ಜಗನ್‌ ಮೇಲೆ ಆಂಧ್ರಪ್ರದೇಶ ಸಿಎಂ ನಾಯ್ಡು ಪ್ರತೀಕಾರ!

KannadaprabhaNewsNetwork |  
Published : Jun 23, 2024, 02:04 AM ISTUpdated : Jun 23, 2024, 04:54 AM IST
ಚಂದ್ರಬಾಬು ನಾಯ್ಡು | Kannada Prabha

ಸಾರಾಂಶ

ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ ಹಿಂದಿನ ಮುಖ್ಯಮಂತ್ರಿ ಹಾಗೂ ವೈಎಸ್ಸಾರ್‌ ಕಾಂಗ್ರೆಸ್‌ ನಾಯಕ ಜಗನ್‌ಮೋಹನ ರೆಡ್ಡಿ ಅವರ ವೈಎಸ್ಸಾರ್‌ ಕಾಂಗ್ರೆಸ್‌ ಪಕ್ಷದ ವಿರುದ್ಧ ‘ಕಟ್ಟಡ ಧ್ವಂಸ’ ಸಮರ ಸಾರಿದೆ.

ಗುಂಟೂರು: ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ ಹಿಂದಿನ ಮುಖ್ಯಮಂತ್ರಿ ಹಾಗೂ ವೈಎಸ್ಸಾರ್‌ ಕಾಂಗ್ರೆಸ್‌ ನಾಯಕ ಜಗನ್‌ಮೋಹನ ರೆಡ್ಡಿ ಅವರ ವೈಎಸ್ಸಾರ್‌ ಕಾಂಗ್ರೆಸ್‌ ಪಕ್ಷದ ವಿರುದ್ಧ ‘ಕಟ್ಟಡ ಧ್ವಂಸ’ ಸಮರ ಸಾರಿದೆ. 

ಗುಂಟೂರು ಸನಿಹದ ತಡೆಪಲ್ಲಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ವೈಎಸ್ಸಾರ್‌ ಕಾಂಗ್ರೆಸ್‌ ಕೇಂದ್ರ ಕಚೇರಿ ಕಟ್ಟಡವನ್ನು ‘ಅಕ್ರಮ ಕಟ್ಟಡ’ ಎಂಬ ದೂರಿನ ಮೇರೆಗೆ ಸರ್ಕಾರ ಧ್ವಂಸಗೊಳಿಸಿದೆ. ತನ್ಮೂಲಕ ಪ್ರತೀಕಾರ ತೀರಿಸಿಕೊಂಡಿದೆ.ಈ ಹಿಂದೆ 2019ರಲ್ಲಿ ಜಗನ್‌ಮೋಹನ ರೆಡ್ಡಿ ಮುಖ್ಯಮಂತ್ರಿ ಆದ ನಂತರ ವಿಜಯವಾಡ ಸನಿಹದ ಉಂಡವಳ್ಳಿಯಲ್ಲಿ ಚಂದ್ರಬಾಬು ನಾಯ್ಡು ನಿರ್ಮಿಸಿದ್ದ ‘ಪ್ರಜಾವೇದಿಕೆ’ ಹೆಸರಿನ ಜನತಾದರ್ಶನ ವೇದಿಕೆಯನ್ನು ವೈಎಸ್ಸಾರ್‌ ಕಾಂಗ್ರೆಸ್‌ ಸರ್ಕಾರ ಧ್ವಂಸ ಮಾಡಿತ್ತು. 

ಜನರ ಅಹವಾಲು ಆಲಿಸಲು ಪ್ರಜಾವೇದಿಕೆಯನ್ನು ನಾಯ್ಡು ತಮ್ಮ ಮನೆ ಆವರಣದಲ್ಲೇ ಕಟ್ಟಿದ್ದರು. ಅದು ತಾತ್ಕಾಲಿಕ ಕಟ್ಟಡವಾಗಿತ್ತು ಹಾಗೂ ಅದನ್ನು ಬೇರೆ ಕಡೆ ಸ್ಥಳಾಂತರ ಕೂಡ ಮಾಡಬಹುದಾಗಿತ್ತು. ಆದರೂ ಜಗನ್‌ ಸರ್ಕಾರ ಅದನ್ನು ಧ್ವಂಸ ಮಾಡಿತ್ತು. ಇದೇ ವೇಳೆ ನಾಯ್ಡು ಮನೆ ಧ್ವಂಸಕ್ಕೂ ‘ಅಕ್ರಮ’ ಎಂಬ ಕಾರಣ ನೀಡಿ ನೋಟಿಸ್‌ ಜಾರಿ ಮಾಡಿತ್ತು. 

ಆದರೆ ಆಂಧ್ರ ಹೈಕೋರ್ಟು ಜಗನ್‌ ನೋಟಿಸ್‌ಗೆ ತಡೆ ನೀಡಿ, ನಾಯ್ಡು ಮನೆಯನ್ನು ಬಚಾವ್‌ ಮಾಡಿತ್ತು.ಈಗ ಇದೇ ಸೇಡಿಗಾಗಿ ಏನೋ ಟಿಡಿಪಿ ನೀಡಿದ ದೂರಿನ ಮೇರೆಗೆ ಗುಂಟೂರು ಸನಿಹದ ಜಗನ್‌ ಪಕ್ಷದ ಕೇಂದ್ರ ಕಚೇರಿಯನ್ನು ನಿರ್ಮಾಣ ಹಂತದಲ್ಲಿ ಇರುವಾಗಲೇ ಮಂಗಳಗಿರಿ- ತಡೆಪಲ್ಲಿ ಮಹಾನಗರ ಪಾಲಿಕೆ (ಎಮ್‌ಟಿಎಮ್‌ಸಿ) ಸಿಬ್ಬಂದಿ ಜೆಸಿಬಿ ಬಳಸಿ ಧ್ವಂಸ ಶನಿವಾರ ಬೆಳಗ್ಗೆಯೇ ಧ್ವಂಸ ಮಾಡಿದ್ದಾರೆ. ‘ಇದು ನೀರಾವರಿ ಇಲಾಖೆಯ ಜಮೀನು’ ಎಂಬ ಟಿಡಿಪಿ ದೂರಿನ ಮೇರೆಗೆ ನಾಯ್ಡು ಸರ್ಕಾರ ಈ ಕ್ರಮ ಕೈಗೊಂಡಿದೆ.

ಆರೋಪ- ಪ್ರತ್ಯಾರೋಪ:ಇದಕ್ಕೆ ಪ್ರತಿಕ್ರಿಯಿಸಿದ ಜಗನ್‌ ‘ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈ ಮೂಲಕ ರಾಜಕೀಯ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾರೆ. ಕಟ್ಟಡ ತೆರವಿಗೆ ಹೈಕೋರ್ಟ್ ತಡೆ ನೀಡಿತ್ತು. ಆದರೂ ಲೆಕ್ಕಿಸದೆ ನಮ್ಮ ಮುಖ್ಯ ಕಚೇರಿಯನ್ನು ಬೀಳಿಸಿ ಸರ್ವಾಧಿಕಾರಿ ವರ್ತನೆ ತೋರಿದ್ದಾರೆ. ಇದರ ಮೂಲಕ ಮುಂದಿನ 5 ವರ್ಷ ಯಾವ ರೀತಿ ಆಡಳಿತ ನಡೆಸಲಿದ್ದಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ, ‘ಇದು ನೀರಾವರಿ ಇಲಾಖೆಯ ಜಾಗದಲ್ಲಿ ನಿರ್ಮಾಣ ಆಗುತ್ತಿದ್ದ ಕಟ್ಟಡ. ಜಗನ್ ಪಕ್ಷ ಅಧಿಕಾರದಲ್ಲಿದ್ದ ವೇಳೆ ಜಾಗವನ್ನು ಅತಿ ಕಡಿಮೆ ಬೆಲೆಗೆ ಗುತ್ತಿಯ ಮೇಲೆ ತೆಗೆದುಕೊಂಡು ಅಕ್ರಮವಾಗಿ ನಿರ್ಮಿಸುತ್ತಿತ್ತು. ಹೀಗಾಗಿ ಟಿಡಿಪಿ ದೂರಿನ ಮೇರೆಗೆ ಇದನ್ನು ಧ್ವಂಸ ಮಾಡಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ. ಟಿಡಿಪಿ ಕೂಡ ಇದೇ ಸ್ಪಷ್ಟನೆ ನೀಡಿದೆ.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ