ನವದೆಹಲಿ: 2022-23ನೇ ಸಾಲಿನಲ್ಲಿ ದೇಶಾದ್ಯಂತ ಸಾಮುದಾಯಿಕ ಸಹಕಾರದಿಂದಾಗಿ 59,634 ಬಾಲ್ಯವಿವಾಹಗಳನ್ನು ತಡೆಯಲಾಗಿದೆ ಎಂದು ಸಂಶೋಧನಾ ವರದಿಯೊಂದು ತಿಳಿಸಿದೆ.
ಅದರಲ್ಲಿ ತಿಳಿಸಿರುವಂತೆ ದೇಶಾದ್ಯಂತ 17 ರಾಜ್ಯಗಳ 265 ಜಿಲ್ಲೆಗಳಲ್ಲಿ 9551 ಬಾಲ್ಯವಿವಾಹಗಳಿಗೆ ಸಂಬಂಧಪಟ್ಟ ಪ್ರಕರಣಗಳು ಈ ಅವಧಿಯಲ್ಲಿ ದಾಖಲಾಗಿವೆ. ಅದರ ಪೈಕಿ ಪಶ್ಚಿಮ ಬಂಗಾಳದಲ್ಲಿ ಅತಿಹೆಚ್ಚು ಪ್ರಕರಣಗಳು ದಾಖಲಾಗಿದ್ದು (32%) ಬಿಹಾರ, ಅಸ್ಸಾಂ, ಒಡಿಶಾ ಮತ್ತು ಮಹಾರಾಷ್ಟ್ರ ಪಟ್ಟಿಯಲ್ಲಿ ಅಗ್ರ 5 ಸ್ಥಾನಗಳನ್ನು ಅಲಂಕರಿಸಿವೆ.
ಜೊತೆಗೆ ಬಿಹಾರದಲ್ಲಿ ಅತಿಹೆಚ್ಚು ಬಾಲ್ಯವಿವಾಹಗಳನ್ನು ನಿಲ್ಲಿಸಲಾಗಿದ್ದು (31%), ಪಶ್ಚಿಮ ಬಂಗಾಳ (11%), ಉತ್ತರ ಪ್ರದೇಶ (11%), ಜಾರ್ಖಂಡ್ (10%) ಮತ್ತು ರಾಜಸ್ಥಾನ (10%) ನಂತರದ ಸ್ಥಾನದಲ್ಲಿವೆ.ಈ ಅವಧಿಯಲ್ಲಿ ರಾಜಸ್ಥಾನದಲ್ಲಿ (29%) ಅತಿಹೆಚ್ಚು ಬಾಲ್ಯವಿವಾಹಗಳಿಗೆ ನ್ಯಾಯಾಲಯ ತಡೆ ನೀಡಿದೆ. ಮಕ್ಕಳ ಹಿತರಕ್ಷಣಾ ಸಮಿತಿಯಿಂದ ಮಹಾರಾಷ್ಟ್ರದಲ್ಲಿ (21%) ಅತಿಹೆಚ್ಚು ಬಾಲ್ಯವಿವಾಹಗಳಿಗೆ ತಡೆ ನೀಡಿದ್ದರೆ, ಸಮುದಾಯದ ಸಹಕಾರದಿಂದ ಬಿಹಾರದಲ್ಲಿ ಶೇ.36ರಷ್ಟು ಬಾಲ್ಯವಿವಾಹಗಳನ್ನು ನಿಲ್ಲಿಸಲಾಗಿದೆ.
ಈ ಪೈಕಿ ಶೇ.60ರಷ್ಟು ಯುವತಿಯರು 15-18 ವಯಸ್ಸಿನವರಾಗಿದ್ದರೆ, ಶೇ.26ರಷ್ಟು ಯುವತಿಯರು 10-14 ವಯಸ್ಸಿನವರಾಗಿದ್ದಾರೆ. ಅಲ್ಲದೆ ಅತಿಹೆಚ್ಚು ಮಹಿಳಾ ಸಾಕ್ಷರತೆಯನ್ನು ಹೊಂದಿರುವ ಕೇರಳದಲ್ಲಿ ಕೇವಲ ಶೇ.6ರಷ್ಟು ಬಾಲ್ಯವಿವಾಹ ದಾಖಲಾಗಿದ್ದರೆ, ಅತೀ ಕಡಿಮೆ ಮಹಿಳಾ ಸಾಕ್ಷರತೆಯನ್ನು ಹೊಂದಿರುವ ಬಿಹಾರದಲ್ಲಿ ಶೇ.61ರಷ್ಟು ಬಾಲ್ಯವಿವಾಹ ದಾಖಲಾಗುವುದರೊಂದಿಗೆ ಅಗ್ರಸ್ಥಾನದಲ್ಲಿದೆ.