ಕೂಗಿ ಮಾತನಾಡಬೇಡಿ ಎಂದು ವಕೀಲ ನೆಡುಂಪರಗೆ ಸಿಜೆಐ ಚಂದ್ರಚೂಡ್ ಎಚ್ಚರಿಕೆ ನೀಡಿದ ಪ್ರಸಂಗ ಚುನಾವಣಾ ಬಾಂಡ್ ಕುರಿತ ವಿಚಾರಣೆ ನಡೆಯುತ್ತಿದ್ದ ವೇಳೆ ಗಮನಸೆಳೆದಿದೆ
ನವದೆಹಲಿ: ತಮ್ಮ ಮಾತನ್ನು ಆಲಿಸದೇ ಜೋರಾಗಿ ಮಾತನಾಡುತ್ತಿದ್ದ ಹಿರಿಯ ವಕೀಲ ನೆಡುಂಪರಗೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನಮ್ಮ ಬಳಿ ಕೂಗಿ ಮಾತನಾಡಬೇಡಿ ಎಂದು ಎಚ್ಚರಿಕೆ ನೀಡಿದ ಘಟನೆ ಸೋಮವಾರ ನಡೆಯಿತು.
ಚುನಾವಣಾ ಬಾಂಡ್ ಕುರಿತ ವಿಚಾರಣೆ ವೇಳೆ ಪ್ರಕರಣದ ಯಾವುದೇ ಅರ್ಜಿದಾರರ ಪರ ವಕೀಲಿಕೆ ಮಾಡದೇ ಇದ್ದರೂ ಮಧ್ಯಪ್ರವೇಶಿಸಿದ ನೆಡುಂಪರ ‘ಚುನಾವಣಾ ಬಾಂಡ್ ನೀತಿಗೆ ಸಂಬಂಧಿಸಿದ ವಿಷಯ.
ಈ ವಿಷಯದಲ್ಲಿ ಕೋರ್ಟ್ ಮಧ್ಯಪ್ರವೇಶ ಸರಿಯಲ್ಲ. ಹೀಗಾಗಿಯೇ ಈ ವಿಷಯದಲ್ಲಿ ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಜನತೆ ಅಸಮಾಧಾನ ಹೊಂದಿದ್ದಾರೆ’ ಎಂದರು.
ಈ ವೇಳೆ ಸಿಜೆಐ ಏನೋ ಹೇಳಲು ಹೋದರಾದರೂ ಅದನ್ನು ಅಲಿಸದ ನೆಡುಂಪರ, ನಾನು ಈ ದೇಶದ ಪ್ರಜೆ ಎಂದು ಜೋರಾಗಿ ಕೂಗಿದರು.
ಈ ವೇಳೆ ಸ್ವಲ್ಪ ಜೋರಾದ ಧ್ವನಿಯಲ್ಲೇ ಮಾತನಾಡಿದ ನ್ಯಾ.ಚಂದ್ರಚೂಡ್, ‘ಒಂದು ನಿಮಿಷ ಇಲ್ಲಿ ಕೇಳಿ.
ಇಲ್ಲಿಗೆ ಮನಸ್ಸಿಗೆ ತೋಚಿದ್ದನ್ನು ಮಾತನಾಡುವ ಸ್ಥಳವಲ್ಲ. ಇದು ಕೋರ್ಟ್. ನಮ್ಮ ಪೀಠದ ಬಳಿ ಕೂಗಿ ಮಾತನಾಡುವುದು ನಿಲ್ಲಿಸಿ’ ಎಂದು ಎಚ್ಚರಿಸಿದರು.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.