾವುದೇ ಪ್ರಸ್ತಾಪವನ್ನೂ ಮಾಡಿರಲಿಲ್ಲ. ಅದರ ಬೆನ್ನಲ್ಲೇ ಇದೀಗ ಯೋಜನೆಯನ್ನು ಸೀಮಿತ ಸಂಖ್ಯೆಯ ಮಹಿಳೆಯರಿಷ್ಟೇ ಜಾರಿಗೊಳಿಸುವ ಘೋಷಣೆಯನ್ನು ಸರ್ಕಾರ ಮಾಡಿದೆ.

ಈ ಕುರಿತು ಸೋಮವಾರ ವಿಧಾನಸಭೆಯಲ್ಲಿ ಮಾತನಾಡಿರುವ ರಾಜ್ಯ ವಿತ್ತ ಸಚಿವ, ಡಿಸಿಎಂ ಅಜಿತ್‌ ಪವಾರ್‌, ‘ಕೆಲ ಸ್ಥಿತಿವಂತರೂ ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಗಡಿಬಿಡಿ ಹಾಗೂ ಗೊಂದಲದಿಂದ ಹೀಗಾಗಿದೆ. ಲಡ್ಕಿ ಬಹಿನ್‌ ಯೋಜನೆಯು ಬಡ ಮಹಿಳೆಯರಿಗಷ್ಟೇ ಸೀಮಿತವಾಗಿದ್ದು, ಇದಕ್ಕೆ ತಕ್ಕ ಬದಲಾವಣೆ ಮಾಡುತ್ತೇವೆ’ ಎಂದರು.

ಇದೇ ವೇಳೆ, ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ ಅವರು, ‘ಈಗಾಗಲೇ ಯೋಜನೆಯಡಿ ಹಣ ಪಡೆದಿರುವವರು ಅದನ್ನು ಮರಳಿಸಬೇಕೆಂದಿಲ್ಲ. ನಾವು ಇದಕ್ಕಾಗಿ ಸಾಕಷ್ಟು ನಿಧಿ ಒದಗಿಸಲಿದ್ದು, ಬಡ ಸ್ತ್ರೀಯರು ಖಚಿತವಾಗಿ ಹಣ ಪಡೆಯುತ್ತಾರೆ’ ಎಂದು ಹೇಳಿದರು.

ಸಾಮಾಜಿಕ ನ್ಯಾಯ ಮತ್ತು ಬುಡಕಟ್ಟು ಕಲ್ಯಾಣ ಇಲಾಖೆಯಿಂದ 10 ಸಾವಿರ ಕೋಟಿ ರು.ವನ್ನು ಲಡ್ಕಿ ಬಹಿನ್‌ ಯೋಜನೆಗೆ ಬಳಸಲಾಗುತ್ತಿದೆ ಎಂಬ ಆರೋಪಕ್ಕೆ ಉತ್ತರಿಸಿದ ಪವಾರ್‌, ವಾರ್ಷಿಕ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಶೇ.40ರಷ್ಟು ನಿಧಿಯನ್ನು ಯೋಜನೆಗೆ ಬಳಸುತ್ತಿರುವುದಾಗಿ ಧೃಡಪಡಿಸಿದರು. ಜೊತೆಗೆ, ‘ಲಡ್ಕಿ ಬಹಿನ್‌ಗೆ ಮಾಡಲಾದ ಖರ್ಚನ್ನು ಹೊರತುಪಡಿಸಿದರೂ ಪರಿಶಿಷ್ಟ ಜಾತಿ ಹಾಗೂ ಪಂಗಡದ ನಿಧಿಯಲ್ಲಿ ಶೇ.18 ಹಾಗೂ 19ರಷ್ಟು ಏರಿಕೆಯಾಗಿದೆ’ ಎಂದರು.

ರಾಜ್ಯದ 21ರಿಂದ 65 ವಯಸ್ಸಿನ ಎಲ್ಲಾ ಮಹಿಳೆಯರಿಗೆ ಮಾಸಿಕ 1,500 ರು. ನೀಡುವ ಲಡ್ಕಿ ಬಹಿನ್‌ ಯೋಜನೆಯನ್ನು 2024ರ ಜುಲೈನಲ್ಲಿ ಆರಂಭಿಸಲಾಗಿತ್ತು. ಇದು ಮಹಾಯುತಿ ಮೈತ್ರಿಕೂಟದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ